ಮೈಸೂರು: ರಾಜ್ಯಸರ್ಕಾರ ನಾಲ್ಕು ವರ್ಷ ಪೂರೈಸಿರುವ ಹಿನ್ನೆಲೆ ಜೂನ್ 3 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಸೌಲಭ್ಯ ವಿತರಣೆ ಸಂಭ್ರಮ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಹತ್ತುಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಕೆ. ಮರೀಗೌಡ ಹೇಳಿದರು.
ಮಂಗಳವಾರ ಶ್ರೀರಾಂಪುರ ಅಶ್ವಿನಿ ಕಲ್ಯಾಣಮಂಟಪದಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಲ್ಲಿ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾತಿನಂತೆ ಎಲ್ಲಾ ಭರವಸೆಗಳನ್ನು ಈಡೇರಿಸುವುದರೊಂದಿಗೆ ಜನರ ಮನ ಮುಟ್ಟಿದೆ. ರಾಜ್ಯ ಅಭಿವೃದ್ಧಿಯಲ್ಲಿ ದೇಶದಲ್ಲಿಯೇ ಮಾದರಿಯಾಗಿದ್ದು, ಮತ್ತೂಮ್ಮೆ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬರಲಿದೆ ಎಂದರು.
ಸಿದ್ದರಾಮಯ್ಯ 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಾರೆ. ಆದ್ದರಿಂದ ಈ ಸಮಾವೇಶಕ್ಕೆ ಜನರನ್ನು ಕರೆತರಲು ಪ್ರತಿ ಹಳ್ಳಿಗೂ ಬಸ್ಸುಗಳನ್ನು ಕಳುಹಿಸಲಾಗುವುದು. ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಮಾವೇಶ ಯಶಸ್ವಿ ಗೊಳಿಸಬೇಕು ಎಂದರು.
ಮಾಜಿ ಶಾಸಕ ಎಂ. ಸತ್ಯನಾರಾಯಣ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಿದ್ದರಾಮಯ್ಯರ ಕೊಡುಗೆ ಅಪಾರವಾಗಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಜನರ ಮನಸ್ಸಿನಲ್ಲಿ ಸಿದ್ದರಾಮಯ್ಯ ಇರುವುದರಿಂದ 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸಲು ಎಲ್ಲರೂ ಮನವೊಲಿಸ ಬೇಕು ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ ಮಾತನಾಡಿ, ಸಿದ್ದರಾಮಯ್ಯರು ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ. ಯಾವುದೇ ಭ್ರಷ್ಟಾಚಾರ, ಹಗರಣಗಳಿಲ್ಲದೆ ಜನಪರ ಕಾರ್ಯಕ್ರಮಗಳನ್ನು ಮಾಡುತ್ತ ದೇಶದಲ್ಲಿಯೇ ಮಾದರಿ ರಾಜ್ಯ ಮಾಡಿದ್ದಾರೆ ಎಂದರು. ಜಿಪಂ ಸದಸ್ಯರಾದ ಅರುಣ್‌ಕುಮಾರ್, ರಾಕೇಶ್ ಪಾಪಣ್ಣ, ನಗರ ಪಾಲಿಕೆ ಸದಸ್ಯ ಜೆ.ಎಸ್. ಜಗದೀಶ್, ತಾಪಂ ಸದಸ್ಯ ಎಂ.ಎಸ್.ಎಸ್. ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.