Advertisement

C.P.Yogeshwara ಕಿಡಿ: ರಾಜಕಾರಣಕ್ಕೆ ನಿಖಿಲ್‌ ತರಲು ಯತ್ನ, ನನಗೆ ಅನ್ಯಾಯ…

11:53 PM Oct 21, 2024 | Team Udayavani |

ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸಲೇ ಬೇಕೆಂದು ಪಟ್ಟು ಹಿಡಿದಿರುವ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌, ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಎಚ್‌ಡಿಕೆ ತಮ್ಮ ಪುತ್ರ ನಿಖಿಲ್‌ರನ್ನು ಸಕ್ರಿಯವಾಗಿ ರಾಜಕೀಯಕ್ಕೆ ತರಲು ಪ್ರಯತ್ನ ಮಾಡಿದರು. ಅದರಿಂದ ನನಗೆ ಬಹಳ ತೊಂದರೆ ಆಯಿತು ಎಂದು ಹೇಳಿದ್ದಾರೆ. ಅಲ್ಲದೆ, ಈ ಕ್ಷಣದವರೆಗೂ ಎನ್‌ಡಿಎ ಅಭ್ಯರ್ಥಿ ಆಗಲು ಉತ್ಸುಕನಾಗಿದ್ದೇನೆ ಎಂದೂ ಸಿಪಿವೈ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ಬೆಳಗ್ಗೆ ಜೆಡಿಎಸ್‌ ಜಿಲ್ಲಾಧ್ಯಕ್ಷ ಮಂಜುನಾಥ ಫೋನ್‌ ಮಾಡಿ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಿದ್ದಾರೆ. ಆಯ್ತಪ್ಪ ಒಳ್ಳೇದಾಗಲಿ ಎಂದು ಹೇಳಿದ್ದೇನೆ. ನಾನು ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿಲ್ಲ. ಅದರ ಆವಶ್ಯಕತೆ ಇಲ್ಲ. ಅಂತಹ ಚರ್ಚೆಯೂ ಆಗಿಲ್ಲ. ಕುಮಾರಸ್ವಾಮಿ ಯಾಕೆ ಈ ಆರೋಪ ಮಾಡಿದರೋ ಗೊತ್ತಿಲ್ಲ ಎಂದರು.

ವೈಯಕ್ತಿಕವಾಗಿ ಜೆಡಿಎಸ್‌ ಚಿಹ್ನೆ ಮೇಲೆ ಸ್ಪರ್ಧೆ ಮಾಡಲು ತೊಂದರೆಯಿಲ್ಲ. ಆದರೆ ನಮ್ಮ ಕಾರ್ಯಕರ್ತರು ಒಪ್ಪುತ್ತಿಲ್ಲ. ಬಹಳ ವರ್ಷಗಳಿಂದ ಪರ- ವಿರೋಧ ಮಾಡಿಕೊಂಡು ಬಂದಿದ್ದೇವೆ. ಕಾರ್ಯಕರ್ತರ ನಿಲುವಿನ ಮೇಲೆ ನಾನು ನಿಂತಿದ್ದೇನೆ ಎಂದರು.

ಸ್ಪರ್ಧೆ ಮಾಡುವೆ: ಸಿಪಿವೈ
ನನಗೆ ಸಾರ್ವಜನಿಕ ಬದುಕಿನಲ್ಲಿ ಅನ್ಯಾಯ ಆಯಿತು. ಮುಂದೆ ಏನಾಗುತ್ತದೋ ಕಾದು ನೋಡೋಣ. ನಾನಂತೂ ಸ್ಪರ್ಧೆ ಮಾಡುತ್ತೇನೆ. ಬಿಜೆಪಿಯೋ, ಎನ್‌ಡಿಎನೋ ಎನ್ನು ವುದು ತಿರ್ಮಾನ ಆಗಿಲ್ಲ. ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದರು.

Advertisement

ಕಾಂಗ್ರೆಸ್‌ ನಾಯಕರ ಭೇಟಿಯಾಗಿಲ್ಲ
ಕುಮಾರಸ್ವಾಮಿ ನನ್ನ ಮೇಲೆ ಅನಾವಶ್ಯಕವಾಗಿ ಆರೋಪ ಮಾಡುವ ಅಗತ್ಯ ಇಲ್ಲ. ಅವರು ಬೇಕಾದರೆ ತಮ್ಮ ಮಗನಿಗೇ ಕೊಡಲಿ. ಆದರೆ ಕಾಂಗ್ರೆಸ್‌ ನಾಯಕರ ಭೇಟಿ ಮಾಡಿದ್ದೇನೆಂದು ಅನಾವಶ್ಯಕ ಆರೋಪ ಮಾಡುವುದು ಬೇಡ. ನಾನು ಇಲ್ಲಿಯವರೆಗೆ ಕಾಂಗ್ರೆಸ್‌ನ ಯಾವ ನಾಯಕರನ್ನೂ ಭೇಟಿ ಮಾಡಿಲ್ಲ. ಭೇಟಿ ಮಾಡಿದರೆ ತಪ್ಪೇನಿಲ್ಲ ಎಂದು ಯೋಗೇಶ್ವರ್‌ ಹೇಳಿದರು.

ಬಿಎಸ್‌ವೈ ಹೇಳಿಕೆ ದುರುದ್ದೇಶಪೂರಿತ
ಚನ್ನಪಟ್ಟಣ ಜೆಡಿಎಸ್‌ ಕ್ಷೇತ್ರ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಯೋಗೇಶ್ವರ್‌, ಅವರು ಈ ಸಂದರ್ಭದಲ್ಲಿ ಇಂಥ ಹೇಳಿಕೆ ನೀಡುವ ಅಗತ್ಯವಿರಲಿಲ್ಲ. ಅವರ ಹೇಳಿಕೆ ದುರುದ್ದೇಶಪೂರಿತವಾಗಿದೆ ಎಂದರು. ಯಡಿಯೂರಪ್ಪನವರ ಮೂಲಕ ಯಾರೋ ಆ ಹೇಳಿಕೆ ಕೊಡಿಸಿದ್ದಾರೆ. ಅದು ಕುಮಾರಸ್ವಾಮಿಯವರ ಕ್ಷೇತ್ರ ನಿಜವಾದರೂ, ಅವರು ತ್ಯಾಗಕ್ಕೆ ದೊಡ್ಡ ಮನಸ್ಸು ಮಾಡಬಹುದಿತ್ತು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next