ಹೊಸದಿಲ್ಲಿ: ನಕಲಿ ಬಾಂಬ್ ಬೆದರಿಕೆಗಳನ್ನು ಹಾಕಿದ್ದಕ್ಕಾಗಿ ದೆಹಲಿಯ 25 ವರ್ಷದ ನಿರುದ್ಯೋಗಿ ವ್ಯಕ್ತಿಯೊಬ್ಬರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ವಿಮಾನಯಾನ ಸಂಸ್ಥೆಗಳಿಗೆ ಇಂತಹ ಸತತ ಬೆದರಿಕೆಗಳು ಬಂದ ಘಟನೆಯಲ್ಲಿ ಇದು ಎರಡನೇ ಬಂಧನವಾಗಿದೆ.
ವಿಮಾನಗಳಿಗೆ ಬೆದರಿಕೆ ಕರೆಗಳ ವರದಿಗಳು ಬರುತ್ತಿರುವುದನ್ನು ಟಿವಿಯಲ್ಲಿ ನೋಡಿದ ನಂತರ ಜನರ ಗಮನ ಸೆಳೆಯಲು ಬೆದರಿಕೆ ಹಾಕಿದ್ದಾಗಿ ಬಂಧಿತ ವ್ಯಕ್ತಿ ಒಪ್ಪಿಕೊಂಡಿದ್ದಾನೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 14 ರಿಂದ 275 ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದಿವೆ. ಘಟನೆಗೆ ಸಂಬಂಧಿಸಿ ಮುಂಬೈ ಪೊಲೀಸರು ಕಳೆದ ವಾರ 17 ವರ್ಷದ ಯುವಕನನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು.
ರಾಜಧಾನಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಮತ್ತು ಶನಿವಾರ ಮುಂಜಾನೆ ನಡುವೆ ಸಾಮಾಜಿಕ ಮಾಧ್ಯಮ ಖಾತೆಯಿಂದ ಎರಡು ಬೆದರಿಕೆ ಸಂದೇಶಗಳು ಬಂದಿವೆ ಎಂದು ದೆಹಲಿ ಪೊಲೀಸರು ಶನಿವಾರ (ಅ.26) ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಈ ಖಾತೆಯು ಪಶ್ಚಿಮ ದೆಹಲಿಯ ಉತ್ತಮ್ ನಗರ ಪ್ರದೇಶದ ರಾಜಪುರಿ ಮೂಲದ ಶುಭಂ ಉಪಾಧ್ಯಾಯ ಎಂಬುವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಉಪಾಧ್ಯಾಯ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಟಿವಿಯಲ್ಲಿ ಇದೇ ರೀತಿಯ ಕರೆಗಳ ವರದಿಗಳನ್ನು ನೋಡಿದ ನಂತರ ಗಮನ ಸೆಳೆಯಲು ಬೆದರಿಕೆ ಹಾಕಿದ್ದಾರೆ ಎಂದು ಬಹಿರಂಗಪಡಿಸಿದ್ದಾನೆ.