ರಾಮದುರ್ಗ: ಈ ಭೂಮಿಯಲ್ಲಿ ಯಾವುದೂ ಶಾಶ್ವತವಲ್ಲ. ಉಳಿವುದೊಂದೇ ಜೀವಾತ್ಮ. ಅದನ್ನು ಸದಾ ಸಂತೋಷವಾಗಿರಿಸುವ ಏಕೈಕ ಅಸ್ತ್ರವೆಂದರೆ ಆಧ್ಯಾತ್ಮ ಎಂದು ತೊಂಡಿಕಟ್ಟಿ ಗಾಳೇಶ್ವರ ಮಠದ ಶ್ರೀ ಅಭಿನವ ವೆಂಕಟೇಶ ಮಹಾರಾಜರು ಹೇಳಿದರು.
ಪಟ್ಟಣದ ಮಹಾಂತೇಶ ನಗರದಲ್ಲಿ ರಾಜೇಂದ್ರ ಮುತ್ಯಾರ ಪುಣ್ಯಾಶ್ರಮದಲ್ಲಿ ಶ್ರೀ ಬಸವರಾಜ ಮುತ್ಯಾರ 24ನೇ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡ ಅನುಭಾವ ಚಿಂತನೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸನ್ಮಾರ್ಗಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಂಸಾರದ ಸಾಗರದಲ್ಲಿ ಅನೇಕ ತಾಪತ್ರಯಗಳು ಸಾಮಾನ್ಯ. ಆ ತಾಪತ್ರಯಗಳು ಅಧ್ಯಾತ್ಮ ಚಿಂತನೆಯಿಂದ ದೂರವಾಗುತ್ತವೆ ಎಂದರು.
ಬಸವರಾಜ ಮುತ್ಯಾರು ಪವಾಡ ಪುರುಷರು. ಮನುಕುಲದ ಒಳತಿಗಾಗಿ ತಮ್ಮ ಜೀವನವನ್ನೇ ಸವೆಸಿದ್ದಾರೆ. ಕಳೆದ 24 ವರ್ಷಗಳಿಂದ ಅವರ ಪುಣ್ಯಸ್ಮರಣೋತ್ಸವ ನಿಮಿತ್ಯ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಪ್ರಶಸ್ತಿ ಪ್ರದಾನ ಹಾಗೂ ಬಡ ವಿದ್ಯಾರ್ಥಿಗಳಿಗೆ ವಸ್ತ್ರದಾನದ ಜೊತೆಗೆ ಸಾಮೂಹಿಕ ವಿವಾಹ ಮಾಡುತ್ತಿರುವ ರಾಜೇಂದ್ರ ಶಿವಯೋಗಿಗಳು ಕಾರ್ಯ ಅವಿಸ್ಮರಣೀಯ ಎಂದು ಬಣ್ಣಿಸಿದರು.
ಸಾನ್ನಿಧ್ಯ ವಹಿಸಿದ್ದ ರಾಜೇಂದ್ರ ಶಿವಯೋಗಿಗಳು ಮಾತನಾಡಿ, ನಾನು ಎಂಬ ಅಹಂಕಾರ ಮನಸ್ಸಿನಿಂದ ದೂರ ಇದ್ದರೆ ಮಾತ್ರ ನೆಮ್ಮದಿಯ ಬದುಕು ಸಾಧ್ಯವಿದೆ. ಆಧ್ಯಾತ್ಮ ಎಂದರೆ ನಮ್ಮೊಳಗಿರುವ ಆತ್ಮನಿಗೆ ಸಂಬಂಧಿಸಿದ ವಿಚಾರ. ಆತ್ಮ ತತ್ವ, ಬ್ರಹ್ಮ ತತ್ವದ ಸಿದ್ದಾಂತಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅಗತ್ಯವಿದೆ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ: ರಾಜೇಂದ್ರ ಮುತ್ಯಾರ ಪುಣ್ಯಾಶ್ರಮದಿಂದ ತೊಂಡಿಕಟ್ಟಿ ಅವಧೂತ ಗಾಳೇಶ್ವರ ಮಠದ ಶ್ರೀ ಅಭಿನವ ವೆಂಕಟೇಶ ಮಹಾರಾಜರಿಗೆ “ಸನ್ಮಾಗಿ ಪ್ರಶಸ್ತಿ, ತೋರಣಗಟ್ಟಿ ಸಾಹಿತಿ ಕೆ.ವೈ.ಹುಣಶಿಕಟ್ಟಿ ಅವರಿಗೆ ರಾಜೇಂದ್ರ ಪ್ರಶಸ್ತಿ ಹಾಗೂ ಸತ್ಸಂಗಿ ಗೀತಾ ಆರಿಬೆಂಚಿ ಅವರಿಗೆ ಅಕ್ಕಮಹಾದೇವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ 12 ಬಡ ವಿದ್ಯಾರ್ಥಿಗಳಿಗೆ ವಸ್ತ್ರದಾನ ಮಾಡಲಾಯಿತು. ಸುನ್ನಾಳದ ಪಂಡಿತ ಪುಟ್ಟರಾಜ ಸಂಗೀತ ಶಾಲೆಯ ಮಕ್ಕಳಿಂದ ಸಂಗೀತ ಕಚೇರಿ ನಡೆಯಿತು. ಶಿವಯೋಗಿ ಅಣ್ಣಾನವರ ಸ್ವಾಗತಿಸಿದರು. ಶಿವ ಮೋಟೆ ನಿರೂಪಿಸಿದರು. ಸಿದ್ದು ಮೋಟೆ ವಂದಿಸಿದರು.