ಧಾರವಾಡ: ಜಿಪಂ ಸಿಇಓ ಸ್ನೇಹಲ್ ರಾಯಮಾನೆ ಹಾಗೂ ಹುಬ್ಬಳ್ಳಿ ತಾಪಂ ಇಒ ರಾಮಚಂದ್ರ ಹೊಸಮನಿ ವರ್ಗಾವಣೆ ಹಾಗೂ ಅಮಾನತಿಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಆಹೋರಾತ್ರಿ ಧರಣಿ ಕೈಗೊಂಡಿದ್ದ ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಸೇರಿದಂತೆ ಜಿಪಂ ಸದಸ್ಯರ ಧರಣಿ ತಾತ್ಕಾಲಿಕವಾಗಿ ಗುರುವಾರ ಅಂತ್ಯಗೊಂಡಿತು. ಹೈಡ್ರಾಮಾಕ್ಕೆ ವೇದಿಕೆ: ಜಿಪಂ ಸಭಾಂಗಣದಲ್ಲಿ ಧರಣಿ ಕೈಗೊಂಡಿದ್ದ ಸದಸ್ಯರು ಗುರುವಾರ ಜಿಪಂ ಸಿಇಒ ಸ್ನೇಹಲ್ ಕಚೇರಿ ಎದುರೇ ಧರಣಿ ಮುಂದುವರಿಸಿದರು. ಬೆಂಬಲ ಕೊಡಲು ಬಂದ ತಾಪಂ ಅಧ್ಯಕ್ಷ-ಸದಸ್ಯರು ಹಾಗೂ ಗ್ರಾಪಂ ಅಧ್ಯಕ್ಷರು, ಸದಸ್ಯರನ್ನು ಜಿಪಂ ಮುಖ್ಯ ದ್ವಾರದ ಬಳಿಯೇ ಪೊಲೀಸರು ತಡೆದರು. ಸದಸ್ಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ಜಿಪಂ ಸದಸ್ಯರೊಂದಿಗೆ ಬಂದ ಅಧ್ಯಕ್ಷೆ ಚೈತ್ರಾ ಶಿರೂರ ಅವರನ್ನು ಒಳಗಡೆ ಬಿಡುವಂತೆ ಹೇಳಿದರು. ಆದರೆ ಪೊಲೀಸರು ಮಾತ್ರ ಯಾರನ್ನೂ ಒಳಬಿಡದಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ನೀಡುತ್ತಿದಂತೆಯೇ ಕೆರಳಿದ ಜಿಪಂ ಸದಸ್ಯರು, ಜಿಪಂ ಕಚೇರಿಗೆ ಬೀಗ ಹಾಕುವುದಾಗಿ ಎಚ್ಚರಿಸಿದರು. ಕೊನೆಗೆ ಪೊಲೀಸರು, ಧರಣಿಗೆ ಬೆಂಬಲ ಕೊಡಲು ಬಂದ ಸದಸ್ಯರನ್ನು ಜಿಪಂ ಕಚೇರಿ ಆವರಣದ ಒಳಗಡೆ ಬಿಟ್ಟರು.
ಮನವೊಲಿಕೆ: ವಾಜಪೇಯಿ ಆರೋಗ್ಯ ಸ್ಥಿತಿ ಚಿಂತಾಜನಕ ಇರುವ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆಯೇ ಧರಣಿ ಸ್ಥಳಕ್ಕೆ ಆಗಮಿಸಿದ ಶಾಸಕರಾದ ಸಿ.ಎಸ್. ಶಿವಳ್ಳಿ, ಅಮೃತ ದೇಸಾಯಿ ಹಾಗೂ ಶ್ರೀನಿವಾಸ ಮಾನೆ ಅವರು ಧರಣಿ ನಿರತರ ಮನವೊಲಿಸುವ ಕೆಲಸ ಮಾಡಿದರು. ಈ ಹೋರಾಟ ಯಶಸ್ವಿ ಆಗಲಿದೆ. ಆದರೆ ತಾಳ್ಮೆ ಇರಲಿ. ಸದ್ಯಕ್ಕೆ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಶಾಸಕರ ಭರವಸೆಗೆ ಮಣಿದ ಸದಸ್ಯರು, ಶಾಸಕರು ಮುಂದೆ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ಹೇಳಿ ತಮ್ಮ ಅಹೋರಾತ್ರಿ ಧರಣಿ ಹಿಂಪಡೆಯುತ್ತಿರುವ ಬಗ್ಗೆ ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಪ್ರಕಟಿಸಿದರು.