ಬೆಂಗಳೂರು: ಚಿತಾಗಾರಗಳ ಬಳಿ ಮೃತದೇಹಗಳ ಪೂಜೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ!-ಇದನ್ನು ಸ್ವತಃ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಮೃತದೇಹಗಳ ಪೂಜೆಗೆ ಹೆಚ್ಚು ಸಮಯ ವ್ಯಯವಾಗುತ್ತಿದೆ. ಇದು ಚಿತಾಗಾರಗಳ ಬಳಿ ದಟ್ಟಣೆಗೆ ಕಾರಣವಾಗುತ್ತಿದೆ. ಹೀಗಾಗಿ, ಪೂಜೆ ಮಾಡುವ ಸಮಯಕ್ಕೆ ಬ್ರೇಕ್ ಹಾಕಿ ಆ ಸಮಯದಲ್ಲಿ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಪಾದರಾಯನಪುರ, ಹೆಬ್ಟಾಳ ಹಾಗೂ ಮೇಡಿ ಅಗ್ರಹಾರ ವಿದ್ಯುತ್ ಚಿತಾಗಾರಗಳಿಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದರು. ಎಲ್ಲ ಚಿತಾಗಾರಗಳ ಬಳಿ ಆ್ಯಂಬುಲೆನ್ಸ್‌ಗಳು ಸಾಲುಗಟ್ಟಿ ನಿಂತಿರುತ್ತವೆ. ಅಂತ್ಯಕ್ರಿಯೆ ವಿಳಂಬವಾಗುತ್ತಿದೆ. ಚಿತಾಗಾರದ ಸಿಬ್ಬಂದಿ ಅಂತ್ಯಕ್ರಿಯೆ ನೆರವೇರಿಸಲು ಹಣಕ್ಕೆ ಬೇಡಿಕೆ ಇರಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ವಸ್ತುಸ್ಥಿತಿ ಪರಿಶೀಲಿಸಿದ್ದೇನೆ. ಶವಸಂಸ್ಕಾರ ನೆರವೇರಿಸಲು ಬರುವವರು ರಾಹುಕಾಲ ನೋಡಿಕೊಂಡು ಅಂತ್ಯಕ್ರಿಯೆಗೆ ಮೃತದೇಹಗಳನ್ನು ತರುತ್ತಿದ್ದಾರೆ. ದಟ್ಟಣೆಗೆ ಇದು ಕೂಡ ಕಾರಣ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ನಿತ್ಯ ಸರಾಸರಿ 30 ಸೋಂಕಿತರ ಮೃತದೇಹಗಳು ಹಾಗೂ 60 ಕೊರೊನೇತರ ಮೃತದೇಹಗಳು ವಿದ್ಯುತ್ ಚಿತಾಗಾರಗಳಿಗೆ ಬರುತ್ತಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 12 ವಿದ್ಯುತ್ ಚಿತಾಗಾರಗಳಿವೆ. ಈ ಪೈಕಿ ಪಾದರಾಯನಪುರ ಚಿತಾಗಾರ ದುರಸ್ತಿ ಕಾಮಗಾರಿ ಮಂದಗತಿಯಲ್ಲಿ ಸಾಗಿಸುತ್ತಿರುವ ಬಗ್ಗೆ ದೂರು ಕೇಳಿಬರುತ್ತಿದೆ. ಆ ಹಿನ್ನೆಲೆಯಲ್ಲಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ, ಸೆ. 7ಕ್ಕೆ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಸೋಂಕಿಗೆ ಬಲಿಯಾದ ವ್ಯಕ್ತಿಗಳ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸುವ ಸಿಬ್ಬಂದಿಗೆ ಪ್ರಸ್ತುತ 500 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಇದರೊಂದಿಗೆ ಅವರ ವೇತನವನ್ನೂ 6 ಸಾವಿರದಿಂದ 18 ಸಾವಿರ ರೂ. ಗೆ ಹೆಚ್ಚಿಸಲಾಗಿದೆ. ಅಗತ್ಯಬಿದ್ದರೆ ಚಿತಾಗಾರಗಳಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವಂತೆ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ಚಿತಾಗಾರಗಳು ಮತ್ತು ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸಂಬಂಧ ಯಾವುದೇ ದೂರುಗಳು ಬಂದರೂ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವುದು ಎಂದು ತಿಳಿಸಿದರು.
ಎಲ್ಲ ಚಿತಾಗಾರಗಳಲ್ಲಿ ಶುಚಿತ್ವ ಕಾಪಾಡಲಾಗಿದ್ದು, ಶೌಚಾಲಯ, ಸ್ನಾನದ ಕೊಠಡಿ, ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ, ಹೊಸದಾಗಿ 9 ವಿದ್ಯುತ್ ಚಿತಾಗಾರಗಳ ನಿರ್ಮಾಣಕ್ಕೆ ಕಂದಾಯ ಇಲಾಖೆ ಜಾಗ ಗುರುತಿಸಿ, ಬಿಬಿಎಂಪಿಗೆ ಹಸ್ತಾಂತರಿಸಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ವಿದ್ಯುತ್ ಚಿತಾಗಾರಗಳ ಸಂಖ್ಯೆ 21ಕ್ಕೆ ಏರಿಕೆಯಾಗಲಿದ್ದು, ಅಂತ್ಯಕ್ರಿಯೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಶ್ಚಿಮ ವಲಯ ಮುಖ್ಯ ಎಂಜಿನಿಯರ್ ನಾಗರಾಜ್, ಮುಖ್ಯ ಆರೋಗ್ಯಾಧಿಕಾರಿ ಡಾ.ಮನೋರಂಜನ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.