Advertisement

ದೇವಾಲಯ, ಮಂಟಪಗಳಿಗೆ ಕಳೆತಂದ ಎನ್ನೆಸ್ಸೆಸ್‌

12:44 PM Mar 08, 2017 | Team Udayavani |

ಹುಣಸೂರು: ತಾಲೂಕಿನ ಮರದೂರು ಗ್ರಾಮದ ಪಕ್ಕದಲ್ಲಿದ್ದರೂ ಜನರ ನಿರ್ಲಕ್ಷ್ಯದಿಂದ ಗಿಡಗಂಟಿಗಳು ಬೆಳೆದು ಪಾಳುಬಿದ್ದಿದ್ದ ವೇಣುಗೋಪಾಲಸ್ವಾಮಿ, ಮಲ್ಲೇಶ್ವರ ದೇವಾಲಯ, ಲಕ್ಷ್ಮಣತೀರ್ಥ ನದಿದಂಡೆ ಯಲ್ಲಿರುವ ಮಂಟಪಗಳನ್ನು ಸ್ವತ್ಛಗೊಳಿಸಿ ಬಣ್ಣ ಬಳಿದುಕೊಂಡು ಯುಗಾದಿ ಆಚರಣೆಗೆ ಸಿದ್ಧವಾಗಿ ನಿಂತಿವೆ. 

Advertisement

ಇದಕ್ಕೆ ಕಾರಣವಾಗಿದ್ದು ಮೈಸೂರಿನ ಕುವೆಂಪು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್‌ ಘಟಕದ ವಿದ್ಯಾರ್ಥಿಗಳು. ಮೈಸೂರಿನ ಕುವೆಂಪುನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್‌ ಘಟಕವು ಮರದೂರು ಗ್ರಾಮದಲ್ಲಿ ವಾರ್ಷಿಕ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ. 

ಶಿಬಿರದ ಅಂಗವಾಗಿ ಮರದೂರು ಗ್ರಾಮದ ಲಕ್ಷ್ಮಣತೀರ್ಥ ನದಿದಂಡೆ ಮೇಲೆ 15, 16ನೇ ಶತಮಾನಕ್ಕೆ ಸೇರಿದ ವೇಣುಗೋಪಾಲಸ್ವಾಮಿ ದೇವಾಲಯ ಹಾಗೂ ಮಂಟಪಗಳು ಇವೆ. ಜನರ ನಿರ್ಲಕ್ಷ್ಯದಿಂದ ಇವು ಗಿಡಗಂಟಿ, ಬಳ್ಳಿಗಳು ಬೆಳೆದು ಅವನತಿ ಸ್ಥಿತಿ ತಲುಪಿತ್ತು.

ಮರದೂರಿನಲ್ಲಿ ಎನ್ನೆಸ್ಸೆಸ್‌ ಶಿಬಿರ ನಡೆದಸಲು ಆಗಮಿಸಿದ ಕುವೆಂಪುನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ವೇಣುಗೋಪಾಲಸ್ವಾಮಿ, ಮಲ್ಲೇಶ್ವರ ದೇವಾಲಯ, ಮಂಟಪಗಳನ್ನು ಸ್ವತ್ಛಗೊಳಿಸಿ ಜೀರ್ಣೋ ದ್ಧಾರಗೊಳಿಸಲು ನಿರ್ಧರಿಸಿ ಗ್ರಾಮಸ್ಥರ ಮನ ವೊಲಿಸಿದರು. ಆರಂಭದಲ್ಲಿ ಸಹಕಾರ ನೀಡಲು ಗ್ರಾಮಸ್ಥರು ಹಿಂಜರಿದರೂ ವಿದ್ಯಾರ್ಥಿಗಳ ಉತ್ಸಾಹ ನೋಡಿ ಕೊನೆಗೆ ಎಲ್ಲಾ ಸಹಕಾರ ನೀಡಿದರು. 

ಶಿಥಿಲವಾಗಿದ್ದ ವೇಣುಗೋಪಾಲಸ್ವಾಮಿ, ಮಲ್ಲೇಶ್ವರ ದೇವಾಲಯಗಳನ್ನು ಗಿಡಗಂಟಿಗಳಿಂದ ಸ್ವತ್ಛಗೊಳಿಸಿ ಸುಣ್ಣಬಣ್ಣ ಬಳಿದರು. ಹಲವು ವರ್ಷಗಳಿಂದ ಹಳೆಬಟ್ಟೆ, ಪ್ಲಾಸ್ಟಿಕ್‌ನಿಂದ ಕಲುಷಿತಗೊಂಡಿದ್ದ ಲಕ್ಷ್ಮಣತೀರ್ಥ ನದಿಯನ್ನು ಸ್ವತ್ಛಗೊಳಿಸಿದರು. ಗ್ರಾಮದಲ್ಲಿ ಜನ ಮತ್ತು ಜಾನುವಾರುಗಳಿಗೆ ಆರೋಗ್ಯ ಶಿಬಿರ ನಡೆಸಿದರು. ಇಡೀ ಗ್ರಾಮದ ಚರಂಡಿ, ರಸ್ತೆಯನ್ನು ಶುಚಿಗೊಳಿಸಿದರು.

Advertisement

ಮೂಢನಂಬಿಕೆಗಳ ವಿರುದ್ಧ ಡೀನ್‌ ಶ್ರೀಕಾಂತ್‌, ಜಾನಪದ ಮತ್ತು ಜೀವನ ಮೌಲ್ಯಗಳ ಬಗ್ಗೆ ನಿವೃತ್ತ ಪ್ರಾಚಾರ್ಯ ಪ್ರೊ.ಎಚ್‌.ಆರ್‌.ಸಿದ್ದೇಗೌಡ, ಸ್ಮಾರಕಗಳ ರಕ್ಷಣೆ ಕುರಿತು ಪುರಾತತ್ವ ಸಂಗ್ರಹಾಲಯ ಇಲಾಖೆಯ ಉಪನಿರ್ದೇಶಕ ಡಾ.ಗವಿಸಿದ್ದಯ್ಯ ಮಾಹಿತಿ ನೀಡಿದರು. ಯೋಗದ ಬಗ್ಗೆ ಶಿಕ್ಷಕ ಸುಬ್ರಹ್ಮಣ್ಯಾಚಾರ್‌ ತರಬೇತಿ ನೀಡಿದರು.

ಸಮಾರೋಪ ಸಮಾರಂಭದಲ್ಲಿ ತೆಲಂಗಾಣ ರಾಜ್ಯದ ಪುರಾತತ್ವ ಇಲಾಖೆಯ ರಾಷ್ಟ್ರಮಟ್ಟದ ಸಲಹೆಗಾರ ಡಾ. ಎನ್‌.ಎನ್‌. ರಂಗರಾಜು ಮಾತನಾಡಿ, ಈ ದೇವಾಲಯದ ಮೂಲ ದೇವರು ಹುಣಸೂರಿನ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ, ಸಂರಕ್ಷಿಸಿಡಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವರು ಚೋಳರ ಕಾಲದ ದೇವಾಲಯಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ದೇಶದ ವಿವಿಧೆಡೆ 400ಕ್ಕೂ ಹೆಚ್ಚು ದೇವಾಲಯ ಅಭಿವೃದ್ಧಿಗೊಳಿಸಲು ನಿರ್ಧರಿಸಿದ್ದಾರೆ.

ಈಗಾಗಲೇ 80 ಹೊಯ್ಸಳ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸುತ್ತಿದ್ದಾರೆ. ಅದೇ ಮಾದರಿ ಯಲ್ಲಿ ಈ ದೇವಾಲಯವನ್ನು ಅಭಿವೃದ್ಧಿಗೊಳಿಸಲು ಗ್ರಾಮಸ್ಥರು ಶೇ.20 ವಂತಿಕೆಯನ್ನು ನೀಡಿ ಸಹಕರಿಸಿದರೆ ದೇವಾಸ್ಥಾನ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದೆಂದರು.

ಶಾಸಕ ಎಚ್‌.ಪಿ. ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾಧಿಕಾರಿಗಳಾದ ಡಾ.ಎಸ್‌.ಜಿ.ರಾಮದಾಸರೆಡ್ಡಿ, ಪ್ರೊ. ಎಂ.ಎಲ್‌. ಮಂಜುಳಾ ವಾರಕಾಲ ನಡೆದ ಶಿಬಿರದ ಚಟುವಟಿಕೆಗಳನ್ನು ವಿವರಿಸಿದರು. ಪ್ರಾಂಶುಪಾಲೆ ಪೊ›. ಎಂ.ಆರ್‌.ಸೌಭಾಗ್ಯ, ತಾಪಂ ಸದಸ್ಯ ರವಿಪ್ರಸಾದ್‌, ಇಒ ಕೃಷ್ಣಕುಮಾರ್‌, ಗ್ರಾಪಂ ಅಧ್ಯಕ್ಷೆ ಆಶಾ ರವಿಕುಮಾರ್‌, ಎಪಿಎಂಸಿ ಸದಸ್ಯ ಮಂಜುನಾಥ್‌, ಗ್ರಾಮದ ಮುಖಂಡ ಶ್ರೀಕಂಠ ಸೇರಿದಂತೆ ಕಾಲೇಜಿನ ಅಧ್ಯಾಪಕ ವೃಂದ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next