Advertisement
ಊರ, ಪರ ಊರಿನ ಸಾವಿರಾರು ಮಂದಿ ಭಕ್ತರು ಕೃಷ್ಣಾ… ಕೃಷ್ಣಾ.. ಎಂದು ಕೃಷ್ಣಲೀಲೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
Related Articles
Advertisement
ಮುಖ್ಯಪ್ರಾಣ ದೇವರಿಗೆ ಉಂಡೆ ಚಕ್ಕುಲಿಗಳನ್ನು ಸಮರ್ಪಣೆ ಮಾಡಿದ ಬಳಿಕ ಶ್ರೀಕೃಷ್ಣ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು.
ಪರ್ಯಾಯ ಶ್ರೀಪಾದರು ಅನ್ನಸಂತರ್ಪಣೆಗೆ ಪಲ್ಲಪೂಜೆ ನೆರವೇರಿಸಿದರು. ಅನ್ನ ಪ್ರಸಾದ ಸ್ವೀಕಾರಕ್ಕೆ ಭಕ್ತ ಸಮೂಹ ಕಿಕ್ಕಿರಿದು ತುಂಬಿತ್ತು. ಮುಂಜಾವದಿಂದ ನಾಗಸ್ವರವೇ ಮೊದಲಾದ ವಾದನ ಕಾರ್ಯಕ್ರಮ ನಡೆಯಿತು. ವಿವಿಧ ಭಜನ ಮಂಡಳಿಗಳ ಸದಸ್ಯರು ಭಜನೆಗಳನ್ನು ನಡೆಸಿಕೊಟ್ಟರು.
ಕಣ್ಮನ ಸೆಳೆದ ವೇಷಧಾರಿಗಳು ಭಕ್ತ ಜನಸ್ತೋಮ ಮತ್ತು ವೇಷಧಾರಿಗಳ ಸಂಖ್ಯೆ ಹೆಚ್ಚಿದ್ದು, ರಥಬೀದಿಯೊಳಗೆ ಪ್ರವೇಶಿಸಲು ಅರ್ಧ ಗಂಟೆ ಮತ್ತು ಹೊರಬರಲು ಸುಮಾರು ಅರ್ಧ ಗಂಟೆ ಬೇಕಾಗುತ್ತಿತ್ತು. ಸಾಕಷ್ಟು ಸಂಖ್ಯೆಯಲ್ಲಿ ವೇಷಧಾರಿಗಳು ರಥಬೀದಿಯ ಉತ್ಸವದಲ್ಲಿ ರಂಗು ತುಂಬಿದರು. ಹುಲಿವೇಷ, ಯಕ್ಷಗಾನ ರಕ್ಕಸ ವೇಷ, ಪೇಪರ್ ವೇಷಗಳು, ಸಾಮಾಜಿಕ ಕಳಕಳಿಯಿಂದ ತೊಟ್ಟ ವಿಶೇಷ ಹಾಲಿವುಡ್ ಸಿನೆಮಾದ ಕಾಲ್ಪನಿಕ ಪಾತ್ರ ವೇಷಗಳು ವೈಶಿಷ್ಟ ಹೆಚ್ಚಿಸಿತ್ತು. ಕಿಕ್ಕಿರಿದು ತುಂಬಿದ್ದ ಜನಸ್ತೋಮದಲ್ಲಿ ಫೋಟೊಗ್ರಫಿ, ವೀಡಿಯೋ ಮಾಡುವ ಕ್ರೇಜ್ ಜೋರಾಗಿತ್ತು. ಕೆಮರಾ, ಮೊಬೈಲ್ ಮೂಲಕ ಉತ್ಸವವನ್ನು ಸೆರೆ ಹಿಡಿದು ಸಂಭ್ರಮಿಸಿದರು. ನಗರದಲ್ಲಿ ಟ್ರಾಫಿಕ್ ಜಾಮ್
ಜನಸ್ತೋಮದಿಂದಾಗಿ ಕಲ್ಸಂಕ, ಶಿರಿಬೀಡು, ಕೆಎಂ ಮಾರ್ಗ, ಸರ್ವಿಸ್ ಬಸ್ ನಿಲ್ದಾಣ ಬಳಿ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಮುಂಜಾಗ್ರತ ಕ್ರಮವಾಗಿ ರಥಬೀದಿ ಸಂಪರ್ಕಿಸುವ ಒಳರಸ್ತೆಗಳಿಗೆ ಪೊಲೀಸರು ಸಂಚಾರ ನಿರ್ಬಂಧಿಸಿದ ಪರಿಣಾಮ ಮಠದ ಸುತ್ತಮುತ್ತ ವಾಹನ ದಟ್ಟಣೆ ಸಂಭವಿಸಿಲ್ಲ. 200ಕ್ಕೂ ಅಧಿಕ ಮಂದಿ ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದ್ದು, ಯಾವುದೆ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಯುವತಿಯರ ಕುಣಿತ ವೈರಲ್
ಕಲ್ಸಂಕ ಸರ್ಕಲ್ ಬಳಿ ಟ್ರಾಫಿಕ್ ನಡುವೆಯೂ ಯುವತಿಯೊಬ್ಟಾಕೆ ಕಾರಿನಿಂದ ಇಳಿದು ವೇಷಧಾರಿಯೊಂದಿಗೆ ಬಿಂದಾಸ್ ಆಗಿ ಕುಣಿದ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗೆಯೇ ಯೂನಿಯನ್ ಬ್ಯಾಂಕ್ ಸಮೀಪ ಇಬ್ಬರು ಯುವತಿಯರು ಹುಲಿವೇಷ ತಂಡದ ತಾಸೆ ಸದ್ದಿಗೆ ನರ್ತಿಸಿದ ವೀಡಿಯೋ ವೈರಲ್ ಆಗಿದೆ. ಮೃಣ್ಮಯ ಮೂರ್ತಿಗೆ ಪೂಜೆ
ಅಪರಾಹ್ನ 3 ಗಂಟೆಗೆ ಆರಂಭಗೊಂಡ ವಿಟ್ಲಪಿಂಡಿ ಉತ್ಸವದಲ್ಲಿ ಉಭಯ ಶ್ರೀಪಾದರು ಪಾಲ್ಗೊಂಡಿದ್ದರು. ಶ್ರೀಕೃಷ್ಣನ ಮೃಣ್ಮಯ ಮೂರ್ತಿಗೆ ಪೂಜೆ ಸಲ್ಲಿಸಿ ಅದನ್ನು ಚಿನ್ನದ ರಥದಲ್ಲಿ ತರಲಾಯಿತು. ಜತೆಗೆ ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವರ ಉತ್ಸವ ಮೂರ್ತಿಗಳೂ ಚಿನ್ನದ ಮತ್ತು ನವರತ್ನ ರಥದಲ್ಲಿ ಸಾಗಿದವು. ಶ್ರೀಕೃಷ್ಣ ಮಠದ ಎದುರು ನೆಟ್ಟ ಗುರ್ಜಿಯಲ್ಲಿನ ಮೊಸರು ಕುಡಿಕೆಯನ್ನು ಗೊಲ್ಲ ವೇಷಧಾರಿ ಗೋವಳರು ಲೀಲೋತ್ಸವದಲ್ಲಿ ಮೊದಲಾಗಿ ಒಡೆದು ಬಳಿಕ ಮೆರವಣಿಗೆ ಸಾಗುತ್ತಿದ್ದಂತೆ ರಥಬೀದಿ ಸುತ್ತ ಇರುವ 13 ಗುರ್ಜಿಗಳಲ್ಲಿನ ಮೊಸರು ಕುಡಿಕೆ ಒಡೆದರು. ವಡಭಾಂಡೇಶ್ವರ: ಸಂಭ್ರಮದ ಮೊಸರು ಕುಡಿಕೆ ಉತ್ಸವ
ಮಲ್ಪೆ: ಬಲರಾಮನ ನೆಲೆವೀಡಾದ ವಡಭಾಂಡ ಬಲರಾಮ ದೇವಸ್ಥಾನದ ವಠಾರದಲ್ಲಿ ಭಕ್ತವೃಂದದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 16ನೇ ವರ್ಷದ ವಿಟ್ಲಪಿಂಡಿ ಮಹೋತ್ಸವ ಶನಿವಾರ ಜರಗಿತು. ಪುಟಾಣಿಗಳಿಗೆ ಮುದ್ದು ಕೃಷ್ಣ ವೇಷ ಸ್ಪರ್ಧೆ, ಸಾರ್ವಜನಿಕರಿಗಾಗಿ ವಿವಿಧ ಆಟೋಟಗಳು, ಮಾನವ ಗೋಪುರ ಸ್ಪರ್ಧೆಗಳು ನಡೆದವು. ಪಿರಮಿಡ್ ರಚಿಸುವ ಯುವಕರ ಯತ್ನ ಕೈಗೂಡದೆ ಒಬ್ಬರ ಮೇಲೊಬ್ಬರು ಬೀಳುತ್ತಿದ್ದಂತೆ ಹೋ ಎಂಬ ಉದ್ಗಾರ ಕೇಳಿ ಬರುತ್ತಿತ್ತು. ಅಕ್ಕಪಕ್ಕದವರು ಪುನಃ ಯುವಕರಲ್ಲಿ ಹುಮ್ಮಸ್ಸು ತುಂಬಿ ಮೊಸರು ಕುಡಿಕೆ ಒಡೆಯಲು ಪ್ರೇರೇಪಿಸುತ್ತಿರುವುದು ಕಂಡ ಬಂತು. ಆ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅತಿಥಿಗಳು ವಿಜೇತರಿಗೆ ಬಹುಮಾನವನ್ನು ನೀಡಿದರು. ಕೇರಳ ಕಣ್ಣೂರಿನ ವಿಶಿಷ್ಟ ಶೈಲಿಯ ಕಳರಿಪಯ್ಯಟ್ಟು ಪ್ರದರ್ಶನ ನಡೆಯಿತು.