Advertisement
ಕೋವಿಡ್-19 ಭೀತಿಯಿಂದಾಗಿ ಮಾ. 23ರಿಂದ ದೇಶಾದ್ಯಂತ ಲಾಕ್‌ಡೌನ್ ಆದ ಪರಿಣಾಮ ದೇವಸ್ಥಾನಗಳಲ್ಲಿಯೂ ಭಕ್ತರಿಗೆ ಪ್ರವೇಶ ಇರಲಿಲ್ಲ. ಹೀಗಾಗಿ ಭಕ್ತರಿಗೆ ದೇವರ ದರ್ಶನ ಸಾಧ್ಯವಾಗಿರಲಿಲ್ಲ. ಇದೀಗ ಎರಡೂವರೆ ತಿಂಗಳ ಬಳಿಕ ಸೋಮವಾರದಿಂದ ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಿ ಸರಕಾರ ಆದೇಶ ಹೊರಡಿಸಿತ್ತು. ಹಾಗಾಗಿ ಮಂಗಳೂರಿನ ವಿವಿಧ ದೇವಸ್ಥಾನಗಳಿಗೆ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಮಂಗಳೂರಿನ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಸಹಿತ ವಿವಿಧ ದೇವಾಲಯಗಳಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಕೊಡಿಯಾಲ್‌ಬೈಲ್‌ನ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದಲ್ಲಿ ಭಕ್ತರ ಪ್ರವೇಶ ಅವಕಾಶವನ್ನು ಮುಂದೂಡಲಾಗಿದೆ. ಆದರೆ ಮೊದಲ ದಿನವಾದ ಸೋಮವಾರ ಬಹುತೇಕ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ಪ್ರತಿ ದೇವಸ್ಥಾನಗಳಲ್ಲಿ ಸುಮಾರು 15-20 ಮಂದಿಯಷ್ಟೇ ಆಗಮಿಸಿ ದೇವರ ದರ್ಶನ ಪಡೆದರು. ದೇಗುಲಗಳಲ್ಲಿ ಪೂಜೆ
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸೋಮವಾರ ಬೆಳಗ್ಗೆ ಲೋಕಕಲ್ಯಾಣಾರ್ಥ ಹಾಗೂ ಕೊರೊನಾ ಮಹಾಮಾರಿ ಮುಕ್ತಿಗಾಗಿ ಧನ್ವಂತರಿಯಾಗ, ಗೋಕರ್ಣನಾಥ ದೇವರಿಗೆ ಶತಸೀಯಾಳಾಭಿಷೇಕ ನಡೆಯಿತು. ಮಂಗಳಾದೇವಿಯಲ್ಲಿ ದೇವರಿಗೆ ಆರತಿ ಬೆಳಗಿ ಪೂಜೆ ನೆರವೇರಿಸಲಾಯಿತು. ರಥಬೀದಿ ಶ್ರೀ ವೆಂಕಟರಮಣ ದೇಗುಲದಲ್ಲಿ ಬೆಳಗ್ಗೆ 8ರಿಂದ 11.30 ಮತ್ತು ಸಂಜೆ 5ರಿಂದ 6.30ರ ವರೆಗೆ ದೇವರ ದರ್ಶನಕ್ಕೆ ಅವಕಾಶವಿತ್ತು.
Related Articles
Advertisement
ರಾತ್ರಿ 7ಕ್ಕೆ ನಡೆ ಬಾಗಿಲು ಮುಚ್ಚಲಾಗುವುದು. ದೇವರ ದರ್ಶನ ನಡೆಸಿ ಉತ್ತರ ಬಾಗಿಲಿನಿಂದ ಭಕ್ತರು ನಿರ್ಗಮಿಸಬೇಕು ಎಂದು ದೇವಾಲಯದ ಪ್ರಕಟನೆ ತಿಳಿಸಿದೆ.
ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನಸಸಿಹಿತ್ಲು: ಇಲ್ಲಿನ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಸೋಮವಾರ ಆಗಮಿಸಿದ ಭಕ್ತರಿಗೆ ದೇವರ ದರ್ಶನ ಮಾಡುವ ಸೌಕರ್ಯ ಮಾಡಲಾಗಿದ್ದು, ಅನ್ನಪ್ರಸಾದ, ತೀರ್ಥ ನೀಡಲಾಗಿಲ್ಲ. ಯಾವುದೇ ಹರಕೆಯ ಸೇವೆಗಳು ನಡೆಯಲಿಲ್ಲ. ಭಕ್ತರು ಸರಕಾರದ ನಿಯಮ ಪಾಲನೆ ಮಾಡಿ ದೇವಿಯ ದರ್ಶನ ಪಡೆದರು. ಉಳ್ಳಾಲ: ಉಳ್ಳಾಲ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಸರಕಾರದ ನಿಯಮದಂತೆ ಭಕ್ತರು ದೇವ ಸ್ಥಾನ ಪ್ರವೇ ಶಕ್ಕೆ ಅನುಮತಿ ನೀಡಿದ್ದು, ಉಳ್ಳಾಲ ದರ್ಗಾದಲ್ಲಿ ಜೂ. 30ರ ಅನಂತರ ಮತ್ತು ಚರ್ಚ್‌ಗಳಲ್ಲಿ ಮುಂದಿನ ಶನಿವಾರದಿಂದ ಭಕ್ತರಿಗೆ ಅವಕಾಶ ನೀಡಲಿದೆ. ಸೋಮೇಶ್ವರ ಸೋಮನಾಥ ದೇವಸ್ಥಾನ ಸಹಿತ ಉಳ್ಳಾಲ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಸೋಮವಾರ ಬೆರಳೆಣಿಕೆಯಷ್ಟು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ಉಳ್ಳಾಲ ದರ್ಗಾದಲ್ಲಿ ಜೂ. 30ರ ವರೆಗೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿಲ್ಲ. ಮುಂದಿನ ತಿಂಗಳ ಆರಂಭದಿಂದ ಆರಂಭ ದಿಂದ ಪ್ರಾರ್ಥನೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ದರ್ಗಾ ಸಮಿತಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಉಳ್ಳಾಲ್ ತಿಳಿಸಿದ್ದಾರೆ. ಭಕ್ತರು ಹೊರಗಿನಿಂದಲೇ ಪ್ರಾರ್ಥನೆ ನೆರವೇರಿಸಿ ತೆರಳುತ್ತಿದ್ದಾರೆ. ತೊಕ್ಕೊಟ್ಟು ಸಂತ ಸೆಬಾಸ್ತಿಯನ್ನರ ಧರ್ಮ ಕೇಂದ್ರದಲ್ಲಿ ಮುಂದಿನ ಶನಿವಾರದಿಂದ ಪೂಜೆಗೆ ಅವಕಾಶ ನೀಡಲಾಗುವುದು. ಚರ್ಚ್ ಸಹಿತ ಚರ್ಚ್‌ಗೆ ಸಂಬಂಧಿಸಿದ ಹಾಲ್‌ಗಳಲ್ಲಿ ಭಕ್ತರಿಗೆ ಪ್ರಾರ್ಥನೆ ನಡೆಸಲು ಸರಕಾರದ ನಿಯಮದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಚರ್ಚ್‌ನ ಧರ್ಮಗುರು ಡಾ| ಜೆ.ಬಿ. ಸಲ್ಡಾನ್ಹಾ ತಿಳಿಸಿದ್ದಾರೆ. ಕದ್ರಿ: ಸಚಿವ ಶ್ರೀನಿವಾಸ ಪೂಜಾರಿ ಭೇಟಿ
ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಾಲಯ ಪ್ರವೇಶಿಸುವ ಮುನ್ನ ನಿಯಮದಂತೆ ತಾಪಮಾನ ತಪಾಸಣೆ ನಡೆಸಿ ಸ್ಯಾನಿಟೈಸರ್ ಬಳಸಿ ಪೂಜಾ ವಿಧಿಯಲ್ಲಿ ಪಾಲ್ಗೊಂಡರು. ಮೇಯರ್ ದಿವಾಕರ ಪಾಂಡೇಶ್ವರ ಮತ್ತಿತರರು ಜತೆಗಿದ್ದರು. ನಿಯಮ ಪಾಲನೆ
ಸರಕಾರದ ಸೂಚನೆಯಂತೆ ದೇವಾಲಯಗಳಲ್ಲಿ ನಿಯಮಗಳ ಪಾಲನೆ ಮಾಡಲಾಯಿತು. ದೇಗುಲದ ಆವರಣ ದ್ವಾರದಲ್ಲಿ ಭದ್ರತಾ ಸಿಬಂದಿ ಭಕ್ತರಿಗೆ ಸ್ಯಾನಿಟೈಸರ್ ನೀಡಿ, ದೇಹದ ತಾಪಮಾನ ತಪಾಸಣೆ ನಡೆಸಿಯೇ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದರು. ದೇವಾಲಯ ಒಳಭಾಗದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಾಕ್ಸ್ ಮಾದರಿಯ ಮಾರ್ಕ್‌ಗಳನ್ನು ಹಾಕಲಾಗಿತ್ತು. ವಿವಿಧ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ತೀರ್ಥ ಪ್ರಸಾದ ಇರಲಿಲ್ಲ. ಗಂಟೆ ಬಾರಿಸಲೂ ಅವಕಾಶ ಇರಲಿಲ್ಲ. ಎಲ್ಲ ದೇವಸ್ಥಾನಗಳಲ್ಲಿಯೂ ಒಳ ಪ್ರವೇಶಿಸಲು ಮತ್ತು ಹೊರ ಹೋಗಲು ಪ್ರತ್ಯೇಕ ದಾರಿ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾಸರಗೋಡು: ಶ್ರೀ ದೇವರ ದರ್ಶನ ಭಾಗ್ಯ
ಕಾಸರಗೋಡು: ಎರಡೂವರೆ ತಿಂಗಳಿಂದ ಮುಚ್ಚಿದ್ದ ಆರಾಧನಾಲಯಗಳಲ್ಲಿ ಬಹುತೇಕ ಸೋಮವಾರ ತೆರೆದುಕೊಂಡಿದ್ದು, ಭಕ್ತರಿಗೆ ಶ್ರೀ ದೇವರ ದರ್ಶನ ಭಾಗ್ಯ ಒದಗಿಸಲಾಗಿದೆ. ಸರಕಾರದ ಮಾನದಂಡ ಪ್ರಕಾರ ಸಾಮಾಜಿಕ ಅಂತರ ಪಾಲನೆಯೊಂದಿಗೆ ಭಕ್ತರಿ ಗೆ ಶ್ರೀದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಜೂ. 8ರಿಂದ ಆರಾಧನಾಲಯಗಳು ತೆರೆದು ಕಾರ್ಯಾಚರಿಸುವಂತೆ ಸರಕಾರ ಆದೇಶ ನೀಡಿದ್ದರೂ ಬಹುತೇಕ ಕಡೆ ಶುಚೀಕರಣ ಚಟುವಟಿಕೆಗೆ ಸಮಯ ಮೀಸಲಿರಿಸಲಾಗಿತ್ತು. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶುದ್ಧೀಕರಣ ಕೆಲಸ ನಡೆಯಿತು. ಈ ಮಧ್ಯೆ ದೇವಾಲಯದ ಹೊರಭಾಗದಿಂದ ಶ್ರೀ ಮಹಾಗಣಪತಿ ದೇವರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರು ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು. ಜತೆಗೆ ಸಾಮಾಜಿಕ ಅಂತರ ಪಾಲಿಸಬೇಕು ಹಾಗೂ ಭಕ್ತರು ದೇವಾಲಯದೊಳಗಿರಿಸಿರುವ ಪುಸ್ತಕದಲ್ಲಿ ತಮ್ಮ ವಿಳಾಸ, ಮೊಬೈಲ್ ಸಂಖ್ಯೆಯನ್ನು ಅವರದೇ ಪೆನ್ ಮೂಲಕ ನಮೂದಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸೋಮವಾರ ಶುಚೀಕರಣ ಕಾರ್ಯ ನಡೆಯಿತು. ಮಂಗಳವಾರದಿಂದ ಭಕ್ತರಿಗೆ ಪ್ರವೇಶ ಕಲ್ಪಿಸಲಾಗುವುದು ಎಂದು ಆಡಳಿತ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ದರ್ಶನಕ್ಕೆ ಇನ್ನಷ್ಟೇ ದಿನ ನಿಗದಿಪಡಿಸಬೇಕಾಗಿದೆ. ಪೆರ್ಲ ಶ್ರೀ ಬಜಕೂಡ್ಲು ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಶ್ರೀ ದೇವರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಭಕ್ತರಿಗೆ ಪ್ರವೇಶಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಧೂರು: ಪೂಜೆ ಸಮಯ
ಮಧೂರು ದೇವಾಲಯದಲ್ಲಿ ಜೀರ್ಣೋದ್ಧಾರ ಕಾರ್ಯದ ಹಿನ್ನೆಲೆಯಲ್ಲಿ ಬೆಳಗ್ಗಿನ ಪೂಜೆಯನ್ನು ಬೆಳಗ್ಗೆ 6ಕ್ಕೆ, ಮಧ್ಯಾಹ್ನದ ಪೂಜೆಯನ್ನು ಬೆಳಗ್ಗೆ 9ಕ್ಕೆ, ರಾತ್ರಿ ಪೂಜೆಯನ್ನು ರಾತ್ರಿ 7ಕ್ಕೆ ನಡೆಸಲಾಗುತ್ತಿದ್ದು, ಇದೇ ವ್ಯವಸ್ಥೆ ಮುಂದುವರಿಯಲಿದೆ. ತೀರ್ಥ, ಪ್ರಸಾದ ವಿತರಣೆ, ವಿಶೇಷ ಸೇವೆಗಳು ಇರುವುದಿಲ್ಲ.