Advertisement

ತಮಿಳ್‌ ತಲೈವಾಸ್‌ ಮಣಿಸಿದ ತೆಲುಗು

08:20 AM Jul 29, 2017 | Harsha Rao |

ಹೈದರಾಬಾದ್‌: ತಾರಾ ಆಟಗಾರ ರಾಹುಲ್‌ ಚೌಧರಿ ಅವರ ಭರ್ಜರಿ ರೈಡಿಂಗ್‌ ಪ್ರದರ್ಶನದಿಂದ ತೆಲುಗು ಟೈಟಾನ್ಸ್‌ 32-27 ಅಂಕಗಳಿಂದ ತಮಿಳು ತಲೈವಾಸ್‌ ತಂಡವನ್ನು ಮಣಿಸಿದೆ. ಈ ಮೂಲಕ ಟೈಟಾನ್ಸ್‌ ಪ್ರೊ ಕಬಡ್ಡಿ 5ರ ಉದ್ಘಾಟನಾ ಪಂದ್ಯದಲ್ಲಿಯೇ ಗೆದ್ದು, ಶುಭಾರಂಭ ಮಾಡಿದೆ.

Advertisement

ಪಂದ್ಯದ ಆರಂಭದಲ್ಲಿ ಎರಡೂ ತಂಡಗಳ ನಡುವೆ ಭಾರೀ ಸ್ಪರ್ಧೆ ಇತ್ತು. ಹೀಗಾಗಿ ತಂಡಗಳ ಅಂಕ ಒಂದು ಹಂತದಲ್ಲಿ 3-3ರಿಂದ ಸಮಬಲದಲ್ಲಿತ್ತು. ಅನಂತರ ಟೈಟಾನ್ಸ್‌ನ ಸ್ಟಾರ್‌ ರೈಡರ್‌ ರಾಹುಲ್‌ ಚೌಧರಿ ಘರ್ಜಿಸತೊಡಗಿದರು. ಮಿಂಚಿನ ವೇಗದಲ್ಲಿ ಎದುರಾಳಿ ಅಂಕಣಕ್ಕೆ ನುಗ್ಗಿ ಚಿಗರೆಯಂತೆ ನೆಗೆಯುತ್ತಾ ಅಂಕ ತರತೊಡಗಿದರು. ಹೀಗಾಗಿ ಟೈಟಾನ್ಸ್‌ ಅಂಕ ಏರುತ್ತ ಸಾಗಿತು. ಇದರಿಂದ ಮೊದಲ ಅವಧಿ ಅಂತ್ಯಕ್ಕೆ ಟೈಟಾನ್ಸ್‌ 17-11 ರಿಂದ ಮುನ್ನಡೆ ಪಡೆಯಿತು.

ಕೊನೆಕ್ಷಣದಲ್ಲಿ ತಲೈವಾಸ್‌ ಮಿಂಚು
ಹೀಗೆ ಮುನ್ನಡೆಯಲ್ಲಿಯೇ ಸಾಗುತ್ತಿದ್ದ ಟೈಟಾನ್ಸ್‌ ತಂಡಕ್ಕೆ ಇದೇ ಮೊದಲ ಬಾರಿಗೆ ಪ್ರೊ ಕಬಡ್ಡಿ ಪ್ರವೇಶಿಸಿರುವ ತಲೈವಾಸ್‌ ಆಘಾತ ನೀಡುವ ಸಾಧ್ಯತೆ ಇತ್ತು. ಕೊನೆಯ ಕ್ಷಣದಲ್ಲಿ ಮಿಂಚಿನ ಆಟ ಪ್ರದರ್ಶಿಸಿತು. ಆದರೆ ಟೈಟಾನ್ಸ್‌ ಆಟಗಾರರು ಅಂಕ ಹೆಚ್ಚಿರುವ ಕಾರಣ ಟೈಮ್‌ ಪಾಸ್‌ಗೆ ಹೆಚ್ಚಿನ ಮಹತ್ವ ನೀಡಿದರು. ಇದರಿಂದ ಟೈಟಾನ್ಸ್‌ 32-27ರಿಂದ ಅಲ್ಪ ಅಂತರದ ಜಯ ದಾಖಲಿಸಿದರು.

10 ಅಂಕ ತಂದ ಚೌಧರಿ 
ಪಂದ್ಯದಲ್ಲಿ ಚೌಧರಿ 10 ರೈಡಿಂಗ್‌ ಅಂಕವನ್ನು ತರುವ ಮೂಲಕ ಟೈಟಾನ್ಸ್‌ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.

ಸಚಿನ್‌, ಅಕ್ಷಯ್‌, ಚಿರು ಹಾಜರ್‌ 
ಪ್ರೊ ಕಬಡ್ಡಿಯ 5ನೇ ಆವೃತ್ತಿಗೆ ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸರಳವಾಗಿ ಚಾಲನೆ ನೀಡಲಾಗಿದೆ. ವಿವಿಧ ಸಾಂಸ್ಕೃತಿಕ ನೃತ್ಯಗಳು ಅಭಿಮಾನಿಗಳನ್ನು ರಂಜಿಸಿದರೆ, ತಾರೆಯರ ಉಪಸ್ಥಿತಿ ಕ್ರೀಡಾಭಿಮಾನಿಗಳಲ್ಲಿ ಹರ್ಷ ತಂದಿತು.

Advertisement

ಸಚಿನ್‌ ತೆಂಡುಲ್ಕರ್‌, ಬಾಲಿವುಡ್‌ ಸ್ಟಾರ್‌ ನಟ ಅಕ್ಷಯ್‌ ಕುಮಾರ್‌, ತೆಲುಗು ಸೂಪರ್‌ ಸ್ಟಾರ್‌ ಚಿರಂಜೀವಿ, ಬಾಹುಬಲಿ ಖ್ಯಾತಿಯ ರಾಣ ದಗ್ಗುಬಾಟಿ, ತೆಲುಗು ಸ್ಟೈಲಿಂಗ್‌ ಸ್ಟಾರ್‌ ಅಲ್ಲು ಅರ್ಜುನ್‌, ರಾಷ್ಟ್ರೀಯ ಬ್ಯಾಡ್ಮಿಂಟನ್‌ ಕೋಚ್‌ ಪಿ.ಗೋಪಿಚಂದ್‌, ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಸೇರಿದಂತೆ ಹಲವು ತಾರೆಯರು ಉಪಸ್ಥಿತರಿದ್ದರು.

ಪುನೇರಿಗೆ ಜಯ
ಸಂಘಟಿತ ಪ್ರದರ್ಶನ ನೀಡಿದ ಪುನೇರಿ ಪಲ್ಟಾನ್‌ ಪ್ರೊ ಕಬಡ್ಡಿಯ 5ನೇ ಆವೃತ್ತಿಯಲ್ಲಿ ಯು ಮುಂಬಾ ತಂಡವನ್ನು ಭಾರೀ ಅಂತರದಿಂದ ಸೋಲಿಸಿದೆ. 

ರೈಡಿಂಗ್‌, ಟ್ಯಾಕಿಂಗ್‌ ನಲ್ಲಿ ಪುನೇರಿ ಭರ್ಜರಿ ಪ್ರದರ್ಶನ ನೀಡುವ ಮೂಲಕ 33-21 ರಿಂದ ಪ್ರಬಲ ತಂಡವಾಗಿದ್ದ ಮುಂಬೈಗೆ ಆಘಾತ ನೀಡಿದೆ. ಪಂದ್ಯ ಆರಂಭದಿಂದ ಪುನೇರಿ ಆಕ್ರಮಣ ಕಾರಿ ಆಟವನ್ನು ಪ್ರದರ್ಶಿಸಿ ಗೆಲುವು ತನ್ನದಾಗಿಸಿಕೊಂಡಿತು.
 

Advertisement

Udayavani is now on Telegram. Click here to join our channel and stay updated with the latest news.

Next