Advertisement

Telugu Star In Udupi: ತಾಯಿಯ ತವರು ಕುಂದಾಪುರದಲ್ಲಿ ಖ್ಯಾತ ತೆಲುಗು ನಟ ಜೂ.ಎನ್‌ಟಿಆರ್‌

01:35 AM Sep 01, 2024 | Team Udayavani |

ಕುಂದಾಪುರ/ಕೋಟೆಶ್ವರ: ಖ್ಯಾತ ತೆಲುಗು ನಟ ಜೂ| ಎನ್‌ಟಿಆರ್‌ ಅವರು ಶನಿವಾರ ತಾಯಿಯ ತವರು ಕುಂದಾಪುರಕ್ಕೆ ಭೇಟಿ ನೀಡಿದ್ದು, ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ರಿಷಬ್‌ ಶೆಟ್ಟಿ ನಿರ್ದೇಶನದ “ಕಾಂತಾರ’ ಪ್ರೀಕ್ವೆಲ್‌ನಲ್ಲಿ ಜೂ| ಎನ್‌ಟಿಆರ್‌ ಅವರು ನಟಿಸುತ್ತಿದ್ದಾರೆ ಅನ್ನುವ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ.

Advertisement

“ಕಾಂತಾರ-1’ರಲ್ಲಿ ಪಂಜುರ್ಲಿ ದೈವದ ಕಥೆಯೊಂದಿಗೆ ಪರಶುರಾಮನ ಕಥೆಯೂ ಇದೆ ಎನ್ನಲಾಗಿದೆ. ಈ ಸಿನೆಮಾದ ಟೀಸರ್‌ ಈಗಾಗಲೇ ಜಾಲತಾಣಗಳಲ್ಲಿ ಸಂಚಲನ ಉಂಟು ಮಾಡಿದೆ. ಸಿನೆಮಾದ ಕಲಾವಿದರ ಆಯ್ಕೆ ಬಗ್ಗೆ ಕುತೂಹಲ ಹೆಚ್ಚಿದ್ದು, ಹಲವು ಖ್ಯಾತನಾಮರು ಇರಬಹುದು ಎನ್ನಲಾಗುತ್ತಿದೆ.

ನಿರ್ದೇಶಕ ಪ್ರಶಾಂತ್‌ ನೀಲ್‌ ಜತೆಗೆ ಜೂ| ಎನ್‌ಟಿಆರ್‌ ಹೊಸದೊಂದು ಚಿತ್ರ ಮಾಡುತ್ತಿದ್ದು, ಅದರ ಸಿದ್ಧತೆಯೂ ಈ ಭೇಟಿಯ ಹಿಂದಿರಬಹುದು ಎನ್ನಲಾಗುತ್ತಿದೆ. ಉಡುಪಿ ಶ್ರೀ ಕೃಷ್ಣ ಮಠಕ್ಕೆ ಜೂ| ಎನ್‌ಟಿಆರ್‌ ಭೇಟಿ ನೀಡಿದಾಗ ರಿಷಬ್‌ ಜತೆಗೆ ನಿರ್ದೇಶಕ ಪ್ರಶಾಂತ್‌ ನೀಲ್‌ ಕೂಡ ಇದ್ದರು.

ಕುಂದಾಪುರ ಭೇಟಿ ಖುಷಿ
ಉಡುಪಿ ಭೇಟಿ ಬಗ್ಗೆ ಜೂ| ಎನ್‌ಟಿಆರ್‌ ಅವರು ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದ್ದಾರೆ. “ತವರೂರು ಕುಂದಾಪುರಕ್ಕೆ ಬಂದು ಉಡುಪಿ ಕೃಷ್ಣಮಠದಲ್ಲಿ ದೇವರ ದರ್ಶನ ಪಡೆಯುವ ನನ್ನಮ್ಮನ ಬಹುಕಾಲದ ಕನಸು ಈಗ ನನಸಾಗಿದೆ. ಅವಳ ಹುಟ್ಟುಹಬ್ಬ (ಸೆ.2)ಕ್ಕೆ ಮುಂಚಿತವಾಗಿ ನಾನು ಕೊಡಬಹುದಾದ ಅತ್ಯುತ್ತಮ ಉಡುಗೊರೆ ಎಂದರೆ ಇದೇ.

Advertisement

ನನ್ನೊಂದಿಗಿದ್ದು, ಇದನ್ನು ಸಾಧ್ಯವಾಗಿಸಿದ್ದಕ್ಕೆ ವಿಜಯ್‌ ಕಿರಗಂದೂರು ಮತ್ತು ನನ್ನ ಪ್ರಿಯ ಮಿತ್ರ ಪ್ರಶಾಂತ್‌ ನೀಲ್‌ ಅವರಿಗೆ ಧನ್ಯವಾದಗಳು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಈ ಕ್ಷಣವನ್ನು ವಿಶೇಷವಾಗಿಸಿದ ನನ್ನ ಪ್ರಿಯ ಮಿತ್ರ ರಿಷಬ್‌ ಶೆಟ್ಟಿ ಅವರಿಗೆ ವಿಶೇಷ ಕೃತಜ್ಞತೆಗಳು’ ಎಂದು ಬರೆದುಕೊಂಡಿದ್ದಾರೆ.

ಶ್ರೀ ಕೃಷ್ಣಮಠಕ್ಕೆ ಜೂ| ಎನ್‌ಟಿಆರ್‌ ಭೇಟಿ
ಉಡುಪಿ: ತೆಲುಗು ಚಿತ್ರರಂಗದ ಖ್ಯಾತ ನಟ ಜೂನಿಯರ್‌ ಎನ್‌ಟಿಆರ್‌ ಅವರ ತಾಯಿ ಸುಮಾರು 40 ವರ್ಷಗಳ ಹಿಂದೆ ದೇವರನ್ನು ನೆನೆದು ಮಾಡಿದ್ದ ಸಂಕಲ್ಪ ಶನಿವಾರ ಕೃಷ್ಣ ನಗರಿಯಲ್ಲಿ ಸಿದ್ಧಿಯಾಗಿದೆ. ಇವರು ಕುಂದಾಪುರದ ಮೂಲದವ ರಾಗಿದ್ದು ಆಂಧ್ರಪ್ರದೇಶದಲ್ಲಿ ನೆಲೆ ಯಾಗಿದ್ದಾರೆ. ಈಗ ತಾಯಿ ಮಗ ಇಬ್ಬರೂ ಒಟ್ಟಿಗೆ ಮಠಕ್ಕೆ ಭೇಟಿ ನೀಡಿ, ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದು 40 ವರ್ಷಗಳ ಹಿಂದೆ ಮಾಡಿದ್ದ ಸಂಕಲ್ಪ ಈಡೇರಿಸಿಕೊಂಡಿದ್ದಾರೆ.

ಅನಂತರ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆಯೊಂದಿಗೆ ಕೋಟಿಗೀತಾ ಲೇಖನ ಯಜ್ಞ ದೀಕ್ಷೆ ಪಡೆದರು. ಜೂ| ಎನ್‌ಟಿಆರ್‌ ಜತೆಗೆ ನಟ ರಿಷಬ್‌ ಶೆಟ್ಟಿ ಹಾಗೂ ನಿರ್ದೇಶಕ ಪ್ರಶಾಂತ್‌ ನೀಲ್‌ ದಿನವಿಡೀ ಇದ್ದು, ದೇವಸ್ಥಾನದಲ್ಲೇ ಒಟ್ಟಿಗೆ ಅನ್ನಪ್ರಸಾದ ಸ್ವೀಕರಿಸಿದರು. ಇನ್ನೂ ವಿಶೇಷವೆಂದರೆ ಜೂ| ಎನ್‌ಟಿಆರ್‌ ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡುವ ಮೂಲಕ ಎಲ್ಲರನ್ನು ಚಕಿತಗೊಳಿಸಿದರು.

ಕುಂದಾಪುರ ಮೂಲದವರು
ತೆಲುಗು ದಿಗ್ಗಜ ನಟ ಎನ್‌ಟಿಆರ್‌ ಅವರ ಪುತ್ರ ನಂದಮೂರಿ ಹರಿಕೃಷ್ಣ ಅವರು ವಿವಾಹವಾಗಿರುವುದು ಕುಂದಾಪುರ ಮೂಲದ ಶಾಲಿನಿ ಭಾಸ್ಕರ್‌ ರಾವ್‌ ಅವರನ್ನು. ಇವರ ಪುತ್ರ ಜೂ|ಎನ್‌ಟಿಆರ್‌ ತಾಯಿಯಂತೆಯೇ ಕನ್ನಡದಲ್ಲೇ ಮಾತನಾಡುತ್ತಾರೆ. ತಾಯಿಯ ಪೂರ್ವಜರು ಹಕ್ಲಾಡಿ ಸಮೀಪದ ನೂಜಾಡಿಯವರು ಎನ್ನಲಾಗುತ್ತಿದ್ದು, ಶಾಲಿನಿ ಅವರು ಚಿಕ್ಕವರಿದ್ದಾಗಲೇ ಹೈದರಾಬಾದ್‌ಗೆ ಹೋಗಿ ನೆಲೆಸಿದ್ದರು.

40 ವರ್ಷದಿಂದ ಅಮ್ಮನಿಗೆ ಆಸೆ ಇತ್ತು
ಅಮ್ಮನ ಪೂರ್ವಿಕರು ಮೂಲತಃ ಕುಂದಾಪುರದವರು. ಮಗನನ್ನೊಮ್ಮೆ ಉಡುಪಿ ಶ್ರೀ ಕೃಷ್ಣಮಠಕ್ಕೆ ಕರೆದುಕೊಂಡು ಬರಬೇಕು ಎಂಬ ಅವರ ಆಸೆ ಶನಿವಾರ ಈಡೇರಿದೆ. ಶ್ರಾವಣ ಮಾಸದ ವಿಶೇಷ ದಿನ ಹರಕೆ ಸಂಕಲ್ಪ ಪೂರ್ಣಗೊಂಡಿರುವುದು ಸಂತೋಷ ತಂದಿದೆ. ಇದೆಲ್ಲವೂ ಶ್ರೀ ಕೃಷ್ಣ ದೇವರ ಸ್ಕ್ರೀನ್‌ ಪ್ಲೇ ಆಗಿದೆ ಎಂದು ನಟ ಜೂ| ಎನ್‌ಟಿಆರ್‌ ತಿಳಿಸಿದರು.

ಸರ್ವೇ ಜನಾಃ ಸುಖೀನೋ ಭವಂತು…
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸರ್ವೇ ಜನಾಃ ಸುಖೀನೋ ಭವಂತು’ ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ. ನಾನು ಮನೆಯಲ್ಲಿ ಪ್ರತಿದಿನ ಉಡುಪಿ ಊಟ ಮಾಡುತ್ತೇನೆ ಎಂದರು. ರಿಷಬ್‌ ಶೆಟ್ಟಿ ತುಂಬಾ ಇಷ್ಟಪಟ್ಟ, ದೇವರು ಕೊಟ್ಟ ಗೆಳೆಯ. ರಿಷಬ್‌ ಅವರ ಜತೆ ಮಠಕ್ಕೆ ಬಂದಿರುವುದು ಖುಷಿಯಾಗಿದೆ. ರಿಷಬ್‌ಗ ನ್ಯಾಷನಲ್‌ ಅವಾರ್ಡ್‌ ಬಂದಿರುವುದು ತುಂಬಾ ಖುಷಿ ನೀಡಿದೆ. ನಿರ್ದೇಶಕ ಪ್ರಶಾಂತ್‌ ನೀಲ್‌ ಕೂಡ ನಮ್ಮ ಜತೆಗಿದ್ದಾರೆ ಎಂದರು.

ಬಹಳ ಸಮಯದ ಅನಂತರ ಭೇಟಿ: ರಿಷಬ್‌ ಶೆಟ್ಟಿ
ಜೂ|ಎನ್‌ಟಿಆರ್‌ ಜತೆ ಅಣ್ಣತಮ್ಮನ ಸಂಬಂಧವಿದೆ. ಅವರು ಆಂಧ್ರಪ್ರದೇಶದವರು ಎಂಬ ಭಾವನೆ ಬರುವುದಿಲ್ಲ. ಬಹಳ ಸಮಯದ ಅನಂತರ ಭೇಟಿಯಾಗುವ ಅವಕಾಶ ಸಿಕ್ಕಿತು. ಇತ್ತೀಚೆಗೆ ಅವರು ಉಡುಪಿ ಶ್ರೀಕೃಷ್ಣಮಠಕ್ಕೆ ಬರಬೇಕು ಎಂದು ಹೇಳಿದ್ದು, ಜತೆಯಾಗಿ ಶ್ರೀಕೃಷ್ಣಮಠಕ್ಕೆ ಬಂದು ದೇವರ ದರ್ಶನ ಮಾಡಿದೆವು. ಕಾಂತರಾ ಪ್ರೀಕ್ವೆಲ್‌ ಚಿತ್ರೀಕರಣ ನಡೆಯುತ್ತಿದೆ ಎಂದು ರಿಷಬ್‌ ಶೆಟ್ಟಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next