ಮೈಸೂರು: ಚುನಾವಣೆಯಲ್ಲಿ ಎದುರಾಗುವ ಯಾವುದೇ ಸವಾಲು ಎದುರಿಸಲು ಪಕ್ಷ ಗಟ್ಟಿಗೊಳಿಸುವ ಜತೆಗೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿ, ಕಾರ್ಯಕರ್ತರಾಗಲೀ, ಮುಖಂಡರಾಗಲಿ ಪಕ್ಷದ ಹಿರಿಯರಿಂದ ಬರುವ ಸೂಚನೆ ಕಾರ್ಯರೂಪಕ್ಕೆ ತರಬೇಕಿದ್ದು, ಆ ಮೂಲಕ ಎಲ್ಲರು ತಮಗೆ ನೀಡಲಾಗುವ ಜವಾಬ್ದಾರಿಯನ್ನು ಪೂರ್ಣ ಪ್ರಮಾಣದಲ್ಲಿ ಮುಗಿಸಬೇಕು ಎಂದರು.
ಚುನಾವಣೆ ಎದುರಾಗುವ ಯಾವುದೇ ಸವಾಲು ಎದುರಿಸಲು ಕಾರ್ಯಕರ್ತರ ಪಡೆ ಕಟ್ಟಬೇಕಿದ್ದು, ಪಕ್ಷದ ಕಾರ್ಯಕರ್ತರ ಸಂಖ್ಯೆ, ಪಕ್ಷ ನಂಬಿ ಬರುವವರ ಸಂಖ್ಯೆ ಹೆಚ್ಚಾಗಬೇಕು. ಅಲ್ಲದೆ ಬಿಜೆಪಿಯವರು ನಮ್ಮ ಮನೆಗೆ ಬಂದಿದ್ದರು, ನಮ್ಮ ಕಷ್ಟಸುಖಗಳನ್ನು ಆಲಿಸಿದರು ಎಂಬ ಭಾವನೆ ಮತದಾರರಲ್ಲಿ ಮೂಡುವಂತೆ ಮಾಡಬೇಕಿದೆ ಎಂದು ತಿಳಿಸಿದರು.
ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಕೈ ಮುಗಿದು ಹೋಗುವ ಬದಲಿಗೆ ಈಗಿನಿಂದಲೇ ಅವರನ್ನು ಸಂಪರ್ಕಿಸುವ ಕೆಲಸವಾಗಬೇಕಿದೆ. ಆ ಮೂಲಕ ಚುನಾವಣೆ ಸಂದರ್ಭದಲ್ಲಿ ಎದುರಾಗುವ ಕಾರ್ಯಕರ್ತರನ್ನು, ಪಕ್ಷಕ್ಕೆ ನಿಜವಾಗಿ ಬೆಂಬಲ ಕೊಡುವವರು ಯಾರು, ಯಾವ್ಯಾವ ಸಂಘಟನೆಗಳು ಇದೆ,
ಪಕ್ಷಕ್ಕೆ ಶಕ್ತಿ ತುಂಬಲ ಮುಖಂಡರು ಇದ್ದರೆ ಅಂತವರನ್ನು ಭೇಟಿ ಮಾಡಿ ಮಾತಾಡಬೇಕು. ಪಕ್ಷದ ಸದಸ್ಯತ್ವ, ಹೊಸದಾಗಿ ಪಕ್ಷದ ಸದಸ್ಯರನ್ನಾಗಿ ಮಾಡುವುದು ಸೇರಿದಂತೆ ಇನ್ನಿತರ ಅಂಶಗಳನ್ನು ಪರಿಗಣಿಸಿ ಕೆಲಸ ಮಾಡಬೇಕಿದ್ದು, ಪಕ್ಷದ ವಿಸ್ತಾರಕರು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸಬೇಕು ಎಂದು ಹೇಳಿದರು.
ಅಲ್ಲದೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್‌ಗಾಗಿ ಅರ್ಜಿ ಹಾಕುವವರೂ 15 ದಿನಗಳ ಕಾಲ ವಿಸ್ತಾರಕರಾಗಿ ಕೆಲಸ ಮಾಡಿದ್ದಲ್ಲಿ ಮಾತ್ರ ಅವರ ಅರ್ಜಿಯನ್ನು ಪರಿಗಣಿಸಲಾಗುವುದು, ಈ ಬಗ್ಗೆ ಪಕ್ಷದ ಹೈಕಮಾಂಡ್ ಆದೇಶವಾಗಿದೆ. ರಾಜಾಧ್ಯಕ್ಷರ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಎಲ್ಲರಿಗೂ ಎರಡು ಜಿಲ್ಲೆಗಳನ್ನು ವಹಿಸಲಾಗಿದ್ದು, ತಮಗೆ ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ಜವಾಬ್ದಾರಿ ನೀಡಲಾಗಿದೆ ಎಂದರು.
ಸಂಸದ ಪ್ರತಾಪಸಿಂಹ, ಮಾಜಿ ಸಚಿವ ಎಸ್.ಎ.ರಾಮದಾಸ್, ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಎನ್.ಸತೀಶ್, ನಂದೀಶ್ ಪ್ರೀತಂ, ಎಚ್.ವಿ.ರಾಜೀವ್, ಮಾರ್ಬಳ್ಳಿ ಮೂರ್ತಿ, ವಿಬಾಗೀಯ ಪ್ರಬಾರಿಗಳಾದ ಎಲ್.ನಾಗೇಂದ್ರ, ಸುರೇಶ್‌ಬಾಬು, ಉಪ ಮೇಯರ್ ರತ್ನಾಲಕ್ಷ್ಮಣ ಇನ್ನಿತರರು ಹಾಜರಿದ್ದರು.