ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ ಪರಿಣಾಮ ಭಾರತದ ಮೊಬೈಲ್ ಆಪರೇಟರ್ ಕಂಪನಿಗಳಿಗೆ ಪ್ರತಿ ಗಂಟೆಗೆ ಬರೋಬ್ಬರಿ 24.5 ಮಿಲಿಯನ್ (ಸುಮಾರು 2.45 ಕೋಟಿ ರೂಪಾಯಿ) ನಷ್ಟ ಉಂಟಾಗಿದೆ ಎಂದು ವರದಿ ತಿಳಿಸಿದೆ.
ಪೌರತ್ವ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಿದ ನಂತರ ಮೂರು ವಾರಗಳಿಂದ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ವಯ ನೆರೆಯ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡುವ ಉದ್ದೇಶ ಹೊಂದಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮುಸ್ಲಿಂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ವಿಪಕ್ಷಗಳು ಭಾರೀ ಪ್ರತಿಭಟನೆ, ಆಕ್ಷೇಪ ವ್ಯಕ್ತಪಡಿಸಿದ್ದವು. ದೇಶಾದ್ಯಂತ ಪ್ರತಿಭಟನೆಯ ಕಾವು ಏರುತ್ತಿದ್ದಂತೆಯೇ ಪ್ರತಿಭಟನೆಯನ್ನು ಹಾಗೂ ಸುಳ್ಳು ಸುದ್ದಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಪೊಲೀಸರ ನಿಯೋಜನೆ ಜತೆಗೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಆದೇಶ ಹೊರಡಿಸಿತ್ತು.
ಉತ್ತರಪ್ರದೇಶದ 20 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲು ಸರ್ಕಾರ ಆದೇಶ ಹೊರಡಿಸಿತ್ತು ಎಂದು ಟೆಲಿಕಾಂ ಇಂಡಸ್ಟ್ರೀಸ್ ರಾಯಟರ್ಸ್ ಗೆ ತಿಳಿಸಿದೆ. ರಾಷ್ಟ್ರರಾಜಧಾನಿ ದಿಲ್ಲಿ ಹೊರವಲಯದಲ್ಲಿಯೂ ಡಿ.28ರ ಬೆಳಗ್ಗೆವರೆಗೂ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು ಎಂದು ವರದಿ ವಿವರಿಸಿದೆ.
ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವುದಕ್ಕೆ ಮೊದಲ ಆದ್ಯತೆ ನೀಡಬಾರದು ಎಂದು ಸೆಲ್ಯುಲರ್ ಆಪರೇಟರ್ಸ್ಸ್ ಅಸೋಸಿಯೇಶನ್ ಆಫ್ ಇಂಡಿಯಾ(ಸಿಓಎಐ) ಅಭಿಪ್ರಾಯವ್ಯಕ್ತಪಡಿಸಿದೆ. ಭಾರ್ತಿ ಏರ್ ಟೆಲ್, ವೋಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಜಿಯೋ ಕೂಡಾ ಸಿಓಎಐನ ಸದಸ್ಯ ಕಂಪನಿಗಳಾಗಿವೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ ಪ್ರತಿ ಗಂಟೆಗೆ 24.5 ಮಿಲಿಯನ್ ನಷ್ಟ ಉಂಟಾಗಿದೆ ಎಂದು ಸಿಓಎಐನ ಪ್ರಧಾನ ನಿರ್ದೇಶಕ ರಾಜನ್ ಮ್ಯಾಥ್ಯೂಸ್ ರಾಯಟರ್ಸ್ ಗೆ ತಿಳಿಸಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ 145 ದಿನಗಳ ಕಾಲ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು ಎಂದು ವರದಿ ತಿಳಿಸಿದೆ.