ತೆಲಂಗಾಣ: ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 18 ವರ್ಷದ ಯುವತಿಯನ್ನು ತಂದೆಯೇ ಎದುರೇ ಕಾರಿನಲ್ಲಿ ಬಂದ ನಾಲ್ವರ ತಂಡವೊಂದು ಅಪಹರಿಸಿಕೊಂಡು ಹೋಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಅಪಹರಣದ ಬಳಿಕ ಯುವತಿ ಶಾಲಿನಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ತಾನು ಅಪಹರಣ ಮಾಡಿರುವ ವ್ಯಕ್ತಿಯನ್ನು ಕಳೆದ ಒಂದು ವರ್ಷದ ಹಿಂದೆಯೇ ಮದುವೆಯಾಗಿದ್ದೇನೆ. ನಾನು ವಯಸ್ಕಳಾದಳೂ ನನ್ನ ಪೋಷಕರು ನಮ್ಮ ಸಂಬಂಧವನ್ನು ಒಪ್ಪಿಕೊಳ್ಳಲಿಲ್ಲ. ನನ್ನ ಗಂಡನ ವಿರುದ್ಧವೇ ದೂರು ದಾಖಲು ಮಾಡಿದ್ದರು. ನಾವು ಮದುವೆಯಾಗಿದ್ದೇವೆ ಆದರೆ ನನ್ನ ಗಂಡ ದಲಿತ ಎನ್ನುವ ಕಾರಣಕ್ಕೆ ಅವರೂ ಈಗಲೂ ನಮ್ಮ ಸಂಬಂಧವನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಯುವತಿ ಹೇಳಿದ್ದಾಳೆ.
ಘಟನೆ ಹಿನ್ನೆಲೆ: ಜಿಲ್ಲೆಯ ಚಂದೂರ್ತಿ ಮಂಡಲದ ಮೂಡೆಪಲ್ಲಿ ಗ್ರಾಮದಲ್ಲಿ ಬೆಳಿಗ್ಗೆ 5.30 ರ ಸುಮಾರಿಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ತಂದೆಯ ಜೊತೆ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ನಾಲ್ವರ ತಂಡ ತಂದೆಗೆ ಹಲ್ಲೆ ನಡೆಸಿ ಯುವತಿಯನ್ನು ಅಪಹರಿಸಿಕೊಂಡು ಹೋಗಿದ್ದರು.
ಯುವತಿಯ ತಂದೆಯನ್ನು ಥಳಿಸಿ ಮಗಳನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸೋಮವಾರವಷ್ಟೇ ಯುವತಿಗೆ ಬೇರೊಬ್ಬ ಯುವಕನ ಜೊತೆ ಮದುವೆ ನಿಶ್ಚಯವಾಗಿತ್ತು. ಇದೇ ಕಾರಣಕ್ಕೆ ಯುವಕ ಮತ್ತು ಆತನ ಸ್ನೇಹಿತರು ಯುವತಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಪೊಲೀಸರು ಯುವತಿಯ ಹಾಗೂ ಅಪಹರಣಕಾರರ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ.