ಮನುಷ್ಯನಿಗೆ ಸಾವು ಹೇಗೆ, ಯಾವ ರೀತಿಯಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಆರೋಗ್ಯವಾಗಿದ್ದ ವ್ಯಕ್ತಿ ಕ್ಷಣಾರ್ಧದಲ್ಲೇ ಕುಸಿದು ಬಿದ್ದು ಜೀವ ಹೋಗಿರುವ ಅದೆಷ್ಟೋ ನಿದರ್ಶನಗಳೂ ಇವೆ ಅದರಂತೆ ಇಲ್ಲೋರ್ವ ವ್ಯಕ್ತಿ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದು ಪ್ರದಕ್ಷಿಣೆ ಹಾಕುವ ವೇಳೆ ಹೃದಯಾಘಾತಗೊಂಡು ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಹೈದರಾಬಾದ್ನ ಕೆಪಿಎಚ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ(ನ.11) ನಡೆದಿದೆ.
ಆಂದ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಕದಿರಿ ಮಂಡಲದ ಕೆ.ವಿಷ್ಣುವರ್ಧನ್ (31) ಮೃತ ದುರ್ದೈವಿ. ಈತ ಹೈದರಾಬಾದ್ನ ಕೆಪಿಎಚ್ಬಿ ಕಾಲೋನಿಯಲ್ಲಿರುವ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದು ಇಲ್ಲಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ವಿಷ್ಣುವರ್ಧನ್ ದಿನಂಪ್ರತಿ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುತ್ತಿದ್ದ ಎನ್ನಲಾಗಿದೆ ಅದರಂತೆ ಸೋಮವಾರ(ನ.11) ರಂದು ಬೆಳಿಗ್ಗೆ ಸುಮಾರು 8.30 ಗಂಟೆಯ ಸುಮಾರಿಗೆ ಕೆಪಿಎಚ್ಬಿ ಕಾಲೋನಿ ಬಳಿ ಇರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದು ಪ್ರದಕ್ಷಿಣೆ ಹಾಕುವ ವೇಳೆ ಇದ್ದಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ ಈ ವೇಳೆ ವಿಷ್ಣುವರ್ಧನ್ ನೀರು ಕುಡಿಯಲು ಹೋಗುತಿದ್ದ ವೇಳೆ ಒಮ್ಮೆಲೆ ಕುಸಿದು ಬಿದ್ದಿದ್ದಾರೆ ಕೂಡಲೇ ಅಲ್ಲಿದ್ದ ಇತರರು ವಿಷ್ಣುವರ್ಧನ್ ಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಅಷ್ಟೋತ್ತಿಗಾಗಲೇ ವಿಷ್ಣುವರ್ಧನ್ ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ.
ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ವಿಷುವರ್ಧನ್ ಕುಸಿದು ಬೀಳುವ ದೃಶ್ಯ ಸೆರೆಯಾಗಿದೆ.ಅಲ್ಲದೆ ಘಟನೆಗೆ ಸಂಬಂಧಿಸಿ ವಿಷ್ಣುವರ್ಧನ್ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು ಎಂದು ಸಹೋದರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷ್ಣುವರ್ಧನ್ ಸಹೋದರಿಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.