ಹೈದರಾಬಾದ್:”ದೇಶಕ್ಕೆ ಹೊಸ ರೀತಿಯ ಪರ್ಯಾಯ ರಾಜಕೀಯ ತಂತ್ರಗಾರಿಕೆ ಬೇಕಾಗಿದೆಯೇ ಹೊರತು, ಹೊಸ ರಾಜಕೀಯ ಮೈತ್ರಿಕೂಟ ಅಲ್ಲ’ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಹೇಳಿದ್ದಾರೆ.
ಹೈದರಾಬಾದ್‌ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ 21ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.
2024ರ ಲೋಕಸಭೆ ಚುನಾವಣೆಗಾಗಿ, ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳನ್ನು ಒಳಗೊಂಡ ಹೊಸ ಮೈತ್ರಿಕೂಟ ರಚನೆಗೆ ಖುದ್ದು ಚಂದ್ರಶೇಖರ ರಾವ್ ಮುಂದಾಗಲಿದ್ದಾರೆ, ರಾಷ್ಟ್ರ ಮಟ್ಟದ ರಾಜಕೀಯದಲ್ಲಿ ಮುಖ್ಯ ಭೂಮಿಕೆಗೆ ಅವಕಾಶ ನಿರೀಕ್ಷಿಸಲಿದ್ದಾರೆ ಎಂಬ ಚರ್ಚೆಗಳ ನಡುವೆಯೇ ಇಂಥ ಹೇಳಿಕೆಯನ್ನು ತೆಲಂಗಾಣ ಸಿಎಂ ನೀಡಿದ್ದಾರೆ.
“ಭಾರತ ರಾಷ್ಟ್ರ ಸಮಿತಿ ಎಂಬ ಹೊಸ ವೇದಿಕೆ ರಚಿಸಲು ಸಲಹೆಗಳು ಬರುತ್ತಿವೆ. ನಂತರ ಅದನ್ನೇ ರಾಷ್ಟ್ರೀಯ ಪಕ್ಷವನ್ನಾಗಿ ಮಾರ್ಪಾಡು ಮಾಡಬೇಕು ಎಂಬ ಬೇಡಿಕೆಗಳೂ ವ್ಯಕ್ತವಾಗಿವೆ. ದೇಶಕ್ಕೆ ಈಗ ಹೊಸ ರಾಜಕೀಯ ತಂತ್ರಗಾರಿಕೆಯ ಅಗತ್ಯವೇ ಹೊರತು, ಪರ್ಯಾಯ ರಾಜಕೀಯ ಒಕ್ಕೂಟ ಅಲ್ಲ’ ಎಂದು ಹೇಳಿದ್ದಾರೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವನ್ನು ಕಿತ್ತೂಗೆಯಬೇಕು ಎಂದು ಎಡಪಕ್ಷಗಳು ತಮ್ಮಲ್ಲಿ ಪ್ರಸ್ತಾಪಿಸಿದ್ದವು. ಆದರೆ, ಅದನ್ನು ತಿರಸ್ಕರಿಸಿ, ಕೇವಲ ಜನರ ಅಭಿವೃದ್ಧಿಯೇ ತಮ್ಮ ಆದ್ಯತೆ ಎಂದು ಆ ಪಕ್ಷದ ಮುಖಂಡರಿಗೆ ತಿಳಿಸಿದ್ದಾಗಿ ಕಾರ್ಯಕ್ರಮದಲ್ಲಿ ಕೆಸಿಆರ್ ಪ್ರಸ್ತಾಪಿಸಿದ್ದಾರೆ.