ಹೊಸದಿಲ್ಲಿ : ಕಳೆದ ತಿಂಗಳಲ್ಲಿ ಕರೀಮ್ ನಗರದಲ್ಲಿ ಚುನಾವಣಾ ಪ್ರಚಾರಾರ್ಥ ಮಾಡಿದ್ದ ಸಾರ್ವಜನಿಕ ಭಾಷಣದಲ್ಲಿ ಹಿಂದುಗಳ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಮೇಲ್ನೋಟಕ್ಕೇ ತಪ್ಪುಗಾರರಾಗಿ ಕಂಡುಬಂದಿರುವ ಕಾರಣ ಅವರಿಗೆ ಚುನಾವಣಾ ಆಯೊಗ ಎ.12ರ ಸಂಜೆಯೊಳಗೆ ಉತ್ತರಿಸುವಂತೆ ಶೋಕಾಸ್ ನೊಟೀಸ್ ಜಾರಿ ಮಾಡಿದೆ.
ಎ.12ರ ಸಂಜೆಯೊಳಗೆ ಉತ್ತರಿಸದಿದ್ದಲ್ಲಿ ಯಾವುದೇ ಮರು ಉಲ್ಲೇಖವಿಲ್ಲದೆ ನಿರ್ಧಾರ ಕೈಗೊಳ್ಳಲಾಗುವುದೆಂದು ಚುನಾವಣಾ ಆಯೋಗ ನೊಟೀಸಿನಲ್ಲಿ ಹೇಳಿದೆ.
ವಿಎಚ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎಂ ರಾಮ ರಾಜು ಅವರು ಕೆಸಿಆರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದ್ದರು. ಕಳೆದ ಮಾರ್ಚ್ 17ರ ಕರೀಂ ನಗರ ಚುನಾವಣಾ ರಾಲಿಯಲ್ಲಿ ಕೆಸಿಆರ್ ಅವರು ಹಿಂದುಗಳ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಮತಗಳನ್ನು ಪಡೆಯಲು ಯತ್ನಿಸಿದ್ದರು ಎಂದು ರಾಜು ದೂರಿದ್ದರು.
ಕೆಸಿಆರ್ ಹೇಳಿಕೆಗಳು ತೆಲುಗು ಭಾಷೆಯಲ್ಲಿದ್ದು ಚುನಾವಣಾ ಆಯೋಗವು ಅವುಗಳನ್ನು ಅಂತೆಯೇ ಮುಂದಿಟ್ಟಿದ್ದು ಅದರ ಇಂಗ್ಲಿಷ್ ಭಾಷಾಂತರ ಒದಗಿಸಿಲ್ಲ.
ಏಳನೇ ಹಂತದ ಲೋಕಸಭಾ ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಿಸಲಾದ ಮಾರ್ಚ್ 10ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತ್ತು.