Advertisement

ವರ ತಾಳಿ ಕಟ್ಟಿದ ಬಳಿಕ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ವಧು ಸಾವು

12:21 PM Jul 09, 2018 | udayavani editorial |

ಹೈದರಾಬಾದ್‌ : ಹಸೆ ಮಣೆ ಏರಿದ 23ರ ಹರೆಯದ ನೂತನ ವಧುವಿಗೆ ವರನು ಮಂಗಲ ಸೂತ್ರ ಕಟ್ಟಿದ ಒಡನೆಯೇ, ವಧು ಮದುವೆ ಮಂಟಪದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತ ಪಟ್ಟ ಕರುಣಾಜನಕ ಘಟನೆ ಮೊನ್ನೆ ಶನಿವಾರ ಜು.7ರಂದು ತೆಲಂಗಾಣ ಪಟ್ಟಣದಲ್ಲಿ ನಡೆದಿದೆ.

Advertisement

ತೆಲಂಗಾಣದ ಕರ್ನೂಲ್‌ ಜಿಲ್ಲೆಯ ಅಚಾಮ್‌ಪೆಟ್‌ ಪಟ್ಟಣದಲ್ಲಿ ಈ ದುರ್ಘ‌ಟನೆ ನಡೆಯಿತು. ಮೃತ ಪಟ್ಟ ವಧುವಿನ ಹೆಸರು ಕೊಂಡಿ ನಿರಂಜನಮ್ಮ ಅಲಿಯಾಸ್‌ ಲಕ್ಷ್ಮೀ. ವರ ವೆಂಕಟೇಶ್‌ ಅವರು ಮಂಗಲ ಸೂತ್ರ ಕಟ್ಟಿದ ಒಡನೆಯೇ ವಧು ನಿರಂಜನಮ್ಮ ಹೃದಯಾಘಾತಕ್ಕೆ ಗುರಿಯಾಗಿ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಮೃತಪಟ್ಟರು. ಮದುವೆ ಸಮಾರಂಭವನ್ನು ವಧುವಿನ ಮನೆಯಲ್ಲೇ ಏರ್ಪಡಿಸಲಾಗಿತ್ತು. 

ವರನು ತಾಳಿ ಕಟ್ಟಿದ ಬಳಿಕ ಮನೆಯವರೆಲ್ಲ ನೂತನ ವಧು-ವರನ ಮೇಲೆ ಅಕ್ಷತೆ ಹಾಕಿದ ಬಳಿಕ ಪುರೋಹಿತರು ಅರುಂಧತಿ ನಕ್ಷತ್ರ ನೋಡಲು ಎದ್ದೇಳಿ ಎಂದು ಹೇಳಿದರು. ಆದರೆ ಅಷ್ಟರೊಳಗಾಗಿ ಮದುವೆ ಮಂಟಪದಲ್ಲೇ ಕುಸಿದು ಬಿದ್ದ ವಧು ನಿರಂಜನಮ್ಮ ಮೇಲೇಳಲೇ ಇಲ್ಲ. ಒಡನೆಯೇ ಮನೆಯವರು ವಧುವನ್ನು ಆಸ್ಪತ್ರೆಗೆ ಒಯ್ದರು. ಆದರೆ ಆಕೆ ಅದಾಗಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು. 

ವಧುವಿನ ಹಠಾತ್‌ ಸಾವಿಗೆ ಎರಡೂ ಕಡೆಯವರು ಯಾವುದೇ ಸಂದೇಹ ವ್ಯಕ್ತಪಡಿಸಿಲ್ಲ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next