Advertisement

ತಪ್ಪಿಸಿಕೊಳ್ಳಲು ತಿಪ್ಪರಲಾಗ ಹಾಕಿದ್ದ ತೇಜಸ್‌

12:03 PM Aug 07, 2018 | Team Udayavani |

ಬೆಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮಿಗಳಾದ ಪ್ರಸಾದ್‌ ಬಾಬು ಹಾಗೂ ಬಾಲಾಜಿ ಅವರ ಹತ್ಯೆಯ ಪ್ರಮುಖ ಆರೋಪಿ ತೇಜಸ್‌, ಕುಖ್ಯಾತ ರೌಡಿ ಸೈಕಲ್‌ರವಿ ಹೆಸರು ಹೇಳಿ ಬಚಾವಾಗಲು ಪ್ರಯತ್ನಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.

Advertisement

ಪ್ರಕರಣದ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ಸಂದರ್ಭದಲ್ಲಿ ತಾನು ಬಚಾವಾಗಲು ಹತ್ಯೆಯಾದ ಉದ್ಯಮಿಗಳಿಗೂ ಸೈಕಲ್‌ ರವಿಗೂ ನಂಟಿತ್ತು ಎಂದು ಕಥೆ ಕಟ್ಟಿದ್ದ. ಸೈಕಲ್‌ ರವಿ ಬಂಧನವಾಗಿರುವುದರಿಂದ ತಮ್ಮನ್ನೂ ಬಂಧಿಸಬಹುದು ಎಂಬ ಆತಂಕದಿಂದ ಉದ್ಯಮಿಗಳು ನಾಪತ್ತೆಯಾಗಿರಬಹುದು ಎಂದು ತನಿಖಾಧಿಕಾರಿಗಳ ಬಳಿ ಹೇಳಿ ದಿಕ್ಕು ತಪ್ಪಿಸಲು ಪಯತ್ನಿಸಿದ್ದ ಎಂದು ಹೇಳಲಾಗಿದೆ.

ಉದ್ಯಮಿಗಳು ನಾಪತ್ತೆಯಾದ ಮರು ದಿನವೇ ಪ್ರಸಾದ್‌ ಬಾಬು ಪತ್ನಿ ಗಿರಿನಗರ ಪೊಲೀಸ್‌ ಠಾಣೆಗೆ ದೂರು ನೀಡಿ, ತೇಜಸ್‌ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ಆಗ ಪೊಲೀಸರು ವಿಚಾರಣೆಗೆ ಕರೆತಂದಾಗ ಆರೋಪಿ ತೇಜಸ್‌, ಪ್ರಸಾದ್‌ ಬಾಬು ಹಾಗೂ ಬಾಲಾಜಿಗೆ ಸೈಕಲ್‌ ರವಿಗೆ ನಂಟಿತ್ತು. ಹೀಗಾಗಿ, ತಲೆಮರೆಸಿಕೊಂಡಿರಬಹುದು ಎಂದು ಹೇಳಿದ್ದ. ಇದನ್ನು ನಂಬಿ ಆರೋಪಿಯನ್ನು ವಾಪಸ್‌ ಕಳುಹಿಸಲಾಗಿತ್ತು.

ಇದಾದ ನಂತರ, ಪೊಲೀಸರಿಗೆ ಅನುಮಾನ ಬರಬಾರದು ಎಂದು ಉದ್ಯಮಿಗಳ ಕುಟುಂಬಸ್ಥರನ್ನು ಭೇಟಿ ಮಾಡಿ ತೇಜಸ್‌, ಸಾಂತ್ವನ ಹೇಳಿದ್ದ. ಜೆ.ಪಿ.ನಗರದ ಆತನ ಕಚೇರಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಹ ಪೊಲೀಸರಿಗೆ ನೀಡಿದ್ದ. ಉದ್ಯಮಿಗಳನ್ನು ಹುಡುಕಾಡಲು ತಾನೂ ಸಹಕರಿಸುವುದಾಗಿ ತಿಳಿಸಿದ್ದ.

ಆರೋಪಿ ವರ್ತನೆ ಬಗ್ಗೆ ಅನುಮಾನಗೊಂಡ ಪೊಲೀಸರು, ಆತನ ಕಚೇರಿ ಬಿಟ್ಟು ಬೇರೆಡೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಇತರೆ ಆರೋಪಿಗಳಾದ ಅನಿಲ್‌ ಮತ್ತು ಮಣಿಕಂಠನ ಮಾಹಿತಿ ಸಿಕ್ಕಿತ್ತು. ಅವರ ಹೇಳಿಕೆ ಆಧರಿಸಿ ತೇಜಸ್‌ನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಹಣದ ವಿಚಾರಕ್ಕೆ ಕೊಲೆ: ಉದ್ಯಮಿಗಳ ಹತ್ಯೆ ಹಣಕಾಸಿನ ವಿಚಾರಕ್ಕೆ ನಡೆದಿರುವುದು ಖಚಿತವಾಗಿದೆ. ಉದ್ಯಮಿಗಳು ಆರೋಪಿ ತೇಜಸ್‌ಗೆ ಹಣ ನೀಡಿದ್ದರು. ವಾಪಸ್‌ ಕೊಡುವಂತೆ ಒತ್ತಡ ಹೇರುತ್ತಿದ್ದರು. ಹೀಗಾಗಿ, ಕೊಲೆಗೆ ಸಂಚು ರೂಪಿಸಿದ್ದ. ಪೂರ್ವನಿಯೋಜನೆಯಂತೆ ಉದ್ಯಮಿಗಳಿಗೆ ಕರೆ ಮಾಡಿದ ತೇಜಸ್‌, ಹಣ ವಾಪಸ್‌ ಕೊಡುವುದಾಗಿ ಹೇಳಿ ಅಂಜನಾಪುರ ಬಳಿಯ ತನ್ನ ಸಿಮೆಂಟ್‌ ಗೋಡೌನ್‌ಗೆ ಕರೆಸಿಕೊಂಡು ಹತ್ಯೆಗೈದಿದ್ದ.

ನಂತರ ಹಾರೋಹಳ್ಳಿ ಪಕ್ಕದಲ್ಲಿರುವ ಕೈಗಾರಿಕಾ ಪ್ರದೇಶದ ಖಾಲಿ ಸ್ಥಳದಲ್ಲಿ ಗುಂಡಿ ತೋಡಿ ಸುಟ್ಟು, ಬಳಿಕ ಹೂತು ಹಾಕಿದ್ದಾನೆ. ಮೃತ ದೇಹಗಳ ಅಸ್ಥಿಪಂಜರಗಳು ಪತ್ತೆಯಾಗಿದ್ದು, ಡಿಎನ್‌ಎ ಪರೀûಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಡಿಸಿಪಿ ಶರಣಪ್ಪ ಹೇಳಿದರು.

ನಿವೃತ್ತ ಡಿಜಿಪಿ ಪುತ್ರನ ಮೇಲೆ ಹಲ್ಲೆ: ಒಂದು ವರ್ಷದ ಹಿಂದೆ ಆರೋಪಿ ತೇಜಸ್‌ ಮತ್ತು ತಂಡ, ಕಾರಾಗೃಹ ಇಲಾಖೆ ನಿವೃತ್ತ ಡಿಜಿಪಿ ಎಚ್‌.ಎನ್‌.ಸತ್ಯನಾರಾಯಣ್‌ ರಾವ್‌ ಅವರ ಪುತ್ರನ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಜೆ.ಪಿ.ನಗರ ಠಾಣೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.

ಇತರೆ 7 ಮಂದಿ ಬಂಧನ: ಈಮಧ್ಯೆ, ಪ್ರಕರಣ ಸಂಬಂಧ ಇತರೆ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸತೀಶ್‌ (24), ಆನಂದ್‌ (29), ಕೃಷ್ಣ (28), ಹರೀಶ್‌ ಕುಮಾರ್‌ (37), ಮುಖೇಶ್‌ (26), ಬಾಲಾಜಿ (25), ಯುವರಾಜು (31) ಬಂಧಿತರು. ಈ ಮೂಲಕ ಪ್ರಕರಣದಲ್ಲಿ ಒಟ್ಟು 10 ಆರೋಪಿಗಳನ್ನು ಬಂಧಿಸಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next