Advertisement

ತಹಶೀಲ್ದಾರ್‌ ಗಂಗಪ್ಪ ಸುತ್ತ ಅವ್ಯವಹಾರದ ಹುತ್ತ!

04:35 PM Feb 03, 2021 | Team Udayavani |

ಸಿಂಧನೂರು: ಅಕಾಲಿಕ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ಏಪ್ರಿಲ್‌-2015ರಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಅಂದಿನ ತಹಶೀಲ್ದಾರ್‌ ಗಂಗಪ್ಪ ವಿರುದ್ಧ ಸಹಾಯಕ ಆಯುಕ್ತರ ಕಚೇರಿ ಮೂಲಕ ನಡೆಸಿರುವ ತನಿಖೆ ಹಲವು ವರ್ಷಗಳ ಬಳಿಕ ತಹಶೀಲ್ದಾರ್‌ಗೆ ಕುತ್ತು ತಂದಿದ್ದು, ಹೆಚ್ಚಿನ ತನಿಖೆ ಜವಾಬ್ದಾರಿ ಪೊಲೀಸ್‌ ಇಲಾಖೆ ಹೆಗಲೇರಿದೆ.

Advertisement

ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಅರ್ಹ ಫಲಾನುಭವಿಗಳಿಗೆ ನೀಡಬೇಕಾದ ಮೊತ್ತದ ಪೈಕಿ ಬರೋಬ್ಬರಿ 2,35,83000 ರೂ. ದುರುಪಯೋಗ ಪಡಿಸಿಕೊಂಡಿರುವುದು ಪ್ರಾಥಮಿಕ ಹಂತದಲ್ಲಿ ಗುರುತಿಸಲಾಗಿದೆ. ಕೆಎಎಸ್‌ ದರ್ಜೆಯ ತಹಶೀಲ್ದಾರ್‌ ಆಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಡಿಸಿ ಅನುಮತಿ ನೀಡಿದ ನಂತರ ಸಹಾಯಕ ಆಯುಕ್ತರು ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದು, ಇಷ್ಟು ಪ್ರಮಾಣದ ಅವ್ಯವಹಾರ ಈಗ ಅಚ್ಚರಿಗೆ ಕಾರಣವಾಗಿದೆ.

10 ಹಳ್ಳಿಗಳಲ್ಲಿ ಅವ್ಯವಹಾರ ವಾಸನೆ: ತಾಲೂಕಿನ 100ಕ್ಕೂ ಹೆಚ್ಚು ಹಳ್ಳಿಗಳನ್ನು ಕೇಂದ್ರೀಕರಿಸಿಕೊಂಡು ಅಂದು ಸರ್ಕಾರದಿಂದ ಪರಿಹಾರ ಬಿಡುಗಡೆ
ಮಾಡಲಾಗಿತ್ತು. ಈ ವೇಳೆ ತಾಲೂಕಿನ ಮುಕ್ಕುಂದಾ ಗ್ರಾಮದಲ್ಲಿ 20, 39,750 ರೂ. ಜೇಬಿಗೆ ಇಳಿಸಲಾಗಿದೆ. ಬೂದಿವಾಳದಲ್ಲಿ 40, 4250 ರೂ., ಗುಂಜಳ್ಳಿಯಲ್ಲಿ 4,99,450 ರೂ., ಹುಡಾದಲ್ಲಿ 12,46250 ರೂ., ಸಾಲಗುಂದಾದಲ್ಲಿ 31,31820 ರೂ., ಸಾಸಲಮರಿಯಲ್ಲಿ 9,24480 ರೂ., ಸಿಂಗಾಪುರದಲ್ಲಿ 11,29000 ರೂ., ಅರಳಹಳ್ಳಿಯಲ್ಲಿ 4,48000 ರೂ., ಮಂಗನಾಳ ಡಿ.ಯಲ್ಲಿ 10.79750 ರೂ., ವಿರೂಪಾಪುರ ಗ್ರಾಮವೊಂದರಲ್ಲೇ 90,80,000 ರೂ. ಬೆಳೆ
ಹಾನಿ ಪರಿಹಾರ ದುರ್ಬಳಕೆಯಾಗಿದೆ. ಸದ್ಯಕ್ಕೆ ಇಲಾಖೆ ನಡೆಸಿರುವ ತನಿಖೆ ವರದಿಯಲ್ಲಿ ಈ 10 ಗ್ರಾಮ ಮುಖ್ಯವಾಗಿ ಗುರುತಿಸಲಾಗಿದೆ.

ನಿಯಮ ಪಾಲನೆ ಆಗಿಲ್ಲ: ಕೇಂದ್ರ ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ಮಾರ್ಗಸೂಚಿ ಆಧರಿಸಿ ಸಹಾಯಕ ಆಯುಕ್ತರು ಹೊರಡಿಸಿದ ಆದೇಶದಲ್ಲಿ 14 ಷರತ್ತುಗಳನ್ನು ವಿಧಿಸಿ ಬೆಳೆ ಪರಿಹಾರ ನೀಡಬೇಕಿತ್ತು. ತಹಶೀಲ್ದಾರ್‌ ಗಂಗಪ್ಪ ಪರಿಹಾರ ಹಂಚಿಕೆ ಸಂದರ್ಭದಲ್ಲಿ ಆ ಎಲ್ಲ ನಿಯಮ ಪಾಲಿಸಿಲ್ಲ. ಒಂದೇ ಜಮೀನಿಗೆ ಎರಡೆರಡು ಬಾರಿ ಪರಿಹಾರ ನೀಡಲಾಗಿದೆ.

ಕೆಲ ಪ್ರಕರಣಗಳಲ್ಲಿ ಕೃಷಿ ಜಮೀನಿಗಿಂತ ಹೆಚ್ಚಿನ ಭೂಮಿಗೆ ಪರಿಹಾರ ಕೊಡಲಾಗಿದೆ. ಭೂ ಪರಿವರ್ತನೆಯಾದ ಜಮೀನನ್ನು ಕೂಡ ಭತ್ತದ ಬೆಳೆ ಹಾನಿ ಪ್ರದೇಶವೆಂದು ಹೇಳಿ ಅವರಿಗೂ ಪರಿಹಾರ ಮೊತ್ತ ಹಂಚಿಕೆ ಮಾಡಲಾಗಿದೆ. ಭತ್ತ ಬೆಳೆ ನಾಟಿ ಮಾಡದೇ ಇದ್ದರೂ ಅಂತಹ ಹೊಲಗಳಲ್ಲಿ ಬೆಳೆ ನಷ್ಟವಾಗಿದೆ ಎಂದು ನಮೂದಿಸಿ, ಅನರ್ಹ ಫಲಾನುಭವಿಗಳ ಹೆಸರಿನಲ್ಲಿ ಬೃಹತ್‌ ಮೊತ್ತ ವಿನಿಯೋಗಿಸಿ ಸರ್ಕಾರಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ.ಬಹುತೇಕ ಷರತ್ತುಗಳು ಲೆಕ್ಕಕ್ಕೇ ಇಲ್ಲದಂತೆ ಹಣ ಖರ್ಚು ಮಾಡಿದ್ದರ ಹಿಂದೆ ಬೋಗಸ್‌ ವ್ಯವಹಾರದ ಶಂಕೆ ಮೂಡಿದೆ.

Advertisement

ದಾಖಲೆ ಪರಿಶೀಲನೆ ಸವಾಲು
ಬರೋಬ್ಬರಿ 2.38 ಕೋಟಿ ರೂ. ಅವ್ಯವಹಾರ ಆಗಿರುವುದರಿಂದ ಪ್ರಕರಣ ದಾಖಲಿಸಿಕೊಂಡ ತನಿಖಾ ಧಿಕಾರಿ ವಿಜಯಕೃಷ್ಣ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ದಾಖಲೆಗಳನ್ನು ಇದೀಗ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಸರ್ವೇ ನಂಬರ್‌, ಬ್ಯಾಂಕ್‌ ಖಾತೆ ವಿವರ, ಡಬಲ್‌ ಪರಿಹಾರ ಎಲ್ಲವನ್ನೂ ಗುರುತಿಸಿ, ವರದಿ ಸಲ್ಲಿಸಬೇಕಾದ ಹೊಣೆ ಪೊಲೀಸ್‌ ಅಂಗಳದಲ್ಲಿದೆ.

ಸಹಾಯಕ ಆಯುಕ್ತರ ದೂರಿನನ್ವಯ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖಾಧಿಕಾರಿಗಳು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ಹೆಚ್ಚಿನ ಮಾಹಿತಿ
ನೀಡಲಾಗುವುದಿಲ್ಲ.
ಜಿ. ಚಂದ್ರಶೇಖರ್‌, ಸರ್ಕಲ್‌
ಇನ್ಸ್‌ಪೆಕ್ಟರ್‌, ಸಿಂಧನೂರು

*ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next