ಮುಂಬಯಿ: ಹೊಸ ವಸಂತದ ಆಗಮನ ಚೈತನ್ಯದ ಆಗರವಾಗಿ ನಲಿವು, ಸಮೃದ್ಧದ ಸಂಭ್ರಮಕ್ಕೆ ಪೂರಕವಾಗಲಿ. ಸಂಸ್ಥೆಗಳೆಂಬ ಸಂಕುಲದ ಸಂತಸ ಚಿಗುರೊಡೆದು ಸಂಬಂಧಗಳ ಸೊಗಡಿನೊಂದಿಗೆ ಇಮ್ಮಡಿ ಗೊಳ್ಳಲಿ. ಈ ನೂತನ ವರ್ಷವು ಸರ್ವರ ಮನ ಮನೆಗಳನ್ನು ಬೆಳಗಿಸಲಿ. ನಮ್ಮ ಸಮಾಜವನ್ನು ಒಬ್ಬಂಟಿತನದಿಂದ ಮುಕ್ತಗೊಳಿಸಿ, ಸೇವಾ ಸಂಕಲ್ಪಗಳ ತೇರುವಿನೊಂದಿಗೆ ಮುನ್ನಡೆಸೋಣ. ಕಂಡ ಕನಸುಗಳೆಲ್ಲ ನೂತನ ವರ್ಷದ ಬೆಳಕಿನ ಸಿಂಚನದಲ್ಲಿ ಚಿಗುರಿ ನನಸಾಗಲಿ ಮತ್ತು ಸಮೃದ್ಧವಾಗಲಿ. ಚಿಗುರಿನ ಪಲ್ಲವಿಯು ನೆನಪಿನ ಚರಣ, ಹೊಸ ಠರಾವುಗಳೊಂದಿಗೆ ಹಳೆಯ ಬೇಸರಕ್ಕೆ ವಿಚ್ಛೇದನ ನೀಡುವ ಮೂಲಕ ಸ್ವತ್ಛಂದ ಯುಗಾದಿ ಸಂಭ್ರಮಿಸೋಣ. ಆ ಮೂಲಕ ಮನುಕುಲದ ಸಾಮರಸ್ಯದ ಬದುಕು ಮತ್ತೂಂದು ಸಂವತ್ಸರಕ್ಕೆ ಪ್ರೇರಕವಾಗಲಿ. ಕಂಡ ಕನಸುಗಳೆಲ್ಲಾ ನೂತನ ವರ್ಷದ ಬೆಳಕು-ಸಮೃದ್ಧಿಯ ಸಿಂಚನದಲ್ಲಿ ಚಿಗುರಿ ನನಸಾಗಲಿ ಮತ್ತು ಸಮೃದ್ಧವಾಗಲಿ ಎಂದು ಎಂದು ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಆರ್. ಬೆಳ್ಚಡ ನುಡಿದರು.
ಎ. 15ರಂದು ಸಂಜೆ ಜೋಗೇಶ್ವರಿ ಪೂರ್ವದ ಬಾಂದ್ರೆಕರ್‌ವಾಡಿಯ ಶ್ರೀ ಸಿದ್ಧಿವಿನಾಯಕ ಮಂದಿರದ ಸಭಾಗೃಹದಲ್ಲಿ ತೀಯಾ ಸಮಾಜ ಮುಂಬಯಿ ಇದರ ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯು ಸಂಸ್ಥೆಯ ಸಾಂಸ್ಕೃತಿಕ ಸಮಿತಿಯನ್ನೊಳಗೊಂಡು ಸಂಭ್ರಮಿಸಿದ ವಾರ್ಷಿಕ ಬಿಸು ಕಣಿ ಆಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಶುಭಹಾರೈಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಉಪಸ್ಥಿತರಿದ್ದ ಸಮು ದಾಯ ಬಂಧುಗಳು ಮತ್ತು ಗಣ್ಯರು ತೀಯಾ ಕುಲದೇವತೆ ಭಗವತೀ ಮಾತೆ ಮತ್ತು ಕುಲಗುರು ಬ್ರಹ್ಮಶ್ರೀ ಗುರು ನಾರಾಯಣರಿಗೆ ಪೂಜೆ ನೆರವೇರಿಸಿ ವಿಧ್ಯುಕ್ತವಾಗಿ ಸಭೆಗೆ ಚಾಲನೆಯನ್ನಿತ್ತರು. ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಗಂಗಾಧರ್ ಕಲ್ಲಾಡಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಉಪಸ್ಥಿತರಿಗೆ ಪ್ರಸಾದ ವಿತರಿಸಿ ಹರಸಿದರು.
ತೀಯಾ ಸಮಾಜ ಮುಂಬಯಿ ಸಂಸ್ಥೆಯ ವಿಶ್ವಸ್ತ ಮಂಡಳಿ ಕಾರ್ಯಾಧ್ಯಕ್ಷ ರೋಹಿದಾಸ್ ಎಸ್. ಬಂಗೇರ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಕೃತಿಯು ನೀಡಿದ ಎಲ್ಲ ಫಲಗಳನ್ನು ಸ್ವೀಕರಿಸುವ ಸಿರಿ ತನದ ಹಬ್ಬ ಇದಾಗಿದೆ. ಹಿರಿಕಿರಿಯರನ್ನು ಒಗ್ಗೂಡಿಸುವ ಈ ಹಬ್ಬ ವಿಶೇಷವಾಗಿ ಕೌಟುಂಬಿಕ ಮತ್ತು ಸಂಸ್ಥೆಗಲ್ಲಿ ಏಕತೆ ತೋರುವ ಮಾದರಿ ಹಬ್ಬವೇ ಸರಿ. ತುಳುನಾಡಿನ ತೆನೆಹಬ್ಬ ಎಂದೇ ಬಿಂಬಿತ ನಮ್ಮ ಪಾಲಿನ ಬಿಸುಕಣಿ ಸಂಭ್ರಮ ನಾಡಿನ ಸಮಸ್ತ ಜನತೆಗೆ ಒಳಿತನ್ನೇ ಪ್ರಾಪ್ತಿಸಲಿ. ಸರ್ವರಿಗೂ ಆಯುರಾರೋಗ್ಯ-ಭಾಗ್ಯದೊಂದಿಗೆ ಸುಖಶಾಂತಿ ನೆಮ್ಮದಿ ಯೊಂದಿಗೆ ಜೀವನ ನಂದಾದೀಪವಾಗಿಸಲಿ. ಈ ಯುಗಾದಿ ಎಲ್ಲರ ಪಾಲಿನ ಶುದ್ಧಾಚಾರದ ಹಬ್ಬವಾಗಲಿ ಎಂದು ನುಡಿದರು.
ಈ ಸಂದರ್ಭದಲ್ಲಿ ತೀಯಾ ಸಮಾಜದ ವಿಶ್ವಸ್ತ ಸದಸ್ಯ ಟಿ. ಬಾಬು ಬಂಗೇರ, ಉಪಾಧ್ಯಕ್ಷ ಸುಧಾಕರ್ ಉಚ್ಚಿಲ್, ಗೌ|ಪ್ರ| ಕೋಶಾಧಿಕಾರಿ ರಮೇಶ್ ಎನ್. ಉಳ್ಳಾಲ್, ತೀಯಾ ಬೆಳಕು ಸಂಪಾದಕ ಶ್ರೀಧರ್ ಎಸ್. ಸುವರ್ಣ, ಪಶ್ಚಿಮ ವಲಯ ಸಮಾತಿಯ ಕಾರ್ಯಾಧ್ಯಕ್ಷ ಬಾಬು ಕೆ. ಕೋಟ್ಯಾನ್, ಉಪ ಕಾರ್ಯಾಧ್ಯಕ್ಷ ಪದ್ಮನಾಭ ಸುವರ್ಣ, ಕಾರ್ಯದರ್ಶಿ ಚಂದ್ರಶೇಖರ್ ಸಾಲ್ಯಾನ್, ಪಶ್ಚಿಮ ಸಮಿತಿ ಮಹಿಳಾಧ್ಯಕ್ಷೆ ಲತಾ ಡಿ. ಉಳ್ಳಾಲ್, ಆರೋಗ್ಯನಿಧಿ ಸಮಿತಿಯ ಕಾರ್ಯಾಧ್ಯಕ್ಷೆ ದಿವ್ಯಾ ಆರ್. ಕೋಟ್ಯಾನ್, ಪೂರ್ವ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್ ಬಿ. ಎಂ, ಕಾರ್ಯದರ್ಶಿ ಸಾಗರ್ ಕಟೀಲ್, ಕೋಶಾಧಿಕಾರಿ ನಿತ್ಯೋದಯ ಉಳ್ಳಾಲ್, ನ್ಯಾಯವಾದಿ ಸದಾಶಿವ ಬಿ. ಕೆ, ಚಂದ್ರಶೇಖರ್ ಕೆ. ಬಿ., ಸುಂದರ್ ಎಂ. ಐಲ್, ರಾಮಚಂದ್ರ ಕೋಟ್ಯಾನ್, ಗಣೇಶ್ ಎಂ. ಉಚ್ಚಿಲ್, ಭಾಸ್ಕರ್ ಕೋಟ್ಯಾನ್, ನಾರಾಯಣ ಸಾಲ್ಯಾನ್, ಶ್ರೀಮತಿ ಎ. ಅಮೀನ್, ಹರೀಶ್ ಕುಂದರ್, ದಿವಿಜಾ ಸಿ. ಬೆಳ್ಚಡ ಸೇರಿದಂತೆ ಸುಜಾತ ಸುಧಾಕರ್ ಉಚ್ಚಿಲ್ ಹಾಗೂ ಕೇಂದ್ರ ಸಮಿತಿ ಮತ್ತು ವಲಯ ಸಮಿತಿಗಳ ಇತರೇ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ತೀಯಾ ಭಜನಾ ಮಂಡಳಿಯಿಂದ ಭಜನ ಕಾರ್ಯಕ್ರಮ ನಡೆಯಿತು. ಗಂಗಾಧರ್ ಕಲ್ಲಾಡಿ ಪ್ರಾರ್ಥನೆಗೈದು ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಈಶ್ವರ ಎಂ. ಐಲ್ ಸ್ವಾಗತಿಸಿ ವಂದಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್