ವಾಷಿಂಗ್ಟನ್: ಭಯಾನಕ ಟಿಕ್ ಟಾಕ್ ಸವಾಲು ಸ್ವೀಕರಿಸಿ ಅಪ್ರಾಪ್ತ ಬಾಲಕನೊಬ್ಬ ಪ್ರಾಣ ತೆತ್ತಿರುವ ಘಟನೆ ಅಮೆರಿಕದ ಓಹಿಯೋದಲ್ಲಿ ನಡೆದಿರುವುದು ವರದಿಯಾಗಿದೆ.
ಟಿಕ್ ಟಾಕ್ ನಲ್ಲಿ ಹಲವು ರೀತಿಯ ಟ್ರೆಂಡ್ ಗಳು ಇರುತ್ತವೆ. ಒಬ್ಬರು ಚಾಲೆಂಜ್ ಹಾಕಿದರೆ, ಆ ಚಾಲೆಂಜ್ ನ್ನು ಸ್ವೀಕರಿಸಿ ಗೆಲ್ಲಬೇಕು. ಈ ಪ್ರಕ್ರಿಯೆಯನ್ನೇ ವಿಡಿಯೋ ಮಾಡಿ ಟಿಕ್ ಟಾಕ್ ನಲ್ಲಿ ಹಾಕುವುದು ಒಂದು ಬಗೆಯ ಟ್ರೆಂಡ್.
ಜಾಕೋಬ್ ಸ್ಟೀವನ್ಸ್ (13) ಎನ್ನುವ ಅಪ್ರಾಪ್ತ ಬಾಲಕ ಇದೇ ರೀತಿಯ ಸವಾಲನ್ನು ಸ್ವೀಕರಿಸಿ ತನ್ನ ಪ್ರಾಣವನ್ನೇ ತೆತ್ತಿದ್ದಾನೆ. ಜಾಕೋಬ್ ಸ್ಟೀವನ್ಸ್ ಇತ್ತೀಚೆಗೆ ತನ್ನ ಸ್ನೇಹಿತರ ಜೊತೆ ಚಾಲೆಂಜ್ ಸ್ವೀಕರಿಸುವ ಟ್ರೆಂಡ್ ನಲ್ಲಿ ಭಾಗಿಯಾಗಿದ್ದಾನೆ. ಸ್ನೇಹೀತರು ಸವಾಲು ಹಾಕಿದ್ದರೆಂದು ಜಾಕೋಬ್ ಸ್ಟೀವನ್ಸ್ 12 -14 ಬೆನಾಡ್ರಿಲ್ ಮಾತ್ರೆ ( ನಿದ್ರೆ ಅಮಲು ಬರಿಸುವ ಮಾತ್ರೆ) ಯನ್ನು ಸೇವಿಸಿದ್ದಾನೆ. ಇದು ಆತನಿಗೆ ಓವರ್ ಡೋಸ್ ಆಗಿದೆ.
ಇದನ್ನೂ ಓದಿ: Tragic: ಮೂರು ಅಂತಸ್ತಿನ ಅಕ್ಕಿ ಗಿರಣಿ ಕಟ್ಟಡ ಕುಸಿದು ನಾಲ್ವರು ಮೃತ್ಯು
ಕೂಡಲೇ ಆತನನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಒಂದು ವಾರದವರೆಗೂ ವೆಂಟಿಲೇಟರ್ ನಲ್ಲೇ ಇದ್ದ ಬಾಲಕ ಮತ್ತೆ ಕಣ್ಣು ತೆರೆಯದೇ , ಅಪ್ಪ – ಅಮ್ಮನನ್ನು ನೋಡದೇ ಆರು ದಿನಗಳ ಬಳಿಕ ತನ್ನ ಪ್ರಾಣವನ್ನೇ ಚೆಲ್ಲಿದ್ದಾನೆ.
ನನ್ನ ಮೊಮ್ಮಗನಿಗಾದ ಸ್ಥಿತಿ ಬೇರೆ ಯಾವುದೇ ಮಗುವಿಗೆ ಆಗುವುದು ಬೇಡ ಎಂದು ಬಾಲಕನ ಅಜ್ಜಿ ಹೇಳುತ್ತಾರೆ. ಈ ರೀತಿಯ ಘಟನೆ ಯಾರ ಜೀವನದಲ್ಲೂ ಆಗಬಾರದೆಂದು ಬಾಲಕನ ತಂದೆ ಜಸ್ಟಿನ್ ಸ್ಟೀವನ್ಸ್ ಹೇಳುತ್ತಾರೆ.