Advertisement

ಕ್ಯಾನ್ಸರ್‌ ಭಯದಿಂದ ಕುಣಿಕೆಗೆ ಕೊರಳೊಡ್ಡಿದ‌ ಟೆಕ್ಕಿ

12:18 PM Dec 15, 2017 | |

ಬೆಂಗಳೂರು: ಹರ್ಷ ಶೆಟ್ಟಿಗೆ ವಯಸ್ಸಿನ್ನೂ 32. ಸ್ಪುರದ್ರೂಪಿ ಯುವಕ. ಐಟಿ ಕಂಪನಿಯಲ್ಲಿ ಉದ್ಯೋಗ. ಕೈತುಂಬಾ ಸಂಬಳ. ಆದರೆ ಆತನಿಗೆ ಅದೇನೋ ಆತಂಕ. ದೃಢಕಾಯ ಹೊಂದಿ, ಆರೋಗ್ಯವಂತನಾಗಿದ್ದರೂ ತನಗೇನೋ ಕಾಯಿಲೆಯಿದೆ ಎಂಬ ಭಯ. ಆ ಭಯವೇ ಆತ, ನೇಣಿನ ಕುಣಿಕೆಗೆ ಕೊರಳೊಡ್ಡುವಂತೆ ಮಾಡಿತು!

Advertisement

ಉಡುಪಿಯ ಹಾರಾಡಿ ಮೂಲದ ಹರ್ಷ ಶೆಟ್ಟಿ ಅವರ ತಾಯಿ ಮತ್ತು ಅಜ್ಜಿಯನ್ನು ಕ್ಯಾನ್ಸರ್‌ ಬಲಿ ತೆಗೆದುಕೊಂಡಿತ್ತು. ಇದೀಗ ಸಹೋದರಿ ಕೂಡ ಅದೇ ಕ್ಯಾನ್ಸರ್‌ ಮಾರಿಯಿಂದ ಬಳಲುತ್ತಿದ್ದಾಳೆ. ಹೀಗಾಗಿ ತನಗೂ ಕ್ಯಾನ್ಸರ್‌ ಬರಬಹುದೆಂದು ಆತಂಕಗೊಂಡ ಹರ್ಷ, ವಿಜಯನಗರದ ಪ್ರಶಾಂತ ನಗರದಲ್ಲಿರುವ ಮನೆಯಲ್ಲಿ ಬುಧವಾರ ತಡರಾತ್ರಿ ನೇಣುಹಾಕಿಕೊಂಡಿದ್ದಾರೆ.

ಹತ್ತು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಹರ್ಷ ಶೆಟ್ಟಿ, ಕಾಡುಬೀಚನಹಳ್ಳಿಯಲ್ಲಿರುವ ಆಮೆರಿಕ ಮೂಲದ ಸಾಫ್ಟ್ವೇರ್‌ ಕಂಪನಿಯಲ್ಲಿ ಸಾಫ್ಟ್ವೇರ್‌ ಟೆಕ್ನಿಕಲ್‌ ಲೀಡರ್‌ ಆಗಿ ಕೆಲಸ ಮಾಡುತ್ತಿದ್ದರು. ಐದು ವರ್ಷಗಳ ಹಿಂದೆ ಖಾಸಗಿ ಶಾಲೆಯ ಶಿಕ್ಷಕಿ ರಮ್ಯಾ ಜಿ. ಶೆಟ್ಟಿ ಅವರನ್ನು ವಿವಾಹವಾಗಿದ್ದು, ದಂಪತಿಗೆ 2 ವರ್ಷದ ಹೆಣ್ಣು ಮಗು ಇದೆ.

ಈ ಮಧ್ಯೆ ಉಡುಪಿಯಲ್ಲಿ ವಾಸವಿರುವ ಸೋದರಿ ಆಶಾ ಶೆಟ್ಟಿ ಅವರನ್ನು ಅನಾರೋಗ್ಯದ ಕಾರಣ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರವಷ್ಟೇ ಸಹೋದರಿಯ ಆರೋಗ್ಯ ವಿಚಾರಿಸಲು ಹೋಗಿದ್ದ ಹರ್ಷ ಶೆಟ್ಟಿ, ವೈದ್ಯರ ಬಳಿ ಸೋದರಿಯ ಆರೋಗ್ಯ ಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ವೈದ್ಯರು, ಆಶಾ ಕ್ಯಾನ್ಸರ್‌ನ ಕೊನೆ ಹಂತ ತಲುಪ್ಪಿದ್ದು, ಹತ್ತಾರು ದಿನ ಉಳಿದರೇ ಹೆಚ್ಚು ಎಂದಿದ್ದರು.

ಇದರಿಂದ ಬೇಸರಗೊಂಡಿದ್ದ ಹರ್ಷಶೆಟ್ಟಿ, ಮೂರು ದಿನ ಅಲ್ಲಿಯೇ ಉಳಿದಿದ್ದು, ಆಶಾ ಅವರ ಆರೈಕೆ ಮಾಡಿ ಬುಧವಾರ ಮಧ್ಯಾಹ್ನವಷ್ಟೇ ಬೆಂಗಳೂರಿಗೆ ವಾಪಾಸಾಗಿದ್ದರು. ಪತಿ ಫ್ಯಾನ್‌ಗೆ ನೇತಾಡುವುದನ್ನು ಕಂಡ ರಮ್ಯಾ, ಜೋರಾಗಿ ಕೂಗಿಕೊಂಡಿದ್ದಾರೆ. ಅವರ ಚೀರಾಟ ಕೇಳಿದ ಸ್ಥಳೀಯ ನಿವಾಸಿಗಳು ತಕ್ಷಣವೇ ಮನೆಗೆ ಬಂದು ಆ್ಯಂಬುಲೆನ್ಸ್‌ ಮೂಲಕ ಹರ್ಷ ಶೆಟ್ಟಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

Advertisement

ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಸಿ.ಜನರಲ್‌ ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ ಎಂದು ವಿಜಯನಗರ ಠಾಣೆ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪತ್ನಿ ರಮ್ಯಾ ಶೆಟ್ಟಿ ಪ್ರಕರಣ ದಾಖಲಿಸಿದ್ದಾರೆ.

ಪತ್ನಿ ಜತೆ ಮಾತಾಡುವಾಗ ಆತಂಕ: ರಾತ್ರಿ 9 ಗಂಟೆ ಸುಮಾರಿಗೆ ಹರ್ಷ ಮತ್ತು ರಮ್ಯಾ ಊಟ ಮುಗಿಸಿ ಮಾತನಾಡುತ್ತಾ ಕುಳಿತಿದ್ದರು. ಆಗ ಹರ್ಷ, ತಮ್ಮ ಸೋದರಿ ಅನಾರೋಗ್ಯದ ಬಗ್ಗೆ ಪತ್ನಿ ಜತೆ ಚರ್ಚಿಸಿದ್ದಾರೆ. ಈ ವೇಳೆ “ನನ್ನ ಅಜ್ಜಿ, ತಾಯಿ ಕೂಡ ಕ್ಯಾನ್ಸರ್‌ ರೋಗದಿಂದ ಸಾವನ್ನಪ್ಪಿದ್ದಾರೆ. ಇದೀಗ ನನ್ನ ಅಕ್ಕನಿಗೂ ಅದೇ ರೋಗ ಬಂದಿದೆ.

ಆಕೆ ಪ್ರಾಣ ಬಿಟ್ಟ ಬಳಿಕ, ವಂಶವಾಹಿ ಎಂಬಂತೆ ಆ ಮಾರಕ ರೋಗ ನನ್ನನ್ನೂ ಆವರಿಸಿಕೊಳ್ಳಬಹುದು’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ರಮ್ಯಾಶೆಟ್ಟಿ, “ಇಲ್ಲದ್ದನ್ನು ಏಕೆ ಬಯಸುತ್ತೀರಿ? ಆ ರೀತಿ ಏನೂ ಆಗುವುದಿಲ್ಲ. ನಿಶ್ಚಿಂತೆಯಿಂದ ಇರಿ’ ಎಂದು ಸಲಹೆ ನೀಡಿದ್ದಾರೆ. ಬಳಿಕ 11.30ರ ಸುಮಾರಿಗೆ ದಂಪತಿ ತಮ್ಮ ಮಗಳಿಗೆ ಊಟ ಮಾಡಿಸಿ ಮಲಗಿಸಿದ್ದಾರೆ.

ನಂತರ ಹರ್ಷ ಶೆಟ್ಟಿ ಮಲಗುತ್ತೇನೆಂದು ಬೆಡ್‌ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಈ ವೇಳೆ ಪತ್ನಿ ರಮ್ಯಾ ನಡುಮನೆಯಲ್ಲಿ ಟಿವಿ ನೋಡುತ್ತಿದ್ದರು. ತಡರಾತ್ರಿ 12.30ರ ಸುಮಾರಿಗೆ ಬೆಡ್‌ರೂಂ ಕಡೆಯಿಂದ ಕುರ್ಚಿ ಬಿದ್ದ ಶಬ್ಧವಾಗಿದೆ. ಇದರಿಂದ ಗಾಬರಿಗೊಂಡ ರಮ್ಯಾ ಕೂಡಲೇ ಬೆಡ್‌ರೂಂ ಬಾಗಿಲು ತೆರೆದು ನೋಡಿದಾಗ ಹರ್ಷ ಫ್ಯಾನ್‌ಗೆ ನೇಣು ಹಾಕಿಕೊಂಡು ನೇತಾಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next