Advertisement

ಕ್ರಿಕೆಟ್‌ ನಲ್ಲಿ ನಿಖರತೆಗೆ ತಂತ್ರಜ್ಞಾನದ ಕೊಡುಗೆ

05:29 PM Aug 18, 2021 | Team Udayavani |

ಕ್ರಿಕೆಟ್ ಆಟಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಾಗೆಂದ ಮಾತ್ರಕ್ಕೆ ಆಟದಲ್ಲಿ ಇನ್ನೂ ಹಳೆಯ ನೀತಿ ನಿಯಮಗಳೇ ಇವೆ ಎಂದೆನಿಸಿದರೆ ಅದು ಸುಳ್ಳಾಗುತ್ತದೆ. ಅದರಲ್ಲೂ 20ನೇ ಶತಮಾನಕ್ಕಿಂತ 21ನೇ ಶತಮಾನದಲ್ಲಿ ಕ್ರಿಕೆಟ್ ಆಟಕ್ಕೆ ತಂತ್ರಜ್ಞಾನವು ಹೆಚ್ಚಿನ ಮೆರುಗು ನೀಡಿದೆ ಎಂದರೂ ಅಚ್ಚರಿಯಿಲ್ಲ. ಟಿ20, ಟಿ10 ಆಟ, ಹಾಟ್‌ಸ್ಪಾಟ್, ಹಾಕೈ ಇತ್ಯಾದಿ ರೂಪ, ನಿಯಮಗಳೂ ಇದೇ ಶತಮಾನದಲ್ಲಿ ಕ್ರಿಕೆಟ್ ಆಟದಲ್ಲಿ ಪರಿಚಯಿಸಲಾಗಿದೆ. 20ನೇ ಶತಮಾನದಲ್ಲಿ ಬಹುತೇಕ ಕಂಪನಿಗಳು ಪಂದ್ಯವನ್ನು ಉತ್ಕೃಷ್ಟ ಗುಣಮಟ್ಟದಲ್ಲಿ ಪ್ರಸಾರ ಮಾಡಲು ಹೆಚ್ಚಾಗಿ ತಂತ್ರಜ್ಞಾನಗಳಿಗೆ ಅವಲಂಬಿತರಾಗಿದ್ದರು. ಆದರೆ, ಈಗ ಆಟದಲ್ಲಿಯೇ ಬೌಲಿಂಗ್, ಔಟ್ ಮಾಡುವುದನ್ನು ಟ್ರ್ಯಾಕ್ ಮಾಡಲು, ಆ ಕ್ಷಣದಲ್ಲೇ ರಿಪೀಟ್ ಟೆಲಿಕಾಸ್ಟ್ ಮಾಡಲು ಇತ್ಯಾದಿಗಳಿಗೆ ಸಹಕಾರಿಯಾಗಿವೆ.

Advertisement

ಕ್ರಿಕೆಟ್‌ ನಲ್ಲಿ ಮೊಟ್ಟಮೊದಲ ಬಾರಿಗೆ ರೇಡಿಯೋ ವೀಕ್ಷಕ ವಿವರಣೆಯು 1922ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದ್ದ ದೇಶೀ ಕ್ರಿಕೆಟ್‌ನಲ್ಲಿ ನಡೆಯಿತು. 1938ರಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಪಂದ್ಯವು ಟಿವಿಯಲ್ಲಿ ಪ್ರಸಾರಗೊಂಡಿತು. ಅಂದು ಇಂಗ್ಲೆಂಡ್ – ಆಸ್ಟ್ರೇಲಿಯಾ ನಡುವಿನ ಅಭ್ಯಾಸ ಪಂದ್ಯವು ಟಿವಿಯಲ್ಲಿ ಪ್ರಸಾರವಾಗಿತ್ತು. ಅಂದು ಕೇವಲ 20 ಕಿ.ಮೀ ವ್ಯಾಪ್ತಿಯ ಸಿಗ್ನಲ್‌ಗಳು ಬಳಕೆಯಲ್ಲಿದ್ದವು. ಆದರೆ, 2019ರ ಪುರುಷರ ಕ್ರಿಕೆಟ್ ವಿಶ್ವಕಪ್ ಅನ್ನು 1.6 ಶತಕೋಟಿ ಜನರು ನೇರಪ್ರಸಾರದಲ್ಲಿ ವೀಕ್ಷಿಸಿದ್ದಾರೆ ಎಂದು ವರದಿಯಾಗಿದೆ. ತಂತ್ರಜ್ಞಾನದ ಅಭಿವೃದ್ಧಿಯು ಫುಟ್‌ಬಾಲ್ ಬಳಿಕ ಅತ್ಯಂತ ಹೆಚ್ಚು ವೀಕ್ಷಣೆ ಪಡೆಯುವ ಆಟ ಕ್ರಿಕೆಟ್ ಆಗಲು ಒಂದು ಮುಖ್ಯ ಕಾರಣ ಎಂದರು ತಪ್ಪಾಗಲ್ಲ.

1) ಸ್ನಿಕ್ಕೊ ಅಥವಾ ಎಡ್ಜ್ ಡಿಟೆಕ್ಷನ್: ರಿಯಲ್ ಟೈಮ್ ಸ್ನಿಕ್ಕೊ ಅಥವಾ ಅಲ್ಟ್ರಾ ಎಡ್ಜ್ ತಂತ್ರಜ್ಞಾನವು ಚೆಂಡು ಫೀಲ್ಡರ್ ಕೈ ಸೇರುವ ಮೊದಲು ಬ್ಯಾಟ್‌ಗೆ ತಗುಲಿದೆಯೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸುತ್ತದೆ. ಪ್ರಮುಖವಾಗಿ ವಿಕೆಟ್‌ಕೀಪರ್ ಅಥವಾ ಸ್ಲಿಪ್‌ನಲ್ಲಿ ನಿಂತಿರುವ ಫೀಲ್ಡರ್‌ಗಳು ಹಿಡಿಯುವ ಕ್ಯಾಚ್ ಸಂದರ್ಭ ಬರುವ ಸಂಶಯಕ್ಕೆ ಇದು ಉತ್ತರ ನೀಡುತ್ತದೆ. ವೀಡಿಯೋವನ್ನು ಸ್ಲೋ-ಮೋಷನ್‌ನಲ್ಲಿ ಪ್ಲೇ ಮಾಡುವಾಗ, ಬಾಲ್ ಮೊದಲು ಎಲ್ಲಿ ತಾಗಿದೆ ಎಂದೂ ತಿಳಿಯುತ್ತದೆ. ಸ್ವಿಂಗ್, ಸ್ಪಿನ್ ಆಗಿ ಬಾಲ್ ತಿರುಗಿದ್ದೋ ಅಥವಾ ಬ್ಯಾಟ್ ತಗುಲಿ ಆಚೆಗೆ ಹೋಗಿದ್ದೋ ಎಂಬುದು ನಿಖರವಾಗಿ ತಿಳಿಯುತ್ತದೆ.

2) ಹಾಟ್ ಸ್ಪಾಟ್: 2006 ರ ಆಶಸ್ ಸರಣಿಯಲ್ಲಿ ಬಿಬಿಜಿ ಸ್ಪೋರ್ಟ್ಸ್ ಕ್ರಿಕೆಟ್‌ಗೆ ಹಾಟ್‌ಸ್ಪಾಟ್ ತಂತ್ರಜ್ಞಾನವನ್ನು ಪರಿಚಯಿಸಿತು. ಬ್ಯಾಟ್ಸ್ಮನ್‌ನ ಎರಡು ಬದಿಯಲ್ಲಿ ಇನ್ಫ್ರಾರೆಡ್ ಕ್ಯಾಮೆರಾಗಳನ್ನು ಇರಿಸಲಾಗುತ್ತದೆ. ಇದರಿಂದ ಯಾವುದೇ ವಸ್ತು (ಇಲ್ಲಿ ಪ್ರಮುಖವಾಗಿ ಚೆಂಡು) ಬ್ಯಾಟ್‌ಗೆ ಅಥವಾ ಬ್ಯಾಟ್ಸ್ಮನ್‌ಗೆ ಹೊಡೆದಾಗ, ಅದು ಸ್ಪಷ್ಟವಾಗಿ ಎಲ್ಲಿ ತಗುಲಿರುವುದು ಎಂಬುವುದನ್ನು ಕಪ್ಪು-ಬಿಳುಪಿನ ಬಣ್ಣದಲ್ಲಿ ಸ್ಪಷ್ಟವಾಗಿ ತೋರಿಸುತ್ತದೆ. ಇದರ ಆಧಾರದಲ್ಲಿ ಅಂಪೈರ್ ಔಟ್/ನಾಟ್‌ಔಟ್ ತೀರ್ಪನ್ನು ನೀಡುತ್ತಾರೆ.

3) ಬಾಲ್ ಟ್ರ್ಯಾಕಿಂಗ್: ಬೌಲರ್‌ಗಳು ಎಸೆದ ಚೆಂಡು ಹೇಗೆ ಸಾಗಿದೆ ಮತ್ತು ಬ್ಯಾಟ್ ಅಥವಾ ಬ್ಯಾಟ್ಸ್ಮನ್‌ಗೆ ತಗುಲಿದ ಬಳಿಕ ಅದರ ಹಿಂದೆಯೂ ಹೇಗೆ ಬಾಲ್ ಓಡುತ್ತದೆ ಎಂಬುದನ್ನು ಟ್ರ್ಯಾಕ್ ಮಾಡುತ್ತದೆ. ಇದಕ್ಕಾಗಿ ಹಾಕ್-ಐ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಬೌಲರ್ ಕೈಯಿಂದ ಬಾಲ್ ರಿಲೀಸ್ ಆಗುವಲ್ಲಿಂದ, ಆ ಚೆಂಡು ವಿಕೆಟ್ ಹಿಂದೆ ತಲುಪುವವರೆಗಿನ ಪಥವನ್ನು ಟ್ರ್ಯಾಕ್ ಮಾಡುತ್ತದೆ. ಇದು 3ಡಿ ದೃಶ್ಯೀಕರಣವನ್ನೂ ರಚಿಸುತ್ತದೆ. ಅದಲ್ಲದೆ ಸ್ಪಷ್ಟ ಎಲ್‌ಬಿಡಬ್ಲ್ಯೂ ನಿರ್ಧಾರವನ್ನು ತೆಗೆದುಕೊಳ್ಳಲು ಇದನ್ನು ಬಳಸಲಾಗುತ್ತದೆ. ಕ್ಯಾಮೆರಾದಲ್ಲಿ ಸೆರೆಯಾಗುವ ಚಿತ್ರಗಳನ್ನು ಬಾಲ್ ಪಿಚ್‌ಮ್ಯಾಪ್ ಮತ್ತು ವ್ಯಾಗನ್ ವೀಲ್ ಮಾಹಿತಿಯನ್ನು ಪ್ರಸ್ತುತಪಡಿಸಲು ಬಳಸಲಾಗುತ್ತದೆ.

Advertisement

4) ಸ್ಮಾರ್ಟ್ ಬೇಲ್ಸ್: ಝಿಂಗ್ ಬೇಲ್ಸ್ ಅನ್ನೋ ಕಂಪನಿಯು 2013ರಲ್ಲಿ ಕ್ರಿಕೆಟ್‌ ಆಟಕ್ಕಾಗಿ ಎಲ್‌ಇಡಿ ಬೇಲ್ಸ್‌ಗಳನ್ನು ತಯಾರಿಸಿತು. ಬೇಲ್ಸ್‌ಗಳಿಗೆ ಚೆಂಡು ತಾಗಿದಾಗ ಅಥವಾ ಅವುಗಳು ಸ್ಟಂಪ್‌ಗಳಿಂದ ಬೀಳುವಾಗ, ಅದರಿಂದ ಬೆಳಕು ಹೊಳೆಯುತ್ತದೆ. ಬೇಲ್ಸ್‌ನಲ್ಲಿ ಮೈಕ್ರೊಪ್ರೊಸೆಸರ್ ಇರಲಿದ್ದು, ಅದು ಸ್ಟಂಪ್‌ನಿಂದ ಬೇಲ್ಸ್ ದೂರವಾಗುವುದನ್ನು ಪತ್ತೆ ಮಾಡುತ್ತದೆ. ಬೌಲ್ಡ್, ಸ್ಟಂಪ್ ಔಟ್, ರನೌಟ್ ಸಂದರ್ಭ ಇದರ ಅಗತ್ಯತೆ ತಿಳಿಯುತ್ತದೆ. ಈ ಎಲ್‌ಇಡಿ ಬಲ್ಬ್‌ಗಳು ರಾತ್ರಿಯ ವೇಳೆ ಪಂದ್ಯ ನಡೆದಾಗ, ವೀಕ್ಷಕರಿಗೆ ಇನ್ನಷ್ಟು ಮನರಂಜನೆಯನ್ನೂ ನೀಡುತ್ತದೆ.

5) ಪವರ್ ಶಾಟ್ ಅನಾಲಿಸಿಸ್: ಪವರ್‌ಬ್ಯಾಟ್ ತಂತ್ರಜ್ಞಾನವು ಬ್ಯಾಟಿಂಗ್ ಶಾಟ್ಸ್ ಕುರಿತು ರಿಯಲ್ ಟೈಮ್ ಫೀಡ್‌ಬ್ಯಾಕ್‌ಅನ್ನು ನೀಡುತ್ತದೆ. ಇದರಲ್ಲಿ ಬ್ಯಾಟ್‌ನ ವೇಗ, ಬಾಲ್ ತಲುಪಿದ ಸ್ಥಳ, ಲಾಂಚ್ ಆ್ಯಂಗಲ್, ಶಾಟ್‌ಗಳು ಮತ್ತು ಪ್ರತಿ ಶಾಟ್‌ನ ಹಿಂದಿನ ಶಕ್ತಿ ಇತ್ಯಾದಿಗಳ ಬಗ್ಗೆ ಅಂಕಿ-ಅಂಶವನ್ನು ನೀಡುತ್ತದೆ.

ಇವುಗಳಲ್ಲದೆ, ಹೆಲ್ಮೆಟ್ ಕ್ಯಾಮ್, ಸ್ಟಂಪ್ ಮೈಕ್, ಫ್ಲೈಯಿಂಗ್ ಕ್ಯಾಮರಾ, ಪ್ಲೇಯರ್ ಗ್ರಾಫಿಕ್ಸ್ ಇತ್ಯಾದಿಗಳಿಂದ ಕ್ರಿಕೆಟ್ ಆಟವು ಮತ್ತಷ್ಟು ರಂಜನೀಯವಾಗಿರುತ್ತದೆ. ಆಕರ್ಷಣೆ ಮಾತ್ರವಲ್ಲದೆ, ಹಲವು ತಾಂತ್ರಿಕ ಬದಲಾವಣೆಗಳು ಅತ್ಯುತ್ತಮ ಹಾಗೂ ನಿಖರ ನಿರ್ಧಾಗಳನ್ನು ತೆಗೆದುಕೊಳ್ಳಲು ಅಂಪಾಯರ್‌ಗಳಿಗೆ ಸಹಾಯ ಮಾಡುತ್ತದೆ. ಆನ್-ಫೀಲ್ಡ್ ಅಂಪಾಯರ್‌ಗಳು ಲೈವ್‌ನಲ್ಲಿ ನೇರವಾಗಿ ತಮ್ಮ ನಿರ್ಧಾರ ಪ್ರಕಟಿಸಿದರೆ, ಆಟಗಾರರಿಗೆ ಸಂಶಯ ಬಂದು ರಿವೀವ್ ತೆಗೆದುಕೊಂಡರೆ ಆಗ, ಆಫ್ ಫೀಲ್ಡ್‌ನಲ್ಲಿರುವ ಥರ್ಡ್ ಅಂಪಾಯರ್ ತಂತ್ರಜ್ಞಾನಗಳ ಸಹಕಾರದಿಂದ ಸ್ಪಷ್ಟ ಫಲಿತಾಂಶವನ್ನು ನೀಡುತ್ತಾರೆ. ಈಗಾಗಲೇ ತಾಂತ್ರಿಕವಾಗಿ ಬಹಳಷ್ಟು ಮುಂದುವರೆದಿರುವ ಕೆಲವೇ ಆಟಗಳಲ್ಲಿ ಕ್ರಿಕೆಟ್ ಸಹ ಒಂದು ಎಂದರೂ ತಪ್ಪಾಗಲಿಕ್ಕಿಲ್ಲ.

ಹೀಗಿದ್ದರೂ, ಕೆಲವೊಮ್ಮೆ ತಪ್ಪು ನಿರ್ಧಾರಗಳು ಬರುತ್ತದೆ. ತಂತ್ರಜ್ಞಾನದ ಸಹಕಾರ ಇದ್ದರೂ, ತಂಡಗಳಿಗೆ ಅಂಪಾಯರಿಂಗ್ ರಿವೀವ್ ತೆಗೆದುಕೊಳ್ಳಲು ಮಿತಿ ಇರುತ್ತದೆ. ಹೀಗಾಗಿ, ಆರಂಭದಲ್ಲಿಯೇ ಆಯ್ಕೆ ಕಳೆದುಕೊಂಡರೆ, ನಂತರ ಅಂಪಾಯರ್ ‌ಗಳ ತೀರ್ಮಾನಕ್ಕೆಯೇ ಆಟಗಾರರು
ಒಪ್ಪಿಗೆ ನೀಡಬೇಕು. ಅದಲ್ಲದೆ, ಕೆಲವೊಂದು ಅಂಪಾಯರ್‌ಗಳು ಹಲವು ಬಾರಿ ತಪ್ಪು ನಿರ್ಧಾರ ಪ್ರಕಟಿಸುವುದರಿಂದ ಕ್ರಿಕೆಟ್ ಪ್ರೇಮಿಗಳೂ ಸಹ ಬೇಸರ ವ್ಯಕ್ತಪಡಿಸಿರುವ ಸನ್ನಿವೇಶಗಳೂ ಇವೆ. ತಂತ್ರಜ್ಞಾನ ಅಭಿವೃದ್ಧಿ ಕಂಡಂತೆ, ಆಟದಲ್ಲೂ ಯಾವುದೇ ಲೋಪ ಬಾರದಂತೆ ನಿರ್ಧಾರಗಳು ಪ್ರಕಟಗೊಂಡಾಗ, ಕ್ರಿಕೆಟ್ ಆಟದ ಬಗ್ಗೆ ಇನ್ನಷ್ಟು ಅಭಿಮಾನ ಮೂಡುವುದರಲ್ಲಿ ಯಾವುದೇ ಸಂಶಯವಿಲ್ಲ.

– ಇಂದುಧರ ಹಳೆಯಂಗಡಿ

Advertisement

Udayavani is now on Telegram. Click here to join our channel and stay updated with the latest news.

Next