ಬೆಂಗಳೂರು: ಕೋವಿಡ್ ದಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಬೀದಿ ವ್ಯಾಪಾರಿಗಳಿಗೆ ಆರ್ಥಿಕವಾಗಿ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪರಿಚಯಿಸಿದ್ದ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ ) ಯೋಜನೆ ಅನುಷ್ಠಾನಕ್ಕೆ ತಾಂತ್ರಿಕ ಸಂಕಷ್ಟ ಎದುರಾಗಿದೆ.
ಸೋಂಕು ವ್ಯಾಪಕವಾದ ಮೇಲೆ ಬೀದಿ ವ್ಯಾಪಾರವನ್ನೇ ನಂಬಿದ್ದ ಸಾವಿರಾರು ಜನರು ಅಕ್ಷರಶಃ ಬೀದಿಗೆ ಬಿದ್ದರು. ಇವರಿಗೆ ಆರ್ಥಿಕವಾಗಿ ಬಂಡವಾಳದ ರೂಪದಲ್ಲಿ 10 ಸಾವಿರ ರೂ. ಸಾಲ ನೀಡಲು ಕೇಂದ್ರ ಸರ್ಕಾರವು ಆತ್ಮನಿರ್ಭರ ಯೋಜನೆಯಡಿ ಪಿಎಂ – ಸ್ವನಿಧಿ ಎಂಬ ಯೋಜನೆಯನ್ನು ಪರಿಚಯಿಸಿದೆ. ಆದರೆ, ದೇವರು ವರ ಕೊಟ್ಟರೂ ಪೂಜಾರಿ ವರ ನೀಡಲಿಲ್ಲ ಎನ್ನುವಂತೆ ಈ ಯೋಜನೆಗೆ ಅನುಷ್ಠಾನಕ್ಕೆ ಹಲವು ಷರತ್ತುಗಳನ್ನು ವಿಧಿಸಿರುವುದರಿಂದ ಬೀದಿ ವ್ಯಾಪಾರಿಗಳು ಈ ಯೋಜನೆ ತಲುಪದಂತಾಗಿದೆ.
ಆನ್ಲೈನ್ ತೊಡಕು: ಪಿಎಂ ಸ್ವನಿಧಿ ಅರ್ಜಿಯನ್ನು ಪಿಎಂ- ಸ್ವನಿಧಿ ವೆಬ್‌ಸೈಟ್‌ನ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಕೆ ಮಾಡಬೇಕಾಗಿದ್ದು, ಇದರ ಪ್ರಕ್ರಿಯೆಗಳು ಅಷ್ಟಾಗಿ ತಾಂತ್ರಿಕ ಹಾಗೂ ಕಂಪ್ಯೂಟರ್ ವ್ಯವಹಾರ ಪರಿಚಯವಿಲ್ಲದ ಬೀದಿ ವ್ಯಾಪಾರಿಗಳಿಗೆ ತೊಡಕಾಗಿದೆ. ಅಷ್ಟೇ ಅಲ್ಲದೆ, ಈ ಅರ್ಜಿ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಬೀದಿ ವ್ಯಾಪಾರಿಗಳು ತಮ್ಮ ಆಧಾರ್ ಕಾರ್ಡ್‌ಗೆ ಜೋಡಣೆ ಮಾಡಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಹೋಗುವುದರಿಂದ ಯಾವ ಮೊಬೈಲ್ ಸಂಖ್ಯೆ ಆಧಾರ್‌ಗೆ ಜೋಡಣೆಯಾಗಿದೆ ಎನ್ನುವುದು ಕಷ್ಟಸಾಧ್ಯ. ಇನ್ನು ಬಯೋಮೆಟ್ರಿಕ್ ಬಳಸಿ ಈ ಸಮಸ್ಯೆ ಪರಿಹರಿ ಸಲು ಕೋವಿಡ್ ಭೀತಿ ಎದುರಾಗಿದೆ. ಇದೇ ಭೀತಿಯಿಂದ ಆಧಾರ್‌ಗೆ ನೀಡಲಾಗಿರುವ ಬೆರಳಚ್ಚು ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡಲಾಗುತ್ತಿಲ್ಲ.
ಪಟ್ಟಣ ವ್ಯಾಪಾರ ಸಮಿತಿ ನೆರವು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಲಾಗಿದ್ದು, ಅಂದಾಜು 25 ಸಾವಿರ ಜನ ಬೀದಿ ವ್ಯಾಪಾರಿಗಳಿದ್ದಾರೆ ಎಂದು ಗುರುತಿಸಲಾಗಿದೆ. ಇವರಲ್ಲಿ 13 ಸಾವಿರ ಜನರಿಗೆ ಬೀದಿ ವ್ಯಾಪಾರಿಗಳ ಗುರುತಿನ ಚೀಟಿ ನೀಡಲಾಗಿದೆ. ಈ ಗುರುತಿನ ಚೀಟಿ ನೀಡುವುದರಲ್ಲೂ ಇನ್ನು ಗೊಂದಲಗಳು ಬಗೆಹರಿದಿಲ್ಲ. ಸಮಾಧಾನಕರ ಸಂಗತಿ ಎಂದರೆ ಗುರುತಿನ ಚೀಟಿ ಹೊಂದದೆ ಇರುವವರೂ ಸ್ವ- ನಿಧಿ ಯೋಜನೆಗೆ ಅರ್ಹರಾಗುತ್ತಾರೆ ಸಾಲ ಪಡೆದುಕೊಳ್ಳಲು ಇಚ್ಛಿಸುವವರು ಕೆಲವು ಪೂರಕ ಮಾಹಿತಿ ಹಾಗೂ ಅವರು ಬೀದಿ ವ್ಯಾಪಾರ ಮಾಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷ್ಯ ನೀಡಬೇಕಾಗುತ್ತದೆ. ಇದಕ್ಕೆ ಬೀದಿ ವ್ಯಾಪಾರಿಗಳ ಪಟ್ಟಣ ವ್ಯಾಪಾರ ಸಮಿತಿ ನೆರವಾಗಲಿದೆ.
10 ಸಾವಿರಕ್ಕೆ 20 ಷರತ್ತು! : ಕೇಂದ್ರ ಸರ್ಕಾರ 10 ಸಾವಿರ ಆರ್ಥಿಕ ನೆರವು ನೀಡುವ ವಿಶೇಷ ಯೋಜನೆಯನ್ನು ಅನುಷ್ಠಾನ ಮಾಡಿದೆಯಾದರೂ ಇದಕ್ಕೆ 20ಕ್ಕೂ ಹೆಚ್ಚು ಕಾಲಂಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕಾಗಿದೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಕೆವೈಸಿ ದಾಖಲೆ, ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ವಿವರ ಹಾಗೂ ಸ್ಥಳೀಯ ಸಾಕ್ಷಿದಾರರು ಎಲ್ಲವೂ ಬೇಕಾಗಿದೆ. ಇದರಲ್ಲಿ ಒಂದಂಶ ತಪ್ಪಾದರೂ ಅಥವಾ ಸಿಗದೆ ಇದ್ದರೂ ಸಾಲ ಕೈತಪ್ಪುವ ಸಾಧ್ಯತೆಯಿದೆ.
ಏನಿದು ಸ್ವ–ನಿಧಿ ಯೋಜನೆ? : ದೇಶಾದ್ಯಂತ ಬೀದಿ ವ್ಯಾಪಾರವನ್ನೇ ನಂಬಿಕೊಂಡಿರುವ ಬೀದಿ ವ್ಯಾಪಾರಿಗಳಿಗೆ ಆರ್ಥಿಕವಾಗಿ ಸಹಕಾರ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಈ ಹಿಂದೆ ಜಾರಿಗೆ ತರಲಾಗಿದ್ದ ಬಡವರ ಬಂಧು ಯೋಜನೆಯ ಮಾದರಿಯಲ್ಲೇ ಕೇಂದ್ರ ಸರ್ಕಾರವು ಪಿಎಂ ಸ್ವನಿಧಿ ಯೋಜನೆಯನ್ನು ಪರಿಚಯಿಸಿತ್ತು. ಈ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಸಾಲ ಸಿಗಲಿದ್ದು, ಇದನ್ನು ಒಂದು ವರ್ಷದ ಮಾಸಿಕ ಕಂತುಗಳಲ್ಲಿ ತೀರಿಸಬೇಕಾಗುತ್ತದೆ.
ಎಡವಿದ ಪಾಲಿಕೆ : ಪಿಎಂ- ಸ್ವನಿಧಿ ಅನುಷ್ಠಾನಕ್ಕೆ ತೊಡಕಿದ್ದರೂ, ಬೀದಿ ವ್ಯಾಪಾರಿಗಳಿಗೆ ನೆರವಾಗುವಲ್ಲಿ ಪಾಲಿಕೆ ಎಡವಿದೆ. ಬೀದಿ ವ್ಯಾಪಾರಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೇವಲ ನಾಲ್ಕು ವಲಯಗಳಲ್ಲಿ ಐದು ಹೆಲ್ಪಡೆಸ್ಕ್ಗಳನ್ನು ಪ್ರಾರಂಭಿಸಲಾಗಿದೆ. ಪೂರ್ವದಲ್ಲಿ ಒಂದು, ಪಶ್ಚಿಮದಲ್ಲಿ ಒಂದು, ದಕ್ಷಿಣದಲ್ಲಿ ಎರಡು ಹಾಗೂ ಮಹದೇವಪುರದಲ್ಲಿ ಒಂದು ಸೇರಿ ಒಟ್ಟು ಐದು ಹೆಲ್ಪ್ಡೆಸ್ಕ್ಗಳನ್ನು ಪ್ರಾರಂಭಿಸಲಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಅಧಿಕಾರಿಗಳು ಕೋವಿಡ್ ದತ್ತ ಬೊಟ್ಟು ತೋರಿಸುತ್ತಾರೆ.
5ತಿಂಗಳಿನಿಂದ ಬೀದಿ ವ್ಯಾಪಾರವಿಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ದ್ದೇವೆ. ನಮಗೆ ಕನಿಷ್ಠ 15 ಸಾವಿರ ಸಹಾಯ ಧನ ನೀಡಬೇಕು. ಸ್ವನಿಧಿ ಯೋಜನೆ ಸರಳೀಕರಣ ಗೊಳಿಸಬೇಕು
.-ಎಸ್.ಬಾಬು,ಬೆಂ. ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ
ಪಿಎಂ-ಸ್ವ -ನಿಧಿ ಅನುಷ್ಠಾನಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಂಡು ಫಲಾನುಭವಿಗಳ ಆರ್ಥಿಕ ನೆರವು ನೀಡಲಾಗುವುದು.
–ಎಸ್.ಜಿ ರವೀಂದ್ರ, ಪಾಲಿಕೆ ವಿಶೇಷ ಆಯುಕ್ತ
–ಹಿತೇಶ್ ವೈ