Advertisement

ಮೃಣ್ಮಯ ಕಲೆಯಲ್ಲಿ ಮೂಡಿದ ತಾಂತ್ರಿಕ ಶಿಲ್ಪಗಳು

02:15 PM Oct 06, 2017 | |

ಮಣ್ಣಿನಲ್ಲಿ ಹುಟ್ಟಿ ಮಣ್ಣಿನಲ್ಲಿ ಬೆಳೆದು ಕೊನೆಗೆ ಮಣ್ಣನ್ನೇ ಸೇರುವ ಈ ಮನುಷ್ಯ ಜೀವಿಗೆ ಮಣ್ಣಿನೊಡನಿರುವ ಬಾಂಧವ್ಯ ವಿಶೇಷವಾದದ್ದು. ರೈತ ಮಣ್ಣಿನೊಂದಿಗೆ ಬೆವರು ಸುರಿಸಿ ದುಡಿದು ಅದನ್ನು ಫ‌ಲವತ್ತಾಗಿಸಿ ಬೆಳೆ ಬೆಳೆಯುತ್ತಾನೆ. ನಾಡಿನವರೆಲ್ಲ ಉಣ್ಣಲು ಆಹಾರ ಒದಗಿಸುತ್ತಾನೆ. ಕೆಲಸಗಾರರು ಮಣ್ಣನ್ನು ಹದಗೊಳಿಸಿ ಕಟ್ಟಡಗಳನ್ನು ಕಟ್ಟಿ ನಾವೆಲ್ಲ ವಾಸಿಸಲು ಸೂರನ್ನು ಸಿದ್ಧಗೊಳಿಸುತ್ತಾರೆ. ಮಣ್ಣಿಗೆ ಬಂಗಾರದ ಬೆಲೆಯಿದೆಯೆಂದು ಬಲ್ಲವರು ಜಾಗಗಳನ್ನು ಖರೀದಿಸಿ ಮಾರಾಟ ಮಾಡಿ ಹಣ ಸಂಪಾದಿಸುತ್ತಾರೆ. ಆರೋಗ್ಯಕ್ಕೆ ಒಳ್ಳೆಯದೆಂದು ಮಣ್ಣಿನ ಪಾತ್ರೆಗಳಲ್ಲಿ ಆಹಾರ ತಯಾರಿಸುತ್ತಾರೆ. 

Advertisement

ಮಕ್ಕಳಿಗಂತೂ ಮಣ್ಣಿನಾಟ ಬಹಳ ಇಷ್ಟ. ಮಣ್ಣನ್ನು ಮೈ ತುಂಬಾ ಬಳಿದುಕೊಂಡು ಒಬ್ಬರಿಗೊಬ್ಬರು ಎರಚುತ್ತಾ ಕೆಸರಿನಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತಾರೆ. ಹೆತ್ತವರು ಬೈದರೂ ಅವರಿಗೆ ನಗಣ್ಯ. ಶಾಲೆಯಲ್ಲಿ ನಡೆಸುವ ಕ್ಲೇ ಮಾಡೆಲಿಂಗ್‌ ಸ್ಪರ್ಧೆಯಲ್ಲಿಯೂ ಅವರಿಗೆ ಭಾಗವಹಿಸಲು ಅತಿ ಉತ್ಸಾಹ. ಯುವಕ ಯುವತಿಯರೂ ಮಣ್ಣಿನಾಟದಿಂದ  ಹೊರತಾಗಿಲ್ಲ. ಮಳೆಗಾಲ ಬಂದೊಡನೆ ಅಲ್ಲಲ್ಲಿ ಕೆಸರುಗದ್ದೆ ಓಟಗಳನ್ನು ನಡೆಸಿ ಖುಷಿ ಪಡುತ್ತಾರೆ. ಅಂತೂ ಎಲ್ಲರಿಗೂ ಮಣ್ಣು ಬೇಕು. 

ಮಣ್ಣಿಗೆ ಬಲವಿಲ್ಲದಿದ್ದರೂ ಅಂಟುತನವಿದೆ. ನೀರಿನೊಂದಿಗೆ ಕಲಸಿ ಬಳಸಿದಾಗ, ಮತ್ತೆ ಒಣಗಿ ದಾಗ ಅದು ಬಲಗೊಳ್ಳುತ್ತದೆ. ಬೇಯಿಸಿದರೆ ಗಟ್ಟಿಯಾಗಿ ಬಹುಕಾಲ ಬಾಳುತ್ತದೆ. ಹಿಂದಿನ ಕಾಲದಲ್ಲಿ ಮಣ್ಣಿಗೆ ಹುಲ್ಲನ್ನು ಸಣ್ಣಗೆ ತುಂಡರಿಸಿ ಸೇರಿಸಿ ಅದಕ್ಕೆ ಬೆಲ್ಲ, ಸುಣ್ಣ, ಮರಳು ಬೆರೆಸಿ ಮನೆಯ, ಕಟ್ಟಡದ ಗೋಡೆಗಳನ್ನು ಕಟ್ಟುತ್ತಿದ್ದರು. ಅದು ಈಗಿನ ಕಾಲದ ಕಾಂಕ್ರೀಟ್‌ ಗೋಡೆಗಿಂತಲೂ ಗಟ್ಟಿಯಾಗಿದ್ದು ಬಹುಕಾಲ ಬಾಳುತ್ತದೆ. ಇದೇ ತಂತ್ರಜ್ಞಾನದಿಂದ ಅಣೆಕಟ್ಟುಗಳನ್ನೂ ಕಾಲುವೆಗಳನ್ನೂ ಕಟ್ಟುತ್ತಿದ್ದರು. ಭಾರತರತ್ನ ಸರ್‌. ಎಂ. ವಿಶ್ವೇಶ್ವರಯ್ಯನವರು ಕಟ್ಟಿದ ಕನ್ನಂಬಾಡಿಯ ಅಣೆಕಟ್ಟು ಇದಕ್ಕೊಂದು ಉತ್ತಮ ಉದಾಹರಣೆ. ಅಂಥ ಶಿಲ್ಪಿಯ ಅರ್ಥಪೂರ್ಣ ದಿನಾಚರಣೆ ಹಾಗೂ ತಾಂತ್ರಿಕ ಶಿಲ್ಪಕಲಾ ಕೃತಿಗಳ ಪ್ರದರ್ಶನ ಕಳೆದ ವಾರ ಮಣಿಪಾಲದ ತಾಂತ್ರಿಕ ಮಹಾವಿದ್ಯಾಲಯದಲ್ಲಿ (ಎಂ.ಐ.ಟಿ.) ವಜ್ರ ಮಹೋತ್ಸವದ ಪ್ರಯುಕ್ತ ವಿಜೃಂಭಣೆ ಯಿಂದ ನಡೆಯಿತು. ಜಿಲ್ಲೆಯ ಪ್ರಸಿದ್ಧ ಮೃಣ್‌ಕಲೆ (ಟೆರಕೊಟಾ) ಶಿಲ್ಪಿ ವೆಂಕಿ ಪಲಿಮಾರು ಅವರ ಬಳಗದ ಮಾರ್ಗದರ್ಶನದಲ್ಲಿ ಎಂ.ಐ.ಟಿ. ವಿದ್ಯಾರ್ಥಿಗಳು ತಯಾರಿಸಿದ ವೈವಿಧ್ಯ ಮಯ ಆವೆಮಣ್ಣಿನ ಶಿಲ್ಪಕಲಾಕೃತಿಗಳು ಅಲ್ಲಿದ್ದು ವಿಸ್ಮಯ ಗೊಳಿಸಿದವು. ಮಣ್ಣಿನಲ್ಲಿ ಇಷ್ಟು ಚೆನ್ನಾಗಿ ಕಲಾಕೃತಿ ರಚಿಸಲಾಗುತ್ತದೆಯೇ ಎಂದು ಹುಬ್ಬೇರಿಸುವಂತಾಯಿತು. 

ವೆಂಕಿ ಪಲಿಮಾರು ಸ್ವತಃ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಆಕರ್ಷಕ ಕಲಾಕೃತಿಯನ್ನು ಅಣೆಕಟ್ಟಿನ ಸಂಯೋಜನೆಯೊಂದಿಗೆ ವಿನ್ಯಾಸಗೊಳಿಸಿ ಉಳಿದವರಿಗೆ ಸ್ಫೂರ್ತಿಯನ್ನಿತ್ತರು. ಎಂ.ಐ.ಟಿ.ಯ 40ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ತಮ್ಮ ಸಿಲೆಬಸ್‌ಗೆ ಹೊಂದಿಕೊಂಡಂತೆ ಕಟ್ಟಡಗಳ ಮಾದರಿಯನ್ನು ಸೃಜನಾತ್ಮಕವಾಗಿ ವಿನ್ಯಾಸ ಗೊಳಿಸಿದರು. ಜತೆಗೆ ವಿವಿಧ ಕೋಟೆಕೊತ್ತಲಗಳು, ಪರಿಸರ ನಾಶದ ದುಷ್ಪರಿಣಾಮದ ದೃಶ್ಯ, ಪೈರೇಟ್ಸ್‌, ಮೌಂಟೆನ್‌ ವಿತ್‌ ಸ್ಪೇಸ್‌, ಬೇಬಿಟ್ರಂಪ್‌, ಏಲಿಯಸ್‌ ಸ್ಪೇಸಸ್‌ ಇನ್‌ ಇತ್ಯಾದಿ ಕಲಾಕೃತಿಗಳನ್ನೂ ರಚಿಸಿದರು. ಮಣ್ಣಿನಾಟದಲ್ಲಿರುವ ಖುಷಿಯನ್ನು ಕಂಡುಕೊಂಡರು. ಪರಸ್ಪರ ಅನುಭವಗಳನ್ನು ಹಂಚಿಕೊಂಡರು. ಒಬ್ಬರಿ ಗೊಬ್ಬರು ಕಲಾಕೃತಿಗಳನ್ನು ತೋರಿಸಿ ಕುಣಿದಾಡಿದರು. ಎಂಜಿನಿಯರ್ ಡೇಗೊಂದು ಹೊಸ ಮೆರುಗು ತಂದರು.
   
ಉಪಾಧ್ಯಾಯ ಮೂಡುಬೆಳ್ಳೆ

Advertisement

Udayavani is now on Telegram. Click here to join our channel and stay updated with the latest news.

Next