ಸುರತ್ಕಲ್: ಕೈ ಮಗ್ಗ ಉತ್ಪಾದನೆ ಯಲ್ಲಿ ಪ್ರಪಂಚದಲ್ಲೇ ಭಾರತ ಅತಿ ದೊಡ್ಡ ದೇಶವಾಗಿದ್ದು, ಹಿನ್ನಡೆಯಲ್ಲಿರುವ ಈ ಕ್ಷೇತ್ರಕ್ಕೆ ಉತ್ತೇಜನ ನೀಡಲು ಎನ್‌ಐಟಿಕೆ ಯಂತಹ ವಿದ್ಯಾಲಯಗಳು ಮುಂದಾಗ ಬೇಕು. ಯುವ ಜನತೆ ಈ ಕ್ಷೇತ್ರದ ಬಗ್ಗೆ ಶಿಕ್ಷಣ ಪಡೆಯುವ ಮೂಲಕ ಅಭಿವೃದ್ಧಿ,ಯೋಜನೆ ಹಾಗೂ ಖಾದಿ ವಸ್ತುಗಳನ್ನು ಖರೀದಿಸಿ ಗುಡಿಕೈಗಾರಿಕೆಯನ್ನು ಉಳಿಸಲು ಪಣತೊಡ ಬೇಕು ಎಂದು ಕೈ ಮಗ್ಗ ಮತ್ತು ಜವಳಿ ಇಲಾಖಾ ಜಂಟಿ ಕಾರ್ಯದರ್ಶಿ ಸಿ.ಎಸ್.ಯೋಗೀಶ್ ಹೇಳಿದರು.
ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಶಿವಮೊಗ್ಗ, ಮಂಗಳೂರು, ಕೈಮಗ್ಗ ಮತ್ತು ಜವಳಿ ಇಲಾಖೆ, ಎನ್‌ಐಟಿಕೆ ಸುರತ್ಕಲ್, ಜಿಲ್ಲಾ ವಾರ್ತಾ ಇಲಾಖೆ ಸಹಯೋಗದಲ್ಲಿ ಶನಿವಾರ ಸುರತ್ಕಲ್ ಎನ್‌ಐಟಿಕೆ ಸಭಾಂಗಣದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಕೈ ಮಗ್ಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿಯರು 2015ನೇ ಇಸವಿಯಿಂದ ಆ.7ರಂದು ರಾಷ್ಟ್ರೀಯ ಕೈ ಮಗ್ಗ ದಿನ ಆಚರಿಸಲು ಆರಂಭಿಸಿದ್ದು, ಈಗ 3ನೇ ವರ್ಷಾಚರಣೆ ರಾಜಸ್ಥಾನದಲ್ಲಿ ನಡೆಯಲಿದೆ ಎಂದರು.ಸರಕಾರ ಕೈ ಮಗ್ಗ ವಸ್ತ್ರಗಳ ಖರೀದಿಗೆ ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಆನ್‌ಲೈನ್ ಮೂಲಕ ಖರೀದಿಗೆ ವ್ಯವಸ್ಥೆ ಮಾಡಿದೆ. ನೇಕಾರರು ಇಡೀ ದಿನ ದುಡಿದರೂ 150-200 ರೂ.ಆದಾಯ ಸಿಗು ತ್ತದೆ. ಅದರೆ ಕೂಲಿ ಕೆಲಸಕ್ಕೆ ಹೋದರೆ 500ರಿಂದ 600 ರೂ. ವೇತನ ಸಿಗುತ್ತದೆ. ಹೀಗಾಗಿ ವಯೋವೃದ್ಧರು ನೇಕಾರ ಕೆಲಸ ಮಾಡುತ್ತಿದ್ದರೆ, ಯುವ ಸಮುದಾಯ ಇದರಿಂದ ವಿಮುಖವಾಗಿದೆ.
ಸರಕಾರ ಈ ಹಿಂದೆಯೇ ವೈವಿಧ್ಯಮಯ ಕೈ ಮಗ್ಗ ಬಟ್ಟೆ ತಯಾರಿಸಲು ಡಿಸೈನರ್‌ಗಳ ಪೂರೈಕೆ ಮಾಡುತ್ತಿದ್ದರೆ ಇಂದು ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು ಸಾಧ್ಯವಾಗುತ್ತಿತ್ತು. ಈಗ ಕೇಂದ್ರ ಸರಕಾರ ರಾಷ್ಟ್ರೀಯ ಕೈ ಮಗ್ಗ ದಿನಾಚರಣೆ ಮೂಲಕ ಮರುಚೇತನ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದು ಸಂಪನ್ಮೂಲ ವ್ಯಕ್ತಿಯಾಗಿದ್ದ ಪಡು ಪಣಂಬೂರು ಪ್ರಾಥಮಿಕ ನೇಕಾರರ ಸಂಘದ ನಿವೃತ್ತ ಆಡಳಿತ ನಿರ್ದೇಶಕ ಬಿ.ರತ್ನಾಕರ್ ಹೇಳಿದರು.
ಎನ್‌ಐಟಿಕೆ ವಿದ್ಯಾರ್ಥಿ ಕ್ಷೇಮಪಾಲನಾ ಡೀನ್ ಪ್ರೊ| ಎಸ್.ಎಂ. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಕ್ಷೇತ್ರಪ್ರಚಾರ ನಿರ್ದೇಶನಾಲಯದ ಉಪನಿರ್ದೇಶಕ ಕೆ.ಪಿ. ರಾಜೀವನ್, ಮಂಗಳೂರು ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕ ಶಿವಶಂಕರ್ ಎಚ್., ಅಧಿ ಕಾರಿಗಳಾದ ಧರಣೇಶ್, ಶ್ಯಾಂ ಪ್ರಸಾದ್, ಫೆಲಿಕ್ಸ್ ಮತ್ತಿತರರು ಉಪಸ್ಥಿತರಿದ್ದರು.
ದರ್ಶನ್ ಸ್ವಾಗತಿಸಿದರು. ರೋಹಿತ್ ನಿರೂಪಿಸಿದರು. ರಸಪ್ರಶ್ನೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕೈ ಮಗ್ಗ ವಸ್ತ್ರಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿತ್ತು.
ನೇಕಾರರು ಸಂಕಷ್ಟದಲ್ಲಿ ಸೂಕ್ಷ್ಮ ಕರಕುಶಲ ಜಾಣ್ಮೆ ಹೊಂದಿರುವ ಈ ಕ್ಷೇತ್ರವನ್ನು ಉಳಿಸಲು ಮತ್ತು ನೇಕಾರರ ಕ್ಷೇಮಾಭಿವೃದ್ಧಿಗಾಗಿ ಭಾರತ ಸರಕಾರ ವಿವಿಧ ಯೋಜನೆ ಹಮ್ಮಿಕೊಂಡಿದೆ. ರಾಜ್ಯ ಹಾಗೂ ಕೇಂದ್ರ ಸರಕಾರ ಇವರ ಉತ್ಪಾದನ ವಸ್ತುಗಳ ಮೇಲೆ ಶೇ. 20ರಷ್ಟು ರಿಯಾಯಿತಿ, ವಸತಿ, ವಿಮೆ ಮತ್ತಿತರ ಸೌಲಭ್ಯ ಒದಗಿಸುತ್ತಿದೆ. ದೇಶದಲ್ಲಿ 43 ಲಕ್ಷ ನೇಕಾರರಿದ್ದು, 24 ಲಕ್ಷ ಕೇಂದ್ರಗಳು ಕೈ ಮಗ್ಗ ಚಟುವಟಿಕೆಯಲ್ಲಿ ನಿರತವಾಗಿವೆ. ಇಂದು ಖಾದಿ ವಸ್ತ್ರಗಳಿಗೆ ಬೇಡಿಕೆ ಕುಸಿತವಾಗಿದೆ.
– ಸಿ.ಎಸ್.ಯೋಗೀಶ್
ಜವಳಿ ಇಲಾಖಾ ಜಂಟಿ ಕಾರ್ಯದರ್ಶಿ