ನವದೆಹಲಿ: ಹಿಂದೂಗಳಿಗೆ ಪರಮ ಪವಿತ್ರವಾಗಿರುವ ಅಮರನಾಥ ಯಾತ್ರೆ ಪ್ರಾರಂಭವಾಗಲು ಇನ್ನೂ ಎರಡು ತಿಂಗಳು ಬಾಕಿಯಿದೆ. ಆದರೆ ಯಾತ್ರಾರ್ಥಿಗಳ ತಂಡವೊಂದು ತಾವು ಈಗಾಗಲೇ ಅಮರನಾಥ ಯಾತ್ರೆಯನ್ನು ಯಶಸ್ವಿಯಾಗಿ ಕೈಗೊಂಡಿರುವುದಾಗಿ ಹೇಳಿಕೊಂಡಿದೆ. ಮಾತ್ರವಲ್ಲದೇ ತಾವು ಅಲ್ಲಿಗೆ ಭೇಟಿ ನೀಡಿರುವ ಸಂದರ್ಭದಲ್ಲಿ ತೆಗೆದಿರುವುದಾಗಿ ಹೇಳಿಕೊಂಡಿರುವ ನೈಸರ್ಗಿಕ ಶಿವಲಿಂಗದ ಒಂದಷ್ಟು ಫೊಟೋಗಳನ್ನು ಸಹ ಈ ತಂಡ ಪ್ರಕಟಿಸಿದೆ.
ಈ ಋತುವಿನಲ್ಲಿ ಅಮರನಾಥ ಯಾತ್ರೆ ಕೈಗೊಂಡಿರುವ ಮೊದಲ ತಂಡ ನಮ್ಮದಾಗಿದೆ ಎಂದು ಎಂಟು ಜನ ಯಾತ್ರಿಕರ ಈ ಗುಂಪು ಹೇಳಿಕೊಂಡಿದೆ. ಎಪ್ರಿಲ್ ಕೊನೆಯ ವಾರದಲ್ಲಿ 20ನೇ ತಾರೀಖೀನಿಂದ 25ರವರೆಗೆ ತಾವು ಅಮರನಾಥ ಗುಹಾಲಯಕ್ಕೆ ತೆರಳಿರುವುದಾಗಿಯೂ ಈ ತಂಡ ಇದೀಗ ಹೇಳಿಕೊಂಡಿರುವುದಾಗಿ ವರದಿಯಾಗಿದೆ.
ನೈಸರ್ಗಿಕ ಸ್ವರೂಪದ ಹಿಮರೂಪಿ ಶಿವಲಿಂಗವು ಈ ವರ್ಷ ಇನ್ನಷ್ಟು ದೊಡ್ಡದಾಗಿ ಕಾಣಿಸುತ್ತಿದೆ ಎಂದು ಯಾತ್ರಿಗಳ ತಂಡ ಹೇಳಿಕೊಂಡಿದೆ ಮತ್ತು ಅಮರನಾಥಕ್ಕೆ ಸಾಗುವ ದಾರಿಯಲ್ಲಿ ಈಗಲೂ10-15 ಅಡಿಗಳಷ್ಟು ಹಿಮ ತುಂಬಿಕೊಂಡಿದೆ ಎಂದು ಈ ಯಾತ್ರಾರ್ಥಿಗಳ ತಂಡ ತಿಳಿಸಿದೆ.
ವಿಚಿತ್ರವೆಂದರೆ ಅಮರನಾಥ ಯಾತ್ರೆಯನ್ನು ಸಂಘಟಿಸುವ ಶ್ರೀ ಅಮರನಾಥ್ ಜೀ ದೇವಸ್ಥಾನ ಮಂಡಳಿಯ ಅಧಿಕಾರಿಗಳೇ ಈ ಬಾರಿ ಇನ್ನೂ ಗುಹಾಲಯಕ್ಕೆ ಭೇಟಿ ನೀಡಿಲ್ಲ. ಈ ಎಂಟು ಜನ ಯತ್ರಾರ್ಥಿಗಳ ತಂಡ ಅಲ್ಲಿ ತೆರಳಿರುವುದನ್ನು ಅಧಿಕೃತವಾಗಿ ಮಂಡಳಿಯು ಇನ್ನೂ ದೃಢಪಡಿಸಿಲ್ಲ.
ಈ ಬಾರಿಯ 46 ದಿನಗಳ ಅಮರನಾಥ ಯಾತ್ರೆಯು ಜುಲೈ 01ರ ಮಾಸ ಶಿವರಾತ್ರಿ ದಿನದಂದು ಪ್ರಾರಂಭಗೊಳ್ಳಲಿದೆ ಹಾಗೂ ಆಗಸ್ಟ್ 15ರ ಶ್ರಾವಣ ಪೌರ್ಣಮಿ ಮತ್ತು ರಕ್ಷಾ ಬಂಧನದ ದಿನ ಯಾತ್ರ ಸಂಪನ್ನಗೊಳ್ಳಲಿದೆ.
ಅಮರನಾಥ ಗುಹಾಲಯಕ್ಕೆ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಸಾಮಾನ್ಯವಾಗಿ ಎರಡು ಮಾರ್ಗಗಳಲ್ಲಿ ಈ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಒಂದು ಅನಂತನಾಗ್ ಜಿಲ್ಲೆಯಲ್ಲಿರುವ ಸಾಂಪ್ರದಾಯಿಕ ಪಹಾಲ್ಗಂ ಮಾರ್ಗವಾದರೆ ಇನ್ನೊಂದು ಗಂದೇರ್ ಬಾಲ್ ಜಿಲ್ಲೆಯ ಮೂಲಕ ಸಾಗುವ ಬಾಲ್ಟಲ್ ಹಾದಿ.