ಫ್ಲೋರಿಡಾ: ಯುವ ಪ್ರತಿಭೆಗಳಿಗೆ ಮಣೆ ಹಾಕುತ್ತಿರುವ ಭಾರತ ತಂಡವು ಅರೆಕಾಲಿಕ ಬೌಲಿಂಗ್ ಮಾಡುವ ಬ್ಯಾಟರ್ ಗಳನ್ನು ಎದುರು ನೋಡುತ್ತಿದೆ.ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಅವರ ಬ್ಯಾಟಿಂಗ್ ಪರಾಕ್ರಮ ಎಲ್ಲರಿಗೂ ತಿಳಿದಿದೆ. ಇವರಿಬ್ಬರೂ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಅಮೋಘ ಪದಾರ್ಪಣೆ ಮಾಡಿದ್ದಾರೆ. ಜೈಸ್ವಾಲ್ ಅಗ್ರ ಕ್ರಮಾಂಕದಲ್ಲಿ ಪ್ರಭಾವ ಬೀರಿದರೆ, ತಿಲಕ್ ವರ್ಮಾ ಮಧ್ಯಮ ಕ್ರಮಾಂಕದಲ್ಲಿ ಟಿ 20 ಸರಣಿಯಲ್ಲಿ ಸಾಕಷ್ಟು ಭರವಸೆ ತೋರಿಸಿದ್ದಾರೆ. ಆದರೆ ಇದೀಗ ಅವರಿಂದ ಬೌಲಿಂಗ್ ಮಾಡಿಸಲು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಯೋಚಿಸುತ್ತಿದೆ.
ಸ್ಪಿನ್ ಬೌಲಿಂಗ್ ಮಾಡುವ ಅರೆಕಾಲಿಕ ಬೌಲರ್ ಗಳಾಗಿ ತಿಲಕ್ ವರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಬಳಸಲು ಯೋಚಿಸಲಾಗುತ್ತಿದೆ. ಅವರ ಬೌಲಿಂಗ್ ಸಾಮರ್ಥ್ಯದ ಮೇಲೆ ತಂಡವು ಕೆಲಸ ಮಾಡುತ್ತಿದೆ. ಶೀಘ್ರದಲ್ಲೇ ಅವರು ತಲಾ ಒಂದು ಓವರ್ ಬೌಲಿಂಗ್ ಮಾಡುತ್ತಾರೆ ಎಂದು ಭಾರತೀಯ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಹೇಳಿದ್ದಾರೆ.
“ತಿಲಕ್ ಮತ್ತು ಯಶಸ್ವಿ ಅಂಡರ್ 19 ದಿನಗಳಿಂದಲೂ ಬೌಲಿಂಗ್ ಮಾಡುವುದನ್ನು ನಾನು ನೋಡಿದ್ದೇನೆ. ಅವರು ಉತ್ತಮ ಬೌಲರ್ ಗಳಾಗಲು ಸಮರ್ಥರಾಗಿದ್ದಾರೆ. ಅವರು ಈ ಮಟ್ಟದಲ್ಲಿ ಕೆಲಸ ಮಾಡಬಹುದು. ಈ ರೀತಿಯ ಆಯ್ಕೆಗಳು ಸಿಕ್ಕಾಗ ನಮಗೆ ಅನುಕೂಲವಾಗುತ್ತದೆ. ಅವರು ಶೀಘ್ರದಲ್ಲೇ ಬೌಲ್ ಮಾಡುವುದನ್ನು ನಾವು ನೋಡುತ್ತೇವೆ, ನಾವು ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ. ಇದು ಸಮಯ ತೆಗೆದುಕೊಳ್ಳುತ್ತದೆ. ಶೀಘ್ರದಲ್ಲೇ, ಅವರು ಕನಿಷ್ಠ ಒಂದು ಓವರ್ ಬೌಲಿಂಗ್ ಮಾಡುವುದನ್ನು ನಾವು ನೋಡುತ್ತೇವೆ” ಎಂದು ಪಾರಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದನ್ನೂ ಓದಿ:Misbehaving: ಗೋವಾದ ಪಬ್ ನಲ್ಲಿ ಯುವತಿಗೆ ಕಿರುಕುಳ ನೀಡಿದ ಪ್ರಕರಣ: ಡಿಐಜಿ ಸಸ್ಪೆಂಡ್
ಅಮೆರಿಕದ ಫ್ಲೋರಿಡಾದಲ್ಲಿ ಶನಿವಾರ ನಡೆಯಲಿರುವ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲಿದೆ. ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಭಾರತ ಕಳೆದ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿತ್ತು. ಏಳು ವಿಕೆಟ್‌ಗಳಿಂದ ಗೆದ್ದು, ಸರಣಿಯನ್ನು 2-1 ನೊಂದಿಗೆ ಜೀವಂತವಾಗಿರಿಸಿದೆ.