ಮುಂಬೈ: ಸದ್ಯ ಕೆರಿಬಿಯನ್ ನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಕೂಟದ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರವಧಿ ಮುಕ್ತಾಯವಾಗಲಿದೆ. ಹೀಗಾಗಿ ವಿಶ್ವಕಪ್ ಬಳಿಕ ಟೀಂ ಇಂಡಿಯಾಗೆ ಹೊಸ ಕೋಚ್ ಬರಲಿದ್ದಾರೆ. ಈಗಾಗಲೇ ಸುದ್ದಿಯಾಗಿರುವಂತೆ ಮಾಜಿ ಆಟಗಾರ, ಇತ್ತೀಚೆಗಷ್ಟೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಗೌತಮ್ ಗೌಂಭೀರ್ ಅವರು ಮುಂದಿನ ಕೋಚ್ ಆಗುವ ಸಿದ್ದತೆಯಲ್ಲಿದ್ದಾರೆ.
ಬಿಸಿಸಿಐ ಮೂಲಗಳ ಪ್ರಕಾರ ಗೌತಿ ಅವರು ರಾಹುಲ್ ದ್ರಾವಿಡ್ ಸ್ಥಾನಕ್ಕೆ ಬರುವುದು ಬಹುತೇಕ ಖಚಿತ. ಕೆಲವೇ ದಿನಗಳ ಹಿಂದೆ ಅವರ ಸಂದರ್ಶನವೂ ನಡೆದಿತ್ತು. ಗೌತಮ್ ಗಂಭೀರ್ ಅವರು ಕೆಲವು ನಿಬಂಧನೆಗಳನ್ನು ಕೂಡಾ ಬಿಸಿಸಿಐ ಮುಂದಿಟ್ಟಿದ್ದಾರೆ ಎಂಬ ವರದಿಗಳು ಬಂದಿದ್ದವು.
ಆದರೆ ಇದೀಗ ವಿಶ್ವಕಪ್ ಮುಗಿದ ಬಳಿಕದ ಸರಣಿಗೆ ಮುಖ್ಯ ಕೋಚ್ ಆಗಿ ಗೌತಿ ಬದಲಿಗೆ ವಿವಿಎಸ್ ಲಕ್ಷ್ಮಣ್ ಹೆಸರು ಕೇಳಿಬಂದಿದೆ. ಟಿ20 ವಿಶ್ವಕಪ್ ಮುಗಿದ ಬಳಿಕ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಐದು ಪಂದ್ಯಗಳ ಟಿ20 ಸರಣಿ ಜುಲೈ 6 ರಿಂದ ಆರಂಭವಾಗಲಿದೆ. ಇದಕ್ಕೆ ವಿವಿಎಸ್ ಲಕ್ಷ್ಮಣ್ ಅವರು ಮುಖ್ಯ ಕೋಚ್ ಆಗಿರಲಿದ್ದಾರೆ ಎಂದು ವರದಿಯಾಗಿದೆ.
ಜಿಂಬಾಬ್ವೆ ಸರಣಿಗೆ ಸೀನಿಯರ್ ಆಟಗಾರರಿಗೆ ವಿರಾಮ ನೀಡಿ ಹೊಸ ಹುಡುಗರಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಹಾರ್ದಿಕ್ ಪಾಂಡ್ಯ ವಿರಾಮ ಬಯಸಿದರೆ ಸೂರ್ಯಕುಮಾರ್ ಯಾದವ್ ಅವರು ತಂಡವನ್ನು ಮುನ್ನಡೆಸಬಹುದು. ಐಪಿಎಲ್ ನಲ್ಲಿ ಮಿಂಚಿದ ಪ್ರತಿಭೆಗಳಾದ ರಿಯಾನ್ ಪರಾಗ್, ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ ಮುಂತಾದವರು ಅವಕಾಶ ಪಡೆಯುವ ಸಾಧ್ಯತೆಯಿದೆ.
ಅದಾದ ಬಳಿಕದ ಶ್ರೀಲಂಕಾ ಸರಣಿಯಿಂದ ಮುಂದಿನ ಮುಖ್ಯ ಕೋಚ್ ಜವಾಬ್ದಾರಿ ವಹಿಸುವ ಸಾಧ್ಯತೆಯಿದೆ. ಹೀಗಾಗಿ ಜಿಂಬಾಬ್ವೆ ಸರಣಿಗೆ ಎನ್ ಸಿಎ ಮುಖ್ಯಸ್ಥ ಲಕ್ಷ್ಮಣ್ ಮತ್ತು ಅವರ ತಂಡ ಕೋಚಿಂಗ್ ಮಾಡಲಿದೆ. ಜೂನ್ 22 ಅಥವಾ 23ರಂದು ತಂಡ ಪ್ರಕಟವಾಗಬಹುದು.