Advertisement

Team India: ವಿಶ್ವಕಪ್ ತಂಡದಲ್ಲಿ ತಿಲಕ್ ವರ್ಮಾ ಸ್ಥಾನ ಫಿಕ್ಸ್? ಸಂಜು- ಸೂರ್ಯಗಿಲ್ಲ ಅವಕಾಶ

04:31 PM Aug 10, 2023 | ಕೀರ್ತನ್ ಶೆಟ್ಟಿ ಬೋಳ |

ಐಸಿಸಿ ಏಕದಿನ ವಿಶ್ವಕಪ್ ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಭಾರತದಲ್ಲಿ ನಡೆಯಲಿರುವ ಈ ಕ್ರಿಕೆಟ್ ಮಹಾಕೂಟಕ್ಕೆ ಬಿಸಿಸಿಐ ಸಕಲ ಸಿದ್ದತೆ ನಡೆಸುತ್ತಿದೆ. ಆದರೆ ಕೂಟದ ಫೇವರೇಟ್ ಆಗಿರುವ ಭಾರತದ ತಂಡ ಇನ್ನೂ ಅಂತಿಮವಾಗಿಲ್ಲ. ವಿಶ್ವಕಪ್ ಇನ್ನೇನು ಬಂತು ಎನ್ನವ ಪರಿಸ್ಥಿತಿಯಲ್ಲಿಯೂ ಟೀಂ ಇಂಡಿಯಾದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಯಾರು ಆಡುತ್ತಾರೆ ಎನ್ನು ಬಗ್ಗೆ ಇನ್ನೂ ಖಚಿತತೆ ಸಿಕ್ಕಿಲ್ಲ.

Advertisement

ಇದೇ ವೇಳೆ ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಹೊಸ ಸುಳಿವೊಂದನ್ನು ನೀಡಿದ್ದಾರೆ. ಅದು ಕೆಲ ದಿನಗಳ ಹಿಂದೆಯಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ತಿಲಕ್ ವರ್ಮಾ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡುವ ಬಗ್ಗೆ.

ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಸ್ಥಂಭಗಳಾದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಗಾಯಗೊಂಡಿರುವ ಕಾರಣ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇವರಿಬ್ಬರ ಜಾಗದಲ್ಲಿ ಹಲವರನ್ನು ಆಡಿಸಿದರೂ ಇನ್ನೂ ಯಾರೂ ತಮ್ಮ ಸ್ಥಾನ ಖಾಯಂಗೊಳಿಸುವ ಛಾತಿ ತೋರಿಸಿಲ್ಲ. ಇದೀಗ ಬರುತ್ತಿರುವ ವರದಿಯ ಪ್ರಕಾರ ಶ್ರೇಯಸ್ ಅಯ್ಯರ್ ಅವರು ಚೇತರಿಸಿಕೊಳ್ಳುವುದು ತಡವಾಗಬಹುದು. ಹೀಗಾಗಿ ಅವರು ಆಗಸ್ಟ್ ಅಂತ್ಯದಲ್ಲಿ ಆರಂಭವಾಗುವ ಏಷ್ಯಾಕಪ್ ನಲ್ಲಿ ಆಡುವುದು ಕಷ್ಟ ಎನ್ನಲಾಗುತ್ತಿದೆ. ಹೀಗಾಗಿ ಏಶ್ಯನ್ ಗೇಮ್ಸ್ ತಂಡದಲ್ಲಿರುವ ತಿಲಕ್ ವರ್ಮಾ ಅವರನ್ನು ಅಲ್ಲಿಂದ ತೆಗೆದು ಏಷ್ಯಾಕಪ್ ನಲ್ಲಿ ಆಡಿಸಿ, ವಿಶ್ವಕಪ್ ಗೆ ತಯಾರು ಮಾಡಲು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಯೋಜನೆ ರೂಪಿಸಿದೆ ಎನ್ನುತ್ತಿದೆ ವರದಿ.

ಅಶ್ವಿನ್ ಅವರ ಹೇಳಿಕೆಗಳನ್ನು ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಸಹ ಬೆಂಬಲಿಸಿದ್ದಾರೆ. ಒಂದು ವೇಳೆ ಶ್ರೇಯಸ್ ಅಯ್ಯರ್ ಸಮಯಕ್ಕೆ ಸರಿಯಾಗಿ ಚೇತರಿಸಲು ವಿಫಲವಾದರೆ ತಿಲಕ್ ವರ್ಮಾ ಅವರನ್ನು ಅಂತಿಮ 15 ರಲ್ಲಿ ನೋಡಬಹುದು ಎಂದಿದ್ದಾರೆ. 20 ವರ್ಷದ ಸ್ಟೈಲಿಶ್ ಹೈದರಾಬಾದ್ ಎಡಗೈ ಆಟಗಾರ ವೆಸ್ಟ್ ಇಂಡೀಸ್‌ ನಲ್ಲಿ ನಡೆದ ಮೂರು ಟಿ20 ಪಂದ್ಯಗಳಲ್ಲಿಒಟ್ಟು 139 ರನ್ ಗಳಿಸಿದ್ದಾರೆ. ಅಲ್ಲದೆ ಹೊಡೆಬಡಿ ಆಟದ ಜೊತೆಗೆ ಸಮನ್ವಯದ ಆಟವನ್ನೂ ವರ್ಮಾ ತೋರಿಸಿದ್ದಾರೆ.

Advertisement

ತಿಲಕ್ ಯಾಕೆ? ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಲು ಪ್ರಯತ್ನದಲ್ಲಿರುವ ಇನ್ನೂ ಹಲವು ಆಟಗಾರರಿದ್ದಾರೆ. ಅವರ ನಡುವೆ ಮೊನ್ನೆಯಷ್ಟೇ ತಂಡ ಸೇರಿದ ತಿಲಕ್ ವರ್ಮಾ ಯಾಕೆ ವಿಶ್ವಕಪ್ ಆಡಬೇಕು ಎಂಬ ಪ್ರಶ್ನೆ ಕೇಳಬಹುದು. ಅದಕ್ಕೆ ಉತ್ತರ ತಿಲಕ್ ವರ್ಮಾ ಓರ್ವ ಎಡಗೈ ಆಟಗಾರ. ಅದಕ್ಕೆ ಪೂರಕವಾಗಿ ಟೀಂ ಇಂಡಿಯಾದಲ್ಲಿ ಸದ್ಯ ಏಳನೇ ಕ್ರಮಾಂಕದವರೆಗೆ ಯಾವುದೇ ಎಡಗೈ ಆಟಗಾರನಿಲ್ಲ. 2011ರ ವಿಶ್ವಕಪ್ ತಂಡ ಗಮನಿಸಿದರೆ ಅಲ್ಲಿ ಗೌತಮ್ ಗಂಭೀರ್, ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಹೀಗೆ ಮೂವರು ಲೆಫ್ಟ್ ಹ್ಯಾಂಡರ್ ಗಳಿದ್ದರು. ತಿಲಕ್ ವರ್ಮಾ ತಂಡದಲ್ಲಿ ಸ್ಥಾನ ಪಡೆದು ನಾಲ್ಕನೇ ಕ್ರಮಾಂಕದಲ್ಲಿ ಆಡಿದರೆ ಅದು ತಂಡದ ಸಮತೋಲನ ಹೆಚ್ಚಿಸಬಹುದು ಎನ್ನುವುದು ಒಂದು ವಾದ.

ತಿಲಕ್ ಆಯ್ಕೆಯ ವಾದ ಹಿಂದೆ ಅಶ್ವಿನ್ ಮತ್ತೊಂದು ಅಂಶದ ಮೇಲೂ ಬೆಳಕು ಚೆಲ್ಲಿದ್ದಾರೆ. ಟಾಪ್ ಕ್ರಿಕೆಟ್ ಆಡುವ ರಾಷ್ಟ್ರಗಳು ಉತ್ತಮ ಗುಣಮಟ್ಟದ ಫಿಂಗರ್ ಸ್ಪಿನ್ನರ್‌ ಗಳನ್ನು ಹೊಂದಿಲ್ಲ ಎನ್ನುವ ತರ್ಕದ ಸುತ್ತ ಅಶ್ವಿನ್ ವಾದ ನಡೆಯುತ್ತಿದೆ. “ಎಲ್ಲಾ ಅಗ್ರ ತಂಡಗಳ ಸ್ಪಿನ್ನರ್‌ ಗಳನ್ನು ನೋಡಿ. ಆಸ್ಟ್ರೇಲಿಯಾ ಆಷ್ಟನ್ ಅಗರ್ ಹೊಂದಿದೆ. ಇಂಗ್ಲೆಂಡ್ ತಂಡವು ಮೊಯಿನ್ ಅಲಿ ಮತ್ತು ಆದಿಲ್ ರಶೀದ್‌ ರಂತಹ ಲೆಗ್ ಸ್ಪಿನ್ನರ್ ಗಳನ್ನು ಹೊಂದಿದೆ. ಆದ್ದರಿಂದ, ಎಡಗೈ ಬ್ಯಾಟರ್‌ಗಳಿಗೆ ಸವಾಲು ಹಾಕಲು ಹೆಚ್ಚಿನ ತಂಡಗಳಲ್ಲಿ ಫಿಂಗರ್ ಸ್ಪಿನ್ನರ್ ಇಲ್ಲ. ಆದ್ದರಿಂದಲೇ ತಿಲಕ್ ವರ್ಮಾ ಮಿಡಲ್ ಆರ್ಡರ್ ನಲ್ಲಿ ಉತ್ತಮ ಆಸ್ತಿಯಾಗಬಹುದು” ಎನ್ನುತ್ತಾರೆ.

ಕಳೆದ ಏಕದಿನ ವಿಶ್ವಕಪ್‌ನಲ್ಲಿ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದ ಎಂಎಸ್ ಕೆ ಪ್ರಸಾದ್ ಕೂಡಾ ವರ್ಮಾ ಸಮರ್ಥ ಏಕದಿನ ಆಟಗಾರ ಎಂದು ಭಾವಿಸುತ್ತಾರೆ. “ಹೈದರಾಬಾದ್‌ ತಂಡದ ಪರ ತಿಲಕ್ ಲಿಸ್ಟ್ ಎ ದಾಖಲೆಯನ್ನು ನೋಡಿ. ಅವನು 25 ಲಿಸ್ಟ್ ಎ ಆಟಗಳನ್ನು ಆಡಿದ್ದಾರೆ ಮತ್ತು ಸರಾಸರಿ 55 ಪ್ಲಸ್ (56.18) ಹೊಂದಿದ್ದಾರೆ. ಐದು ಶತಕ ಮತ್ತು ಐದು ಅರ್ಧಶತಕಗಳು. ಅಂದರೆ ಪ್ರತಿ ಎರಡರಲ್ಲಿ ಒಂದು ಬಾರಿ ಅವರು ಅರ್ಧಶತಕಗಳನ್ನು ನೂರಕ್ಕೆ ಪರಿವರ್ತಿಸುತ್ತಿದ್ದಾರೆ” ಎಂದು ಪ್ರಸಾದ್ ಪಿಟಿಐಗೆ ತಿಳಿಸಿದರು.

ಸಂಜುಗೆ ಸ್ಥಾನ ಕಷ್ಟ: ಒಂದು ವೇಳೆ ರಾಹುಲ್ ಕೂಡಾ ವಿಶ್ವಕಪ್ ಗೆ ಲಭ್ಯವಾಗದೆ ಹೋದರೆ ಆಗ ವಿಕೆಟ್ ಕೀಪರ್ ಕೊಟಾದಲ್ಲಿ ಇಶಾನ್ ಕಿಶನ್ ಆಡಬಹುದು. ಆದರೆ ಆರಂಭಿಕ ಸ್ಥಾನದಲ್ಲಿ ನಾಯಕ ರೋಹಿತ್ ಜೊತೆಗೆ ಗಿಲ್ ಇರುವ ಕಾರಣ ಇಶಾನ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ಆಗ ಕಿಶನ್ ರೂಪದಲ್ಲಿ ಎಡಗೈ ಬ್ಯಾಟರ್ ಸಿಗುತ್ತದೆ.

ಆದರೆ ವಿಶ್ವಕಪ್ ತಂಡದಲ್ಲಿ ರಾಹುಲ್ ಆಡುವುದು ಬಹುತೇಕ ಖಚಿತವಾದ ಕಾರಣ ಇಶಾನ್ ಕಿಶನ್ ಅವರು ಹೆಚ್ಚುವರಿ ವಿಕೆಟ್ ಕೀಪರ್ ಮತ್ತು ಹೆಚ್ಚುವರಿ ಆರಂಭಿಕನಾಗಿ 15ರ ಬಳಗದಲ್ಲಿ ಸ್ಥಾನ ಪಡೆಯುತ್ತಾರೆ. ಸತತ ಪ್ರದರ್ಶನ ನೀಡದೆ ಸ್ಥಾನ ಗಟ್ಟಿಗೊಳಿಸದ ಸಂಜು ಸ್ಯಾಮ್ಸನ್ ಗೆ ಸ್ಥಾನ ಸಿಗುವುದು ಕಷ್ಟ. ಆದರೆ ಏಕದಿನ ತಂಡಲ್ಲಿ ಇದುವರೆಗೂ ಹೇಳಿಕೊಳ್ಳುವ ಪ್ರದರ್ಶನ ನೀಡದ ಸೂರ್ಯಕುಮಾರ್ ಯಾದವ್ ಅವರು ಹೆಚ್ಚುವರಿ ಆಟಗಾರನಾಗಿ 15ರ ಬಳಗದಲ್ಲಿ ಕಾಣಿಸಬಹುದು.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next