Advertisement

ಟೀಮ್‌ ಇಂಡಿಯಾ ಬಸ್‌ ಚಾಲಕನ ಮಧುರ ನೆನಪುಗಳು…

12:53 PM Jul 23, 2018 | Team Udayavani |

ಲಂಡನ್‌: ಭಾರತೀಯ ಕ್ರಿಕೆಟ್‌ ತಂಡವೀಗ ಇಂಗ್ಲೆಂಡ್‌ ಪ್ರವಾಸದಲ್ಲಿದೆ. 86 ವರ್ಷಗಳ ಹಿಂದೆ ತನ್ನ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಭಾರತ ಆಂಗ್ಲರ ನೆಲದಲ್ಲೇ ಚಾಲನೆ ನೀಡಿತ್ತು. ಈ ಸುದೀರ್ಘ‌ ಕಾಲಘಟ್ಟದಲ್ಲಿ ಭಾರತೀಯ ಆಟಗಾರರು ಕ್ರಿಕೆಟ್‌ ಜನಕರ ನಾಡಿನಲ್ಲಿ ಅನೇಕ ಮಧುರ ನೆನಪುಗಳನ್ನು ಬಿತ್ತಿದ್ದಾರೆ. ಇದನ್ನು ತಂಡದ ಬಸ್‌ ಚಾಲಕನೋರ್ವ ಮೆಲುಕು ಹಾಕಿದ್ದು ನಿಜಕ್ಕೂ ವಿಶೇಷ.

Advertisement

ಈ ಚಾಲಕನ ಹೆಸರು ಜೆಫ್ ಗುಡ್ವಿನ್‌. ಕಳೆದೆರಡು ದಶಕಗಳಿಂದಲೂ ಅವರು ಟೀಮ್‌ ಇಂಡಿಯಾದ ಬಸ್‌ ಚಾಲಕನಾಗಿ ಕರ್ತವ್ಯ ನಿಭಾಯಿಸುತ್ತ ಬಂದಿದ್ದಾರೆ. ಅಂದಿನ ತೆಂಡುಲ್ಕರ್‌, ದ್ರಾವಿಡ್‌, ಗಂಗೂಲಿ ಅವರಿಂದ ಮೊದಲ್ಗೊಂಡು ಇಂದಿನ ಧೋನಿ, ಕೊಹ್ಲಿ, ಧವನ್‌ ಮೊದಲಾದವರೊಡನೆ ಮಧುರ ಬಾಂಧವ್ಯ ಹೊಂದಿರುವುದು ಗುಡ್ವಿನ್‌ ಅವರ ಹೆಚ್ಚುಗಾರಿಕೆ. ಭಾರತೀಯರಿಗೂ ತಿಳಿದಿರದ ಭಾರತ ಕ್ರಿಕೆಟ್‌ ತಂಡದ ಸ್ವಾರಸ್ಯಗಳೆಲ್ಲ ಇವರ ನೆನಪಿನ ಬುತ್ತಿಯಲ್ಲಿ ಶಾಶ್ವತ! 1999ರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆಂದು ಭಾರತ ಇಂಗ್ಲೆಂಡಿಗೆ ಬಂದಾಗ ಗುಡ್ವಿನ್‌ ಮೊದಲ ಸಲ ಭಾರತದ ಬಸ್‌ ಚಾಲಕನಾಗಿ ಸೇವೆ ಸಲ್ಲಿಸಲಾ ರಂಭಿಸಿದ್ದರು. ಅವರ ಈ ಕಾಯಕ ಈಗಲೂ ಮುಂದುವರಿದಿದೆ.

ಭಾರತ ಅತ್ಯಂತ ಶಿಸ್ತಿನ ತಂಡ
“ಇಂಗ್ಲೆಂಡಿಗೆ ಪ್ರವಾಸ ಮಾಡುವ ತಂಡಗಳಲ್ಲೇ ಭಾರತ ಅತ್ಯಂತ ಶಿಸ್ತಿನ ತಂಡವಾಗಿದೆ. ಇವರೆಲ್ಲರೂ ವೃತ್ತಿಪರರಾಗಿದ್ದು, ಬಸ್‌ ಪ್ರಯಾಣದಲ್ಲೂ ಅವರು ಶಿಸ್ತನ್ನು ಕಾಯ್ದುಕೊಳ್ಳುತ್ತಾರೆ. ಪಂದ್ಯ ಮುಗಿದ ಕ್ಷಣದಲ್ಲೇ ಬಸ್‌ ಬಳಿ ಬಂದು ಪ್ರಯಾಣಕ್ಕೆ ಮುಂದಾಗುತ್ತಾರೆ. ಎಂದೂ ಕಾಯಿಸಿದವರಲ್ಲ. ಹೀಗಾಗಿ ಭಾರತೀಯ ಕ್ರಿಕೆಟಿಗರು ಬಸ್ಸಿನಲ್ಲಿರುವಾಗ ನಾನು ಹೆಚ್ಚು ಖುಷಿಯಲ್ಲಿರುತ್ತೇನೆ. ಇವರೆಲ್ಲ ಸ್ನೇಹಪರರು…’ ಎನ್ನುತ್ತಾರೆ ಗುಡ್ವಿನ್‌.

“ಈ ಎರಡು ದಶಕಗಳಲ್ಲಿ ಕ್ರಿಕೆಟ್‌ ಬಹಳ ಬದಲಾಗಿದೆ. ಅಂದು ಆಸ್ಟ್ರೇಲಿಯದ ಆಟಗಾರರು ವಿಪರೀತ ಕಾಯಿಸುತ್ತಿದ್ದರು. ಪಂದ್ಯ ಮುಗಿದ ಬಳಿಕ ನಡೆಸುವ ಡ್ರಿಂಕ್ಸ್‌ ಪಾರ್ಟಿಗಳೇ ಇದಕ್ಕೆ ಕಾರಣ. ರಾತ್ರಿ ಪಂದ್ಯದ ಬಳಿಕ ಅವರು 2 ಗಂಟೆ ತನಕ ಕಾಯಿಸಿದ್ದೂ ಇದೆ. ಈಗ ಹಾಗಿಲ್ಲ. ಈ ವಿಷಯದಲ್ಲಿ ಭಾರತದ ಕ್ರಿಕೆಟಿಗರು ಕಟ್ಟುನಿಟ್ಟು. ಈಗಿನ ತಂಡವಂತೂ ಅತ್ಯುತ್ತಮ…’ ಎಂಬುದು ಗುಡ್ವಿನ್‌ ಅಭಿಪ್ರಾಯ.

ನೆರವಿಗೆ ಬಂದಿದ್ದ ರೈನಾ
ಈ ಸಂದರ್ಭದಲ್ಲಿ ಭಾರತದ ಕ್ರಿಕೆಟಿಗ ಸುರೇಶ್‌ ರೈನಾ ತಮ್ಮ ನೆರವಿಗೆ ಬಂದುದನ್ನು ಜೆಫ್ ಗುಡ್ವಿನ್‌ ನೆನಪಿಸಿಕೊಳ್ಳುತ್ತಾರೆ. “ಕೆಲವು ವರ್ಷಗಳ ಹಿಂದೆ ಲೀಡ್ಸ್‌ನಲ್ಲಿದ್ದಾಗ ನನ್ನ ಪತ್ನಿಗೆ ಅನಾರೋಗ್ಯ ಎದುರಾಯಿತು. ಆಗ ನೆರವಿಗೆ ಬಂದ ರೈನಾ ತನ್ನ ಜೆರ್ಸಿಯೊಂದನ್ನು ನೀಡಿ ಅದನ್ನು ಹರಾಜು ಹಾಕಿ ಹಣ ಪಡೆಯುವಂತೆ ಸೂಚಿಸಿದ್ದರು. ಇದನ್ನುನಾನೆಂದೂ ಮರೆಯುವುದಿಲ್ಲ…’

Advertisement
Advertisement

Udayavani is now on Telegram. Click here to join our channel and stay updated with the latest news.

Next