ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಮೆಗಾ ಹರಾಜು ನಡೆದಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಎರಡು ದಿನಗಳ ಕಾಲ ನಡೆದ ಹರಾಜಿನಲ್ಲಿ ಎಲ್ಲಾ ಹತ್ತು ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಿವೆ. ಬ್ಯಾಟರ್ ಗಳು, ಬೌಲರ್ ಗಳು, ವಿಕೆಟ್ ಕೀಪರ್ ಗಳು ಮತ್ತು ಆಲ್ ರೌಂಡರ್ ಗಳನ್ನು ಸೇರಿಸಿ ಎಲ್ಲಾ ಫ್ರಾಂಚೈಸಿಗಳು ಬಲಿಷ್ಠಪಡಿಸಿವೆ.
ಹರಾಜಿನ ಕೊನೆಯಲ್ಲಿ ಒಮ್ಮೆ ಮಾರಾಟವಾಗದ ಆಟಗಾರರ ಹೆಸರನ್ನು ಮತ್ತೆ ಹರಾಜಿಗೆ ತರಲಾಯಿತು. ಈ ವೇಳೆ 30 ಲಕ್ಷ ಮೂಲ ಬೆಲೆ ಹೊಂದಿದ್ದ ಸ್ವಸ್ತಿಕ್ ಚಿಕಾರ (Swastik Chikara) ಹೆಸರು ಬಂದಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಬಿಡ್ ಮಾಡಿದರು. ಬೇರೆ ಯಾವದೇ ಬಿಡ್ ಬರದಿದ್ದಾಗ ಹರಾಜು ನಡೆಸುತ್ತಿದ್ದ ಮಲ್ಲಿಕಾ ಸಾಗರ್ ಸ್ವಸ್ತಿಕ್ ಚಿಕಾರ ಆರ್ ಸಿಬಿ ಪಾಲಾದರು ಎಂದು ಘೋಷಣೆ ಮಾಡಿದರು. ಆದರೆ ಈ ವೇಳೆ ಡೆಲ್ಲಿ ತಂಡದ ಹೇಮಾಂಗ್ ಬದಾನಿ ತಾವೂ ಬಿಡ್ ನಡೆಸಿದ್ದಾಗಿ ಹೇಳಿಕೊಂಡರು. ಸ್ವಲ್ಪ ಗೊಂದಲದ ಬಳಿಕ ಕೊನೆಗೂ ಚಿಕಾರ ಆರ್ ಸಿಬಿ ತಂಡ ಸೇರಿದರು.
ಯಾರು ಈ ಸ್ವಸ್ತಿಕ್ ಚಿಕಾರ
19 ವರ್ಷದ ಸ್ವಸ್ತಿಕ್ ಉತ್ತರ ಪ್ರದೇಶದವರು. ಯುಪಿ ಟಿ20 ಲೀಗ್ ನಲ್ಲಿ ತನ್ನ ಆಟದಿಂದ ಹೆಸರು ಪಡೆದವರು. 2024ರ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ ನಲ್ಲಿದ್ದ ಚಿಕಾರಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಬಳಿಕ ನಡೆದ ಯುಪಿ ಟಿ20 ಲೀಗ್ ನಲ್ಲಿ ಚಿಕಾರ ಅಬ್ಬರಿಸಿದ್ದರು.
ಮೀರತ್ ಮ್ಯಾವ್ರಿಕ್ಸ್ ತಂಡವನ್ನು ಪ್ರತಿನಿಧಿಸಿದ್ದ ಸ್ವಸ್ತಿಕ್ ಚಿಕಾರ ಕೂಟದಲ್ಲಿ 499 ರನ್ ಬಾರಿಸಿದ ಆರೆಂಜ್ ಕ್ಯಾಪ್ ಜಯಿಸಿದ್ದರು. ಅಲ್ಲದೆ ಬರೋಬ್ಬರಿ 47 ಸಿಕ್ಸರ್ ಬಾರಿಸಿ ಸೂಪರ್ ಸ್ಟ್ರೈಕರ್ ಪ್ರಶಸ್ತಿಯನ್ನೂ ಜಯಿಸಿದ್ದರು. ಮೀರತ್ ತಂಡದ ನಾಯಕನಾಗಿಯೂ ಇದ್ದ ಸ್ವಸ್ತಿಕ್ ಚಿಕಾರ ತಂಡವನ್ನು ಜಯದತ್ತ ಮುನ್ನಡೆಸಿದ್ದರು.
ಸ್ಫೋಟಕ ಆರಂಭಿಕ ಆಟಗಾರ ಚಿಕಾರ ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಗೆ ವೀರೇಂದ್ರ ಸೆಹ್ವಾಗ್ ಸ್ಪೂರ್ತಿ ಎನ್ನುತ್ತಾರೆ. “ನಾನು ಯಾವಾಗಲೂ ಸೆಹ್ವಾಗ್ ಅವರ ನಿರ್ಭೀತ ವಿಧಾನವನ್ನು ಮೆಚ್ಚುತ್ತೇನೆ. ಬಾಲ್ ಒಂದರಿಂದ ದಾಳಿ ಮಾಡುವುದು ನನ್ನ ಉದ್ದೇಶ. ಸೆಹ್ವಾಗ್ ನನ್ನ ರೋಲ್ ಮಾಡೆಲ್” ಎಂದು ಚಿಕಾರ ಹಂಚಿಕೊಂಡಿದ್ದಾರೆ.