ಮುಂಬೈ: ಬಾರ್ಡರ್ ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರು ಪಂದ್ಯಗಳು ಮುಗಿದು ನಾಲ್ಕನೇ ಪಂದ್ಯಕ್ಕೆ ಉಭಯ ತಂಡಗಳು ಸಿದ್ದತೆ ನಡೆಸುತ್ತಿದೆ. ಮೂರನೇ ಪಂದ್ಯ ಮುಗಿಯುತ್ತಿದ್ದಂತೆ ತಂಡದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರು ನಿವೃತ್ತಿ ಘೋಷಣೆ ಮಾಡಿದ್ದು, ತಂಡ ತೊರೆದಿದ್ದಾರೆ. ಇದೀಗ ಟೀಂ ಇಂಡಿಯಾದಲ್ಲಿ ಆಫ್ ಸ್ಪಿನ್ನರ್ ಕೊರತೆ ಎದುರಾಗಿದೆ.
ಹೀಗಾಗಿ ಬಿಸಿಸಿಐ ಇದೀಗ ಅಶ್ವಿನ್ ಬದಲಿಯಾಗಿ ಹೊಸ ಬೌಲರ್ ಒಬ್ಬರನ್ನು ತಂಡಕ್ಕೆ ಕರೆಸಿಕೊಂಡಿದೆ ಎಂದು ವರದಿಯಾಗಿದೆ. ಮುಂಬೈ ತಂಡದ ಆಲ್ ರೌಂಡರ್, ಕರ್ನಾಟಕ ಕರಾವಳಿಯ ಕಾಪು ಮೂಲದ ತನುಷ್ ಕೋಟ್ಯಾನ್ (Tanush Kotian) ಅವರನ್ನು ಮೆಲ್ಬೋರ್ನ್ ಗೆ ಕರೆಸಲು ಟೀಂ ಮ್ಯಾನೇಜ್ ಮೆಂಟ್ ಯೋಚಿಸುತ್ತಿದೆ ಎಂದು ವರದಿ ಹೇಳಿದೆ.
ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ತಂಡದ ಭಾಗವಾಗಿರುವ 26 ವರ್ಷದ ಕೋಟ್ಯಾನ್, ಮೂರನೇ ಟೆಸ್ಟ್‌ಗೆ ಮುಂಚಿತವಾಗಿ ಮೆಲ್ಬೋರ್ನ್‌ನಲ್ಲಿ ತಂಡವನ್ನು ಸೇರುವ ನಿರೀಕ್ಷೆಯಿದೆ. ಪ್ರಸ್ತುತ ಅಹಮದಾಬಾದ್‌ನಲ್ಲಿರುವ ಕೋಟ್ಯಾನ್ ಅವರು ಮುಂಬೈಗೆ ಮರಳಲಿದ್ದು, ಅಲ್ಲಿಂದ ಮಂಗಳವಾರ ಮೆಲ್ಬೋರ್ನ್‌ಗೆ ವಿಮಾನದಲ್ಲಿ ತೆರಳಲಿದ್ದಾರೆ. ಅವರು ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ಎ ತಂಡದ ಭಾಗವಾಗಿರುವುದರಿಂದ ಅವರಿಗೆ ಯಾವುದೇ ವೀಸಾ ಸಮಸ್ಯೆಯಾಗುವ ಸಾಧ್ಯತೆಯಿಲ್ಲ.
ಕೋಟ್ಯಾನ್ 33 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ, 41.21 ರ ಸರಾಸರಿಯಲ್ಲಿ 1525 ರನ್ ಗಳಿಸಿದ್ದಾರೆ, ಅಲ್ಲದೆ 25.70 ರ ಸರಾಸರಿಯಲ್ಲಿ 101 ವಿಕೆಟ್ ಗಳನ್ನು ಪಡೆದಿದ್ದಾರೆ. ಅವರು 2023-24ರಲ್ಲಿ ಮುಂಬೈನ ರಣಜಿ ಟ್ರೋಫಿ ವಿಜೇತ ಅಭಿಯಾನದಲ್ಲಿ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು. ಅಲ್ಲಿ ಅವರು 41.83 ಸರಾಸರಿಯಲ್ಲಿ 502 ರನ್ ಗಳಿಸಿದರು ಮತ್ತು 16.96 ರಲ್ಲಿ 29 ವಿಕೆಟ್ಗಳನ್ನು ಕಿತ್ತಿದ್ದರು.
ಸೋಮವಾರ (ಡಿ.23) ನಡೆದ ಹೈದರಾಬಾದ್ ವಿರುದ್ದದ ವಿಜಯ್ ಹಜಾರೆ ಪಂದ್ಯದಲ್ಲಿ ತನುಷ್ ಕೋಟ್ಯಾನ್ ಆಲ್ ರೌಂಡ್ ಪ್ರದರ್ಶನ ನೀಡಿದ್ದರು. 38 ರನ್ ಗೆ ಎರಡು ವಿಕೆಟ್ ಪಡೆದಿದ್ದ ತನುಷ್ ಬ್ಯಾಟಿಂಗ್ ನಲ್ಲಿ ಅಜೇಯ 39 ರನ್ ಮಾಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.