Advertisement

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ: ಚಕ್ರವರ್ತಿ ಸ್ವಾಮೀಜಿ

06:04 PM May 14, 2024 | Team Udayavani |

■ ಉದಯವಾಣಿ ಸಮಾಚಾರ
ಹಾವೇರಿ: ತಾಯಿಯಿಂದ ಉಸಿರು ಬರುತ್ತೆ, ತಂದೆಯಿಂದ ಹೆಸರು ಬರುತ್ತೆ, ಆದರೆ, ಗುರುವಿಂದ ಉಸಿರಿರುವವರೆಗೂ ಹೆಸರು
ಬರುವ ವಿದ್ಯೆ ಬರುತ್ತದೆ. ಜೀವಗಳಿಗೆ ಜೀವನ ನೀಡುವ ಏಕೈಕ ವೃತ್ತಿ ಅದು ಶಿಕ್ಷಕ ವೃತ್ತಿ, ಅದರಷ್ಟು ಪವಿತ್ರವಾದ ವೃತ್ತಿ ಇನ್ನೊಂದಿಲ್ಲ ಎಂದು ಶ್ರೀಕ್ಷೇತ್ರ ಆನಂದವನದ ಗುರುದತ್ತ ಮೂರ್ತಿ ಚಕ್ರವರ್ತಿ ಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ಅಗಡಿ ಗ್ರಾಮದ ಶ್ರೀಶೇಷಾಚಲ ಸದ್ಗುರು ಪ್ರೌಢಶಾಲೆ ಆವರಣದ ಗಳಗನಾಥ ವೇದಿಕೆಯಲ್ಲಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ 1993ರಿಂದ 2003ನೇ ಸಾಲಿನಲ್ಲಿ  ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನೆ ಹಾಗೂ ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿ ಹುಟ್ಟಿದ ಮೇಲೆ ಹೆತ್ತವರ, ಶಿಕ್ಷಕರ ಹಾಗೂ ಸಮಾಜದ ಋಣ ತೀರಿಸಬೇಕು. ಅಕ್ಟೋಬರ್‌ ಅವಧಿಯಲ್ಲಿ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಜೂನ್‌ ಎರಡನೇ ವಾರ ಈ ಶಾಲೆಯಲ್ಲಿ ಕಲಿತ ಎಲ್ಲ ವಿದ್ಯಾರ್ಥಿಗಳ ಸಭೆ ಕರೆಯಲಾಗುವುದು ಎಂದರು.

ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಮನುಷ್ಯರಾಗಿ ಹುಟ್ಟುವುದೇ ಭಾಗ್ಯ, ಶಿಕ್ಷಕರಾದರೆ ಅದು ಸೌಭಾಗ್ಯ. ಅರ್ಜಿ ಸಲ್ಲಿಸಿ ಪಡೆಯುವ ಯಾವುದೇ ಪ್ರಶಸ್ತಿಗಿಂತ ವಿದ್ಯಾರ್ಥಿಗಳು ನೀಡಿದ ಗುರುವಂದನೆ ಎಲ್ಲದಕ್ಕೂ ಮಿಗಿಲು. ವಿದ್ಯಾರ್ಥಿಗಳ ಯಶಸ್ಸು ಶಿಕ್ಷಕ ವೃತ್ತಿಯ ಸಾರ್ಥಕತೆ ಪಡೆಯಲು ಕಾರಣ. ಶಿಕ್ಷಕರು ತಮ್ಮಲ್ಲಿರುವ ಪ್ರತಿಭೆಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುವ ಸಂಸ್ಕೃತಿಯ ಪರಿವರ್ತನೆಯ ನೇತಾರರಾಗಬೇಕು ಎಂದರು.

ಮುಖ್ಯೋಪಾಧ್ಯಾಯ ರಾಘವೇಂದ್ರ ನಾಡಿಗೇರ, ವಿ.ವಿ. ಕಮತರ, ಎಸ್‌.ಎಸ್‌. ಲೂತಿಮಠ ಹಾಗೂ ಸುಮಂಗಲ ಗಾಣಿಗೇರ
ಮಾತನಾಡಿದರು. ಹಿರಿಯ ವಿದ್ಯಾರ್ಥಿಗಳ ಪರವಾಗಿ ಕೆ.ಎಸ್‌. ಮಂಜುನಾಥ ಮಾತನಾಡಿ, ನಾನಿಂದು ದಾವಣಗೆರೆಯಲ್ಲಿ ಶಿಕ್ಷಕ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಈ ನನ್ನ ಶಾಲೆ ಪ್ರೇರಣೆಯಾಯಿತು.

Advertisement

40 ಜನ ಶಿಕ್ಷಕರು, 300ಕ್ಕೂ ಅಧಿಕ ವಿದ್ಯಾರ್ಥಿಗಳು ನನ್ನ ಶಾಲೆಯಲ್ಲಿದ್ದಾರೆ ಎಂದು ತಿಳಿಸಿ, ಸುವರ್ಣಮೋತ್ಸವ ಕಾರ್ಯಕ್ರಮಕ್ಕೆ ಒಂದು ಲಕ್ಷ ರೂ. ನೀಡುವುದಾಗಿ ಘೋಷಿಸಿದರು. ರಾಘವೇಂದ್ರ ಈಳಿಗೇರ, ಚಂದ್ರು ಈಳಿಗೇರ, ಶಿವಪ್ಪ ಡಂಬರಮತ್ತೂರ, ವಿರೂಪಾಕ್ಷಿ ಹೆಡಿಗೊಂಡ, ಭರಮಪ್ಪ ಅಗದಿಬಾಗಿಲ, ಮೆಹರುನ್ನೀಸಾ ಬಾಗಲಕೋಟಿ, ಮಧುಮತಿ ಅಗಸನಮಟ್ಟಿ, ಅನ್ನಪೂರ್ಣ ಸಣ್ಣಪ್ಪನವರ, ಶೈಲಜಾ ಕೋರಿಶೆಟ್ಟರ್‌ ತಮ್ಮ ಅನಿಸಿಕೆ ಹಂಚಿಕೊಂಡರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಶಾಲೆಗೆ ಕೀರ್ತಿ ತಂದ ವಿಕಾಸ ಭಕ್ಷಿ, ಲಕ್ಷ್ಮೀ ಡಂಬರಮತ್ತೂರ, ಜಗದೀಶ ಬಡಿಗೇರ, ಕೃತಿಕಾ ಕೋತಂಬರಿ, ಪ್ರತಿಮಾ ಶಿವಣ್ಣನವರ ವಿದ್ಯಾರ್ಥಿಗಳನ್ನು ಸ್ಫೂರ್ತಿ ಕುಟೀರದಿಂದ ಗೌರವಿಸಲಾಯಿತು. ಪೂರ್ಣಿಮಾ ಆನ್ವೇರಿ, ಮಂಜುಳಾ ಮಾಳದಕರ, ಅನ್ನಪೂರ್ಣ ಪ್ರಾರ್ಥಿಸಿದರು. ದೀಪಾ ಜಂಗಲಿ ಸ್ವಾಗತಿಸಿದರು. ದಿಳ್ಳೆಪ್ಪ ಕುರುಬರ ಪ್ರಾಸ್ತಾವಿಕ ಮಾತನಾಡಿದರು. ತ್ರಿವೇಣಿ ಬಸೇಗೆಣ್ಣಿ, ರಾಮಾ ಚಕ್ರವರ್ತಿ ನಿರೂಪಿಸಿದರು. ಪ್ರಾರಂಭದಲ್ಲಿ ಸ್ವಾಮೀಜಿ
ಅವರೊಂದಿಗೆ ಎಲ್ಲ ಗುರುಗಳನ್ನು ಸಕಲ ವಾದ್ಯಗಳೊಂದಿಗೆ ವೇದಿಕೆಗೆ ಕರೆತಂದದ್ದು  ಗಮನಸೆಳೆಯಿತು.

ವಿಶ್ವತಾಯಂದಿರ ದಿನದಂದು ಗುರುವಂದನೆ ಕಾರ್ಯಕ್ರಮ ಏರ್ಪಡಿಸಿದ್ದು ಅರ್ಥಪೂರ್ಣವಾಗಿದೆ. ಮೊದಲ ಗುರು ತಾಯಿ ಆದರೆ ಎರಡನೇ ಗುರು ಶಿಕ್ಷಕರು, ಪ್ರಪಂಚದ ಭವಿಷ್ಯ ತಾಯಂದಿರು ಹಾಗೂ ಶಿಕ್ಷಕರನ್ನು ಅವಲಂಬಿಸಿದೆ. ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವ ಹೊಣೆಗಾರಿಕೆ ಅವರ ಮೇಲಿದೆ.
*ನಿಜಲಿಂಗಪ್ಪ ಬಸೇಗಣ್ಣಿ, ಶಿಕ್ಷಣ ಚಿಂತಕರು

Advertisement

Udayavani is now on Telegram. Click here to join our channel and stay updated with the latest news.

Next