Advertisement
ಉದ್ಯೋಗಕ್ಕಾಗಿ ವಲಸೆ: ದೊಡ್ಡಬಳ್ಳಾಪುರ ನೇಕಾರಿಕೆಗೇ ಪ್ರಧಾನ ಕಸುಬಾಗಿರುವ ನಗರ. ಇಲ್ಲಿ ಹಲವಾರು ಭಾಷಿಕರಿದ್ದಾರೆ. ಭಾಷಿಕರ ವಿಚಾರದಲ್ಲಿ ಇದನ್ನು ಚಿಕ್ಕ ಬೆಂಗಳೂರು ಎಂದರೂ ತಪ್ಪಲ್ಲ, ನೇಕಾರಿಕೆಗಾಗಿ ನೆರೆಯ 60ರ ದಶಕದಲ್ಲಿ ಆಂಧ್ರ, ತಮಿಳುನಾಡಿನಿಂದನೇಯ್ಗೆ ಉದ್ಯಮಕ್ಕಾಗಿ ಬಂದ ಹಲವಾರು ಮಂದಿಇಲ್ಲಿಯೇ ನೆಲೆಯೂರಿದರು. ಅದರಲ್ಲೂ ಹೆಚ್ಚಾಗಿತೆಲುಗು ಭಾಷಿಕರು ಆಂಧ್ರದಿಂದ ಬಂದು ನೆಲೆಸಿದ್ದಾರೆ. ಇನ್ನು ನೇಕಾರರ ಸೀರೆ ಖರೀದಿಸಲು ಗುಜರಾತ್,ರಾಜಾಸ್ಥಾನ ಮೊದಲಾದ ಕಡೆಗಳಿಂದ ಬಂದ ಮಾರ್ವಾಡಿಗಳು ಬಟ್ಟೆ ವ್ಯಾಪಾರಿಗಳಾಗಿ, ಚಿನ್ನಾಭರಣಗಳ ವ್ಯಾಪಾರಿಗಳಾಗಿ ನೆಲೆಸಿದ್ದಾರೆ.
Related Articles
Advertisement
ಕನ್ನಡ ಭಾಷೆ ಕಲಿತ ಬಿಹಾರಿ ಕಾರ್ಮಿಕರು: ಹತ್ತಾರು ವರ್ಷ ಇಲ್ಲಿ ನೆಲೆಸಿದ್ದರೂ ಕನ್ನಡ ಭಾಷೆ ಕಲಿಯದ ಸಾಕಷ್ಟು ಮಂದಿ ಇಲ್ಲಿದ್ದಾರೆ. ಇವರ ಮಧ್ಯೆ ಇವರೂ ಕನ್ನಡಿಗರೇ ಎನ್ನುವಷ್ಟರ ಮಟ್ಟಿಗೆ ಹಲವಾರು ಭಾಷಿಕರು ಬದುಕು ನಡೆಸುತ್ತಿದ್ದಾರೆ. ನಮಗೆ ಬದುಕು ಕಟ್ಟಿಕೊಟ್ಟ ಇಲ್ಲಿನ ಭಾಷೆ, ನೆಲವನ್ನು ನಾವು ಗೌರವಿಸಬೇಕು ಎಂದು ಕನ್ನಡ ಭಾಷೆ ಕಲಿತಿರುವ ಕಾರ್ಮಿಕರಾದ ಬಿಹಾರ ರಾಜ್ಯದ ಅನಿಲ್ ಗುಪ್ತ, ಮಣೀಶ್ ಶರ್ಮ ತಿಳಿಸುತ್ತಾರೆ.
ಕನ್ನಡ ಭಾಷೆಯ ಕಲಿಕೆಗೆ ಉತ್ತೇಜನ ಬೇಕು:
ದೇಶದ ಪ್ರಜೆ ಯಾವುದೇ ರಾಜ್ಯದಲ್ಲಿ ವಾಸಿಸಲು ಸಂವಿಧಾನದಲ್ಲಿ ಅವಕಾಶವಿದೆ. ಆದರೆ, ಅಲ್ಲಿನ ಸ್ಥಳೀಯ ಭಾಷೆ ಕಲಿಕೆ ಅವರ ಹೊಣೆ. ತಮಿಳುನಾಡಿನಲ್ಲಿ ತಮಿಳು ಕಲಿಯದಿದ್ದರೆ, ನಿತ್ಯ ವ್ಯವಹರಿಸಲು ಕಷ್ಟಸಾಧ್ಯ. ಆದರೆ ನಮ್ಮ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕನ್ನಡ ಕಲಿಯದೇ ಆರಾಮವಾಗಿ ಬದುಕಬಹುದು ಎನ್ನುವ ವಾತಾವರಣ ಕನ್ನಡ ಭಾಷೆ ಅಸ್ತಿತ್ವಕ್ಕೆ ಧಕ್ಕೆಯಾಗಿದೆ. ಹೀಗಾಗಿ ನಾವು ಪರಭಾಷೆಗೆ ಒತ್ತು ನೀಡದೇ ಪರಭಾಷಿಕರು ಕನ್ನಡ ಮಾತನಾಡುವ ವಾತಾವರಣ ಸೃಷ್ಟಿಸಬೇಕು. ಕನ್ನಡಪರ ಸಂಘಟನೆಗಳು ಹೆಚ್ಚಿನ ಆಸಕ್ತಿ ವಹಿಸಿ, ಸರ್ಕಾರದ ಗಮನ ಸೆಳೆಯಬೇಕಿದೆ ಎನ್ನುತ್ತಾರೆ ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ್.
ಹೋರಾಟಗಳಲ್ಲಿ ದೊಡ್ಡಬಳ್ಳಾಪುರ ಮುಂಚೂಣಿ: 1982ರ ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿ ರಾಜಧಾನಿಯಲ್ಲಿಯೂ ಹೋರಾಟ ನಡೆಸಿ, ಇಲ್ಲಿನ ಕನ್ನಡಪರ ಹೋರಾಟಗಾರರು ಜೈಲುವಾಸ ಅನುಭವಿಸಿದ್ದರು. ಅಂದಿನಿಂದ ಕನ್ನಡಪರ ಹೋರಾಟಗಳಿಗೆ ದೊಡ್ಡಬಳ್ಳಾಪುರ ಹೆಸರಾಗಿದೆ. ಆದರೆ, ಕನ್ನಡಮಯ ವಾತಾವರಣ ಸೃಷ್ಟಿಸಲು ಕನ್ನಡ ಕಲಿಕೆಗೆ ಉತ್ತೇಜನ ನೀಡುವಲ್ಲಿ ಹೋರಾಟಗಾರರು ಮುಂದಾಗಬೇಕೆನ್ನುವ ಒತ್ತಾಯ ಕೇಳಿ ಬರುತ್ತಿವೆ. 1990 ಕಾವೇರಿ ಮಧ್ಯಂತರ ತೀರ್ಪು ವಿವಾದದ ಸಂದರ್ಭದಲ್ಲಿ ತಮಿಳು ಭಾಷಿಕರ ಮೇಲೆ ಸಿಡಿದೆದ್ದ ಅಸಮಾಧಾನದಿಂದಾಗಿ ಅಂದಿನಿಂದ ಇಲ್ಲಿಯವರೆಗೆ ಇಲ್ಲಿ ತಮಿಳು ಚಿತ್ರ ಪ್ರದರ್ಶನವಾಗಿಲ್ಲ. ಇದೇ ಕನ್ನಡ ಭಾಷಾಭಿಮಾನ ರಾಜ್ಯೋತ್ಸವದ ನವೆಂಬರ್‌ನಲ್ಲಿ ನಗರದ ಎಲ್ಲಾ ಚಿತ್ರಮಂದಿರದಲ್ಲಿ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸಬೇಕೆಂಬ ಆಶಯಕ್ಕೆ ಒತ್ತಾಸೆಯಾಗಿ ನಗರದ ಚಿತ್ರಮಂದಿರಗಳು ಕನ್ನಡ ಭಾಷೆಯ ಚಿತ್ರಗಳನ್ನು ಅಂದಿನಿಂದ ಪ್ರದರ್ಶಿಸುತ್ತಿವೆ. ಅದು ಉರ್ದು ವಾರ್ತೆ, ಕಿರುತೆರೆಯಲ್ಲಿ ಡಬ್ಬಿಂಗ್‌ಗೆ ಸಂಬಂಧಿಸಿದ ವಿಚಾರವಾದರೂ ಸರಿ, ಸರೋಜಿನಿ ಮಹಿಷಿ ವರದಿ, ಮಹಾಜನ್ ವರದಿ ಕಾವೇರಿ, ಕೃಷ್ಣಾನದಿ ನೀರಿನ ವಿಚಾರವಾಗಲೀ, ಸ್ಥಳೀಯರಿಗೆ ಉದ್ಯೋಗ ಮೊದಲಾಗಿ ನಾಡು ನುಡಿಗೆ ಅನ್ಯಾಯವಾದಾಗ ಸಿಡಿದೆದ್ದು ಹೋರಾಟ ನಡೆಸಿ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದರು. ತಾಲೂಕಿನ ಕಾಡನೂರಿನಲ್ಲಿರುವ ಆಕಾಶವಾಣಿ ಸೂಪರ್ ಪವರ್ ಟ್ರಾನ್ಸ್‌ಮೀಟರ್‌ನಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಹೋರಾಟ ನಡೆಸಿ ಯಶಸ್ಸು ಕಂಡಿತ್ತು. ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿಸಬೇಕೆಂದು ಆಗ್ರಹಿಸಿ ಪರಭಾಷೆ ನಾಮಫಲಕಗಳಿಗೆ ಮಸಿ ಬಳೆಯುವ ಕಾರ್ಯ ಇಂದಿಗೂ ನಡೆಯುತ್ತಿದೆ.
– ಡಿ.ಶ್ರೀಕಾಂತ