Advertisement

School: ಶಾಲಾ ಮಕ್ಕಳಿಂದಲೇ ಶೌಚಾಲಯ ಸ್ವತ್ಛ ಮಾಡಿಸಿದ ಶಿಕ್ಷಕರು!

12:19 AM Dec 23, 2023 | Team Udayavani |

ಬೆಂಗಳೂರು: ಕೋಲಾರ ಜಿಲ್ಲೆ ಮಾಲೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಪ್ರಕರಣದ ಬೆನ್ನಲ್ಲೇ ರಾಜಧಾನಿಯಲ್ಲೇ ಶಾಲಾ ಮಕ್ಕಳಿಂದ ಶೌಚಾಲಯ ಸ್ವತ್ಛಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Advertisement

ನಗರದ ಯಶವಂತಪುರ ವಿಧಾನ ಸಭಾ ಕ್ಷೇತ್ರದ ಅಂದ್ರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯವನ್ನು ಶಿಕ್ಷಕರು ಅಲ್ಲಿನ ಮಕ್ಕ ಳಿಂದಲೇ ಸ್ವತ್ಛಗೊಳಿಸಿರುವುದು ಬಹಿರಂಗಗೊಂಡಿದೆ. ಮಕ್ಕಳು ಕೆಮಿಕಲ್‌ ಬಾಟಲ್‌ ಮತ್ತು ಬ್ಲೀಚಿಂಗ್‌ ಪೌಡರ್‌ ಹಿಡಿದು ಶೌಚಾಲಯ ಸ್ವತ್ಛಗೊಳಿಸುತ್ತಿರುವ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಘಟನೆ ಬೆನ್ನಲ್ಲೇ ಶಾಲೆ ಮುಂದೆ ಜಮಾಯಿಸಿದ ಪೋಷಕರು ಹಾಗೂ ಸ್ಥಳೀಯರು ಶಿಕ್ಷಕರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಅನೇಕ ದಿನಗಳಿಂದ ಮಕ್ಕಳಿಂದಲೇ ಶೌಚಾಲಯ ಸ್ವತ್ಛಗೊಳಿಸುತ್ತಿದ್ದಾರೆ. ಈಗ ತಮ್ಮ ಅರಿವಿಗೆ ಬಂದಿದೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

ಮುಖ್ಯ ಶಿಕ್ಷಕಿ ಅಮಾನತು
ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಸರಕಾರ, ಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮೀದೇವಮ್ಮ ಅವರನ್ನು ಅಮಾನತುಗೊಳಿಸಿದೆ.

ರಾಜಕೀಯ ನಾಯಕರ ಆಕ್ರೋಶ
ಘಟನೆಯನ್ನು ರಾಜಕೀಯ ನಾಯಕರು ಪಕ್ಷಾತೀತವಾಗಿ ಖಂಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ವಿಪಕ್ಷ ನಾಯಕ ಆರ್‌. ಅಶೋಕ್‌ ಅವರು ಶುಕ್ರವಾರ ಮಧ್ಯಾಹ್ನವೇ ಶಾಲೆಗೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ಪೋಷಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ.

ದೀರ್ಘ‌ ಕಾಲದಿಂದ ಮಕ್ಕಳಿಂದಲೇ ಸ್ವತ್ಛತೆ: ಅಶೋಕ್‌ ಆರೋಪ ಉದ್ದೇಶಿತ ಶಾಲೆಗೆ ನೀಡುವ ಅನುದಾನದಲ್ಲಿ ಪ್ರತ್ಯೇಕ ಹಣ ನೀಡಿದ್ದರೂ ಮುಖ್ಯ ಶಿಕ್ಷಕರು ಸೂಕ್ತ ನಿರ್ವಹಣೆ ಮಾಡುತ್ತಿಲ್ಲ. ಚಾಕೊಲೇಟ್‌ ಅಥವಾ ಚಿಕ್ಕಿ ನೀಡಿ ಸ್ವತ್ಛ ಮಾಡಿಸುತ್ತಾರೆ. ಶಾಲೆಯಲ್ಲಿ ನೀರಿನ ಸಮಸ್ಯೆಯೂ ಇದೆ. ಹೊರಗಿನಿಂದ ನೀರು ತರಿಸಲಾಗುತ್ತದೆ. ಹಿಂದಿನಿಂದಲೂ ಮಕ್ಕಳಿಂದಲೇ ಸ್ವತ್ಛ ಮಾಡಿಸಲಾಗುತ್ತಿದ್ದು, ಪ್ರತ್ಯೇಕ ಸಿಬಂದಿ ಇಲ್ಲ ಎಂಬ ಅಂಶವನ್ನು ಮಕ್ಕಳೇ ತಿಳಿಸಿದರು ಎಂದು ಅಶೋಕ್‌ ಆರೋಪಿಸಿದರು.

Advertisement

ಗೃಹ ಸಚಿವರಿಂದ ಖಂಡನೆ
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಗೃಹ ಸಚಿವ ಡಾ| ಜಿ. ಪರಮೇಶ್ವರ್‌, ಪ್ರಕರಣವನ್ನು ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದು ಹೇಳಿದರು.

ಮಕ್ಕಳೇ ಶೌಚಾಲಯ ಸ್ವತ್ಛಗೊಳಿಸಿರುವ ವಿಚಾರ ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ವರದಿ ತರಿಸಿಕೊಳ್ಳುತ್ತಿದ್ದೇನೆ. ಕೋಲಾರದ ಶಾಲೆಯ ಘಟನೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಮಕ್ಕಳನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಳ್ಳಬೇಕು. ಶೌಚಾಲಯಗಳನ್ನು ಮಕ್ಕಳಿಂದ ಸ್ವತ್ಛಗೊಳಿಸಲು ಅವಕಾಶ ನೀಡಿಲ್ಲ, ಮುಂದೆಯೂ ನೀಡುವುದಿಲ್ಲ.  ಡಿ.ಕೆ.ಶಿವಕುಮಾರ್‌, ಡಿಸಿಎಂ

ಶಾಲಾ ಶೌಚಾಲಯವನ್ನು ಮಕ್ಕಳಿಂದ ಸ್ವತ್ಛಗೊಳಿಸಿದ ಪ್ರಕರಣ ಆಘಾತಕಾರಿ, ಖಂಡನೀಯ. ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿನ ಕ್ರಮ ಕೈಗೊಳ್ಳಲಾಗುವುದು. ಮುಖ್ಯ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ. ಇಂತಹ ಘಟನೆ ಮರುಕಳಿಸದು ಎಂದು ಖಚಿತಪಡಿಸುತ್ತೇವೆ. ಈ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು.  – ಮಧು ಬಂಗಾರಪ್ಪ, ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next