Advertisement

ವಿದ್ಯಾರ್ಥಿಗಳಿಗೆ ಶಿಕ್ಷಕರೇ ಬಡಿಸಿದ್ರು ಬಿಸಿಯೂಟ!

06:33 PM Feb 09, 2018 | Team Udayavani |

ಚಿತ್ರದುರ್ಗ: ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳ ಮತ್ತು ಪ್ರೌಢಶಾಲೆಗಳ ಬಿಸಿಯೂಟ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲಸಕ್ಕೆ ಗೈರಾದ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಶಿಕ್ಷಕರೇ ಬಿಸಿಯೂಟ ಸಿದ್ಧಪಡಿಸಿ ಮಕ್ಕಳಿಗೆ ಬಡಿಸಿದರು!

Advertisement

ಶಾಲಾ ಶಿಕ್ಷಕರೇ ಅಡುಗೆ ಮಾಡಲು ಸಿದ್ಧರಾಗಿದ್ದರಿಂದ ಜಿಲ್ಲೆಗೆ ಬಂದ್‌ ಬಿಸಿ ತಟ್ಟಿದಂತೆ ಕಾಣಲಿಲ್ಲ. ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕಿಯರು ಬಿಸಿಯೂಟ ಕೊಠಡಿಗೆ ಆಗಮಿಸಿ ಅಡುಗೆ ಮಾಡಿ ಬಡಿಸಿದರು. ಸುಮಾರು 530 ವಿದ್ಯಾರ್ಥಿನಿಯರಿರುವ ಈ ಶಾಲೆಯಲ್ಲಿ
ಬಿಸಿಯೂಟ ತಯಾರಿಸುವ ಐದು ಜನರು ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತೆರಳಿದ್ದಾರೆ. ಶಿಕ್ಷಕಿಯರ ನಿರ್ಧಾರದಿಂದ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಯಾವುದೇ ತೊಂದರೆ ಎದುರಾಗಲಿಲ್ಲ. ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆಯಲ್ಲಿ ಜವಾನರ ಸಹಾಯ ಪಡೆದು ಶಿಕ್ಷಕರು ಅಡುಗೆ ಮಾಡಿ 300 ಮಕ್ಕಳಿಗೆ ಬಿಸಿಯೂಟ ಬಡಿಸಿದರು ಎಂದು ದೈಹಿಕ ಶಿಕ್ಷಕ ಮಂಜುನಾಥ ಆಚಾರ್‌ ತಿಳಿಸಿದರು. ಜಿಲ್ಲೆಯ ಹಲವು
ಶಾಲೆಗಳಲ್ಲಿ ಎಲ್ಲ ಬಿಸಿಯೂಟ ತಯಾರಕರು ಪ್ರತಿಭಟನೆಗೆ ಹೋಗದೇ ಒಬ್ಬರು, ಇಬ್ಬರು ಉಳಿದಿದ್ದಾರೆ. ಅಂತಹ ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು ಯಾವುದೇ ಸಮಸ್ಯೆ ಉದ್ಭವವಾಗಿಲ್ಲ. ನಗರದ ಕೋಟೆ ಪ್ರೌಢಶಾಲೆಯಲ್ಲಿ ಬಿಸಿಯೂಟ ತಯಾರಕರು ಇಲ್ಲದ ಕಾರಣ ಮಕ್ಕಳನ್ನು ಮಧ್ಯಾಹ್ನದ ಊಟಕ್ಕೆ ಮನೆಗೆ ಕಳುಹಿಸಲಾಗಿತ್ತು ಎಂದು  ತಿಳಿದು ಬಂದಿದೆ.

ಜೋಗಿಮಟ್ಟಿ ರಸ್ತೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 5 ಜನ ಬಿಸಿಯೂಟ ತಯಾರಕರಿದ್ದು 3 ಮಂದಿ ಪ್ರತಿಭಟನೆಗೆ ತೆರಳಿದ್ದಾರೆ. ಉಳಿದ ಇಬ್ಬರು ಸಿಬ್ಬಂದಿ ಅಡಿಗೆ ತಯಾರಿಸಿ ಮಕ್ಕಳಿಗೆ ಊಟ ನೀಡಿದ್ದಾರೆ. ತಾಲೂಕಿನ ಇಂಗಳದಾಳ್‌, ಲಂಬಾಣಿಹಟ್ಟಿ,  ಕುರುಮರಡಿಕೆರೆ ಶಾಲೆಗಳಲ್ಲಿ ತಯಾರಕರು
ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ ಎಂದು ಇಂಗಳದಾಳ ಶಾಲೆಯ ದೈಹಿಕ ಶಿಕ್ಷಕಿ ಲತಾ ಮಾಹಿತಿ ನೀಡಿದ್ದಾರೆ. 

ವಿದ್ಯಾರ್ಥಿಗಳ ಬಿಸಿಯೂಟಕ್ಕೆ ತೊಂದರೆಯಾಗದಂತೆ ಕ್ರಮ 
ಮೊಳಕಾಲ್ಮೂರು: ತಾಲೂಕಿನ ಶಾಲಾ ಮಕ್ಕಳ ಶೈಕ್ಷಣಿಕ  ಪ್ರಗತಿಗಾಗಿ ನೀಡಿರುವ ಬಿಸಿಯೂಟ ಯೋಜನೆಗೆ ಯಾವುದೇ ಅಡೆತಡೆಗಳಾಗದಂತೆ ನೋಡಿಕೊಳ್ಳಲಾಗುವುದು ಎಂದು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಎಂ.ಆರ್‌. ಲಕ್ಷ್ಮಣಪ್ಪ ತಿಳಿಸಿದರು. ಪಟ್ಟಣದ ಸರ್ಕಾರಿ
ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಬಿಸಿಯೂಟ ನೀಡುವುದನ್ನು ಪರಿಶೀಲಿಸಿ ಅವರು ಮಾತನಾಡಿದರು. ಬಿಸಿಯೂಟ ಕಾರ್ಯಕರ್ತೆಯರು ಹೆಚ್ಚಿನ ವೇತನ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಮಟ್ಟದಲ್ಲಿ ನಡೆಸುತ್ತಿರುವ ಪ್ರತಿಭಟನೆ ತಾಲೂಕಿನ ಶಾಲೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಒಟ್ಟು 168 ಶಾಲೆಗಳಲ್ಲಿ  ದಾಖಲಾಗಿರುವ 20,655 ವಿದ್ಯಾರ್ಥಿಗಳಿಗೆ 430 ಬಿಸಿಯೂಟ ಕಾರ್ಯಕರ್ತೆಯರು ಬಿಸಿಯೂಟ ಸಿದ್ಧಪಡಿಸುತ್ತಿದ್ದರು. ಕೇವಲ 60 ಬಿಸಿಯೂಟ ಕಾರ್ಯಕರ್ತೆಯರು ಪ್ರತಿಭಟನೆಗೆ ತೆರಳಿದ್ದು, ಉಳಿದ 370 ಕಾರ್ಯಕರ್ತೆಯರು
ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಅಂತಹ ಸಮಸ್ಯೆ ಆಗಿಲ್ಲ ಎಂದರು. ಎಲ್ಲ ಬಿಸಿಯೂಟ ಕಾರ್ಯಕರ್ತೆಯರು ಪ್ರತಿಭಟನೆಗೆ ತೆರಳಿದ್ದರೂ ಎಸ್‌ಡಿಎಂಸಿ ಯವರ ಸಹಕಾರದೊಂದಿಗೆ ಬಿಸಿಯೂಟ ಕಲ್ಪಿಸುವ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೂ ತಾಲೂಕಿನಿಂದ 60 ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿರುವುದರಿಂದ ಬಿಸಿಯೂಟ ಕಾರ್ಯಕರ್ತೆಯರ ಸಂಖ್ಯೆಗನುಗುಣವಾಗಿ ಅವಶ್ಯವಿರುವ ಶಾಲೆಗಳಿಗೆ ನಿಯೋಜನೆ
ಮಾಡಲಾಗಿದೆ. ಬಿಸಿಯೂಟ ವ್ಯವಸ್ಥೆ ಮಾಡಿದ ಫೋಟೋವನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ನಮ್ಮ ಶಾಲೆಗೆ ಗ್ರಾಮೀಣ ಭಾಗದಿಂದ ಹೆಚ್ಚು ಮಕ್ಕಳು ಬರುತ್ತಾರೆ. ಅವರಿಗೆ ಬಿಸಿಯೂಟ ನೀಡದಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಶಿಕ್ಷಕರೇ ಬಿಸಿಯೂಟ ತಯಾರಿಸಿ ಮಕ್ಕಳಿಗೆ ನೀಡಿದ್ದಾರೆ. 
ಜಯಪ್ಪ, ಮುಖ್ಯ ಶಿಕ್ಷಕರು, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು.

Advertisement
Advertisement

Udayavani is now on Telegram. Click here to join our channel and stay updated with the latest news.

Next