Advertisement

ಡಯಟ್‌ ಸ್ಥಳಾಂತರಕ್ಕೆ ಶಿಕ್ಷಕರ ಒತ್ತಾಯ

09:05 PM Jul 12, 2019 | Team Udayavani |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಕಚೇರಿಗಳು ದೇವನಹಳ್ಳಿ ತಾಲೂಕಿನ ಚಪ್ಪರದ ಕಲ್ಲು ಸರ್ಕಲ್‌ ಬಳಿ ಇರುವ ಜಿಲ್ಲಾ ಸಂಕೀರ್ಣಕ್ಕೆ ಸ್ಥಳಾಂತರವಾಗಿವೆ. ಆದರೆ ಶಿಕ್ಷಕರ ತರಬೇತಿ ಕೇಂದ್ರ ಮಾತ್ರ ಈ ವರೆಗೆ ಸ್ಥಳಾಂತರವಾಗಿಲ್ಲ. ಹೀಗಾಗಿ ತರಬೇತಿಗೆ ನಿಯೋಜನೆಯಾಗುವ ವಿಷಯವಾರು ಶಿಕ್ಷಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

Advertisement

ಡಯಟ್‌ ಸ್ಥಳಾಂತರಕ್ಕೆ ಒತ್ತಾಯ: ಬೆಂಗಳೂರು ನಗರದ ಜಿಲ್ಲಾಡಳಿತ ಕಚೇರಿ ಹಾಗೂ ನಗರದ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳು, ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಹಂತಹಂತವಾಗಿ ಸ್ಥಳಾಂತರಗೊಂಡು, ಕಾರ್ಯನಿರ್ವಹಿಸುತ್ತಿವೆ. ಆದರೆ ಶಿಕ್ಷಕರ ತರಬೇತಿ ಕೇಂದ್ರ ಡಯಟ್‌ ಸ್ಥಳಾಂತರವಾಗದೇ ಬೆಂಗಳೂರಿನ ರಾಜಾಜೀ ನಗರದಲ್ಲೇ ಇದೆ. ಹೀಗಾಗಿ 4 ತಾಲೂಕುಗಳ ಪ್ರಾಥಮಿಕ ಹಾಗೂ ಪ್ರೌಡಶಾಲೆ ವಿಷಯವಾರು ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಡಯಟ್‌ ಜಿಲ್ಲಾ ಕೇಂದ್ರವನ್ನು ಸ್ಥಳಾಂತರಗೊಳಿಸಬೇಕು ಎಂದು ಶಿಕ್ಷಕರ ಒತ್ತಾಯವಾಗಿದೆ.

ನರಕಯಾತನೆ: ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಡಶಾಲಾ ಶಿಕ್ಷಕರ ಸಂಖ್ಯೆ 4 ಸಾವಿರಕ್ಕೂ ಹೆಚ್ಚಿದೆ. ಪ್ರೌಡಶಾಲಾ ಶಿಕ್ಷಕರಿಗೆ ಆಯಾ ತಾಲೂಕಿನ ಲ್ಲಿ ಡಯಟ್‌ ವಿಷಯವಾರು ಶಿಕ್ಷಣಾಧಿಕಾರಿಗಳು ಬೋಧನೆ ತರಬೇತಿ ನೀಡುತ್ತಾರೆ. ಪ್ರಾಥಮಿಕ ಶಿಕ್ಷಕರಿಗೆ ಹೆಚ್ಚಿನ ತರಬೇತಿ ನೀಡುಲಾಗುತ್ತಿದೆ. ತರಬೇತಿಗಾಗಿ ಹೆಚ್ಚುವರಿ ಭತ್ಯೆ ನೀಡುವುದಿಲ್ಲ. ಜತೆಗೆ ಕೇಂದ್ರದಲ್ಲಿ ತರಬೇತಿ ಪಡೆದು ವಾಪಸ್ಸಾಗುವ ಹೊತ್ತಿಗೆ ಸಂಜೆ ತುಂಬಾ ಹೊತ್ತಾಗುತ್ತದೆ. ಮನೆಯಲ್ಲಿ ವೃದ್ಧರು, ಚಿಕ್ಕ ಮಕ್ಕಳನ್ನು ಬಿಟ್ಟು ತರಬೇತಿಗೆ ಹೋಗಬೇಕು. ತರಬೇತಿಯನ್ನು ಬಿಡಲು ಸಾಧ್ಯವಿಲ್ಲ. ಆದರೆ ಹೋಗಿಬರುವುದು ನರಕಯಾತನೆಯಾಗಿದೆ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ಅಗತ್ಯವಿರುವ ಸೌಲಭ್ಯಗಳಿವೆ: ಜಿಲ್ಲಾಡಳಿತ ಭವನದಲ್ಲಿ 2 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಏಕ ಕಾಲದಲ್ಲಿ ತರಬೇತಿ ನೀಡಲು 50 ಕಂಪ್ಯೂಟರ್‌ಗಳಿವೆ. ಡಯಟ್‌ ಆಡಳಿತಾತ್ಮಕವಾಗಿ ಕೆಲಸ ನಿರ್ವಹಿಸಲು ಇಷ್ಟು ಸಾಕಾಗುವುದು. ಆದರೆ ಶಿಕ್ಷಕರಿಗೆ ತರಬೇತಿ ನೀಡಲು ಸಾಕಾಗುವುದಿಲ್ಲ. ಅಲ್ಲದೆ ಡಯಟ್‌ ಕೇಂದ್ರಕ್ಕಾಗಿ ಜಿಲ್ಲಾಡಳಿತ ಭವನದ ಪಕ್ಕದಲ್ಲಿ ಸರ್ಕಾರ 4 ಎಕರೆ ಜಾಗ ನೀಡಲಿದೆ. ಅಲ್ಲಿಯೇ ಡಯಟ್‌ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಶಿಕ್ಷಕರು ಒಂದು ವರ್ಷದಲ್ಲಿ 5ರಿಂದ 15 ದಿನಗಳವರೆಗೆ ತರಬೇತಿ ಪಡೆಯುತ್ತಾರೆ. ಒಂದು ಬಾರಿಗೆ 200ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ. ಆದರೆ ಬೆಳಗ್ಗೆ ವೇಳೆ ಸಮಯಕ್ಕೆ ಸರಿಯಾಗಿ ತರಬೇತಿಗೆ ಹಾಜರಾಗಲು ಸಾಧ್ಯವಿಲ್ಲ. ಟ್ರಾಫಿಕ್‌ ಜಾಮ್‌ನಿಂದಾಗಿ ಹೋಗಿಬರುವುದರಲ್ಲೇ ಸಮಯ ವ್ಯರ್ಥವಾಗುತ್ತದೆ.
-ಆಂಜನಪ್ಪ, ಶಿಕ್ಷಕ

Advertisement

ಡಯಟ್‌ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಬೇಕು. ನಮ್ಮದು ತರಬೇತಿ ನೀಡುವ ಕೆಲಸ ಮಾತ್ರ ಆಗಿದೆ. ಆಡಳಿತಾತ್ಮಕವಾಗಿ ಸ್ಥಳಾಂತರ ಮಾಡಿಕೊಳ್ಳಿ ಎಂದು ಆದೇಶ ನೀಡಿದರೆ ತಕ್ಷಣವೇ ಸ್ಥಳಾಂತರ ಮಾಡುತ್ತೇವೆ. ಅಂತಿಮ ತೀರ್ಮಾನ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ತೆಗೆದುಕೊಳ್ಳಬೇಕು.
-ಉಮೇಶ್‌, ಡಯಟ್‌ ತರಬೇತಿ ಪ್ರಾಂಶುಪಾಲ

Advertisement

Udayavani is now on Telegram. Click here to join our channel and stay updated with the latest news.

Next