Advertisement

ಗುರುವಿನ ಹರಕೆ

05:00 PM Sep 05, 2022 | Team Udayavani |

ಓದುಗರಿಗೆ ಶಿಕ್ಷಕರ ದಿನಾಚರಣೆಯ ಶುಭಾಷಯಗಳು. ಸೆಪ್ಟೆಂಬರ್ 04ರಿಂದಲೇ 05ರ ತಡರಾತ್ರಿಯವರೆಗೂ ನಾವು ನಮ್ಮ ಬಾಲ್ಯದ ಅಚ್ಚುಮೆಚ್ಚಿನ, ಪ್ರೌಢಾವಸ್ಥೆಯ ಶಿಸ್ತಿನ, ಕಾಲೇಜು ದಿನಗಳಲ್ಲಿನ ನಮಗೆ ಬ್ರೇಕ್ ನೀಡಿದ, ಇತರೇ ಅನೇಕ ಆಯಾಮಗಳಲ್ಲಿ ಇಷ್ಟವಾದ ಶಿಕ್ಷಕರನ್ನು ನೆನಪಿಸಿಕೊಂಡು ಸ್ಮರಿಸಿ, ಕರೆ ಮಾಡಿ, ನಮ್ಮ ಕೃತಜ್ಞತಾಭಾವ ವ್ಯಕ್ತಪಡಿಸುತ್ತೇವೆ. ನಮಗೇ ಗೊತ್ತಿಲ್ಲದಂತೆ ಅಂತಹ ಯಾವುದೋ ಶಿಕ್ಷಕರ ಮ್ಯಾನರಿಸಂ ಕೂಡ ನಮ್ಮ ಮೈಗೂಡಿರುತ್ತದೆ ಅಲ್ಲವೇ. ವೇದಗಳು ಗುರುವನ್ನು ಸಕಲ ಸೃಷ್ಟಿಕರ್ತನಾದ ಬ್ರಹ್ಮನಿಗೂ, ಸಂರಕ್ಷಕನಾದ ವಿಷ್ಣುವಿಗೂ ಹಾಗೂ ವಿನಾಶಕಾರಿಯಾದ ಶಿವನಿಗೂ ಹೋಲಿಸಿ, ಗುರುವಿನ ಹೊಣೆಗಾರಿಕೆ ಮತ್ತು ಅವರ ಪ್ರಾಮುಖ್ಯತೆಯನ್ನು ತಿಳಿಸುತ್ತವೆ.

Advertisement

ಅರಿವೇ ಗುರುವಲ್ಲವೇ?, ಹೌದು. ಆದರೆ ಪ್ರತಿಯೊಬ್ಬರಲ್ಲಿ ಅರಿವು ಜಾಗೃತವಾಗಬೇಕಾದರೆ ಮೌಢ್ಯದಿಂದ ಜ್ಞಾನದಕಡೆಗೆ ಕೊಂಡೊಯ್ಯುವ ಮಾರ್ಗದರ್ಶಕನಾಗಿ, ವ್ಯಕ್ತಿಯ           ಸರಿ-ತಪ್ಪನ್ನು ತಿಳಿಹೇಳುವ ಮೌಲ್ಯಮಾಪಕನಾಗಿ, ಮೌಲ್ಯಭರಿತ ಜೀವನ ನಡೆಸುವ ಆದರ್ಶ ವ್ಯಕ್ತಿಯಾಗಿ ಗುರುವಿನ ಪಾತ್ರ ಪ್ರಮುಖವಾಗಿರುತ್ತದೆ. ಕೇವಲ ಔಪಚಾರಿಕ ಶಿಕ್ಷಣ(Formal Education) ಬೋಧಿಸದೇ, ಅನೇಕ ಸಂದರ್ಭಗಳಲ್ಲಿ, ಅನ್ಯ  ರೀತಿಯಲ್ಲಿ  ನಮಗೆ ಮಾರ್ಗದರ್ಶಕರಾಗಿ,ನಮ್ಮಲ್ಲಿ ಕಲಿಕೆಯ ಬುನಾದಿಯಾಗಿರುವ ಆಲೋಚನೆಯ ಕಿಚ್ಚು ಹಚ್ಚಿದ ಯಾರಾದರೂ ಅವರು ನಮ್ಮ ಗುರುವಿನ ಸ್ಥಾನದಲ್ಲಿರುತ್ತಾರೆ ಎಂಬುದನ್ನು ಈ ಸಂದರ್ಭದಲ್ಲಿ ನಾವು ನೆನೆಯಬೇಕು.

ಸರಾಸರಿ ಆರ್ಥಿಕ ಮಟ್ಟ  ಸುಧಾರಿಸುತ್ತಿದ್ದರೂ ಶಿಕ್ಷಣ ತನ್ನ ಮೌಲ್ಯ ಕಳೆದುಕೊಳ್ಳುತ್ತಿರುವುದೇಕೆ? ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಮಕ್ಕಳು ಜೀವನದ ಸಣ್ಣ-ಪುಟ್ಟ ಕಷ್ಟಗಳನ್ನು ಎದುರಿಸಲೂ ಅಶಕ್ತರಾಗಿರುವುದೇಕೆ? ಅನೇಕ ವಿದ್ಯಾವಂತರೇ ಅನೈತಿಕ ದಾರಿಗಳನ್ನು ಹಿಡಿದಿರುವುದೇಕೆ? ಹೀಗೆ ನಾವು ಅವಲೋಕಿಸಿದಾಗ ಒಂದಿಷ್ಟು ಅಂಶಗಳನ್ನು ಹೆಸರಿಸಬಹುದು: ಸಂಸಾರಗಳಲ್ಲಿ ಕ್ಷೀಣಿಸುತ್ತಿರುವ ಸಂಸ್ಕಾರ, ಸಾಮಾಜಿಕ ಜೀವನದಿಂದ ಪ್ರತ್ಯೇಕವಾದ ವಾಸ್ತವದಲ್ಲಿ ಇರುವುದಕ್ಕೆ ಮಕ್ಕಳನ್ನು ಬಿಡುತ್ತಿರುವುದು, ಸ್ಲೋ ಪಾಯ್ಸನ್ ನಂತಿರುವ ಮಾಧ್ಯಮಗಳ ಪ್ರಭಾವ, ಡಿಜಿಟಲ್ ಗ್ಯಾಜೆಟ್ ಗಳ ಮಿತಿಮೀರಿದ ಬಳಕೆ, ದಾರಿ ತಪ್ಪಿಸುತ್ತಿರುವ ಸೆಲೆಬ್ರಿಟಿಗಳು, ಜೀವನದ ಎಲ್ಲಾ ಆಯಾಮಗಳಿಗೆ ತೆರೆದುಕೊಳ್ಳದೇ ಇರುವುದು, ಇನ್ನೂ ಹಲವು.

ಶಿಕ್ಷಣ ಎಂಬ ಪದದಲ್ಲಿ ಅವ್ಯಕ್ತವಾಗಿರುವ ಶಿಕ್ಷೆ ಎಂಬ ಪದವು ಅಂದಿನ ಬೋಧನೆ-ಕಲಿಕಾ ಕ್ರಿಯೆಯಲ್ಲಿ ಶಿಕ್ಷೆ ಎಂಬುದು ಹಿತ-ಮಿತ-ಸೂಕ್ತವಾಗಿ ಬಳಸಿಕೊಳ್ಳುವ ಮುಖ್ಯ  ಅಸ್ತ್ರ ಎಂದು ತಿಳಿಸುತ್ತದೆ. ಆದರೆ ಇಂದು ಆ ಅಸ್ತ್ರವನ್ನೇ ಶಿಕ್ಷಕನಿಂದ ಕಸಿದಂತಾಗಿದೆ. ಶಿಕ್ಷಕರಿಂದ ಒದೆ ತಿನ್ನುವವರ ಸಂಖ್ಯೆ ಕಡಿಮೆಯಾದಂತೆ, ಪೋಲಿಸರಿಂದ ಒದೆ ತಿನ್ನುವವರ ಸಂಖ್ಯೆ ಹೆಚ್ಚಾಗಿರುವಂತೆ ತೋರುವುದು ಅವಾಸ್ತವವೇನಲ್ಲ.

ಶಿಕ್ಷಣ ಬೋಧನೆಯನ್ನೇ ವೃತ್ತಿಯಾಗಿಸಿಕೊಂಡವರಿಗೆ ಸದೃಢ, ಸುಂದರ, ಸ್ವಚ್ಛ ಸಮಾಜ ನಿರ್ಮಾಣದ ಜವಾಬ್ದಾರಿ ನೆರಳಾಗಿ ಹಿಂಬಾಲಿಸಲಾರಂಭಿಸುತ್ತದೆ.  ಯಾಕೆಂದರೆ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಲ್ಲವೇ,,, ಬೆಳೆಯುವ ಸಿರಿ ಮೊಳಕೆಯಲ್ಲೇ  ಆಗಿರುವುದರಿಂದ ಮೊಳಕೆ ಉತ್ತಮ ಸಿರಿಯಾಗಲು ಬೇಕಾಗಿರುವ ಪೋಷಣೆ ಎರೆಯಬೇಕಾಗಿರುವುದು ಶಿಕ್ಷಕರಲ್ಲವೇ?.    ನನ್ನ ತಂದೆಯ ಈ ಮಾತು ನನ್ನನ್ನು ಎಚ್ಚರಿಸುತ್ತಿರುತ್ತದೆ:  ‘ಮೇಷ್ಟ್ರು ನಿಂತು ಒಯ್ದರೆ  ಮಕ್ಕಳು ಓಡಾಡಿಕೊಂಡು ಓಯ್ತಾವೆ’ ಎಂದು.

Advertisement

ಅಂದರೆ ಮಕ್ಕಳು ತಮ್ಮ ಕಲಿಕೆ ದೆಸೆಯಲ್ಲಿ ತಮ್ಮ ಗುರುಗಳನ್ನು ಕೇಳುವುದಕ್ಕಿಂತ ಹೆಚ್ಚು ಅವರನ್ನು ನೋಡಿ, ಅನುಕರಿಣಿಸಿ ಹೆಚ್ಚು ಕಲಿಯುತ್ತವೆ ಎಂದು.  ಹಾಗಾದರೆ  ಮೊದಲು ಶಿಸ್ತು, ಸಮಯ ಪ್ರಜ್ಞೆ, ಉತ್ತಮ ನಡವಳಿಕೆ, ಇತ್ಯಾದಿ ಸುಗುಣಗಳನ್ನು ಮೈಗೂಡಿಸಿಕೊಂಡು ಆನಂತರವೇ ಯಾರಾದರೂ  ಶಿಕ್ಷಕರಾಗಲು ಪ್ರಯತ್ನಿಸಬಹುದು.   ಬೋಧನೆ ಎಂದಾಕ್ಷಣ ಚಾಕ್ ಪೀಸ್ ಹಿಡಿದು ಪಠ್ಯಕ್ರಮ(syllabus) ಮುಗಿಸುವುದಲ್ಲ. ಬದಲಾಗಿ ಪಠ್ಯ ಹಾಗು ಪಠ್ಯಕ್ರಮದ ಮೂಲ ಉದ್ದೇಶವನ್ನು ಕಲಿಯುವ ಮನಸ್ಸುಗಳಲ್ಲಿ ಜಾಗೃತಗೊಳಿಸುವುದಾಗಿರುತ್ತದೆ. ಕಲಿಕೆಯ ಪರಿಣಾಮವು ಸಮಾಜದಲ್ಲಿ ಪರಿಮಾಣಕ್ಕೂ (quantitative) ಹೆಚ್ಚಾಗಿ ಗುಣಾತ್ಮಕ(qualitative) ಪ್ರಭಾವ ಬೀರುತ್ತದೆ.  ಹಾಗೆ ನೋಡಿದರೆ ಪರೀಕ್ಷೆಯ ಅಂಕಗಳನ್ನೇ  ಕೇಂದ್ರಬಿಂದುವಾಗಿಸಿರುವ ಇಂದಿನ ವ್ಯವಸ್ಥೆ,  ಗುಣಾತ್ಮಕ ಶಿಕ್ಷಣದ ಔಚಿತ್ಯವನ್ನು  ಮರೆಮಾಚಿದೆ. ಶಿಕ್ಷಕರು ಇದನ್ನರಿತು ತಮ್ಮ ಬೋಧನಾ ಕ್ರಿಯೆಯಲ್ಲಿ ಜೀವನ ಮೌಲ್ಯ, ವ್ಯಕ್ತಿತ್ವ-ವಿಕಸನ,  ಕೌಶಲ್ಯ ಸುಧಾರಣೆ ಇತ್ಯಾದಿಯಂತಹ ಗುಣಾತ್ಮಕ ಅಂಶಗಳನ್ನು ಒಂದಾಗಿಸಿಕೊಳ್ಳಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ.   ಈ ದಿಸೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(NEP) ಆಶಾಭಾವನೆ ಮೂಡಿಸಿದೆ. ಆದರೆ ಅದರ ಸಮರ್ಥ ಅನುಷ್ಠಾನ ಸದ್ಯದ ಚರ್ಚೆಯ ವಿಷಯವಾಗಿದೆ.­­

ಜೀವನಕ್ರಮವನ್ನು ಸಂಪೂರ್ಣವಾಗಿ ಅರಿತ ಮೇಲೆ ನಾವು ನಿರ್ಧರಿಸಬೇಕಾದ ನಮ್ಮ ನಿಯಮಗಳನ್ನು ಬಾಲಿಶವಾಗಿ My Life-My Way ಎಂದು ಸ್ವೇಚ್ಛಾಚಾರದ ಮಂತ್ರ ಸಾರುತ್ತಿರುವ, ವ್ಯಕ್ತಿತ್ವಕ್ಕಿಂತ ವ್ಯಕ್ತಿಯನ್ನೇ ವೈಭವೀಕರಿಸುವ, ಕ್ರೌರ್ಯವನ್ನೇ ವಿಜೃಂಭಿಸುವ, ತೋಳ್ಬಲ-ಹಣಬಲ-ಜನಬಲ  ಇತ್ಯಾದಿಗಳು ಸಿದ್ಧಾಂತಗಳಿಗಿಂತ ಹೆಚ್ಚೆಂದು ಪರೋಕ್ಷವಾಗಿ ಬಿತ್ತರಿಸುತ್ತಿರುವ, ಹಾರ್ಡ್ ವರ್ಕ್ ಗಿಂತ ಶಾರ್ಟ್-ಕಟ್  ಯಶಸ್ಸಿನ  ಸುಲಭದ ದಾರಿಯೆಂದು ಪ್ರಚೋದಿಸುವ ಸಿನಿಮಾ-ಮಾಧ್ಯಮಗಳ ಪ್ರಭಾವಗಳ ಮಧ್ಯೆ,  ಪ್ರತಿಹಂತದಲ್ಲೂ ಪ್ರತಿ ರಂಗದಲ್ಲೂ ಜಾತಿ ವ್ಯವಸ್ಥೆ ಹೆಮ್ಮರವಾಗಿದ್ದರೂ ಸಾಂವಿಧಾನಿಕವಾಗಿ ಜಾತ್ಯತೀತ ಎಂದು ಹೇಳಿಕೊಳ್ಳುವ ವ್ಯವಸ್ಥೆಯೊಳಗೆ, ಕಲ್ಪನೆಗೂ ಮೀರಿದ ಲೋಕದಲ್ಲೇ ಮುಳುಗಿಸುತ್ತಿರುವ ಡಿಜಿಟಲ್ ವೇದಿಕೆಯ ಭರಾಟೆಯೊಳಗೆ, ಅಡವಿ ದೆವ್ವ ಊರು ದೇವರನ್ನೋಡಿಸಿದಂತೆ ಭವಿಷ್ಯವೇ ತಿಳಿಯದ ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮ ಸಂಸ್ಕೃತಿಯನ್ನು ಬುಡಮೇಲು ಮಾಡುತ್ತಿರುವಾಗ ಮೌಲ್ಯಗಳನ್ನು ಎತ್ತಿ ಹಿಡಿದು ಉತ್ತಮ ಶಿಕ್ಷಣ ನೀಡಬೇಕೆನ್ನುವ ಶಿಕ್ಷಕರ ಮನಸ್ಥಿತಿ  ಅಸಹಾಯಕವಾಗಿದೆ. ಇನ್ನಾದರೂ ಅಂತಹ ಶಿಕ್ಷಕರಿಗೆ ಧ್ವನಿ ತುಂಬುವಂತಹ ಬದಲಾವಣೆ ವ್ಯವಸ್ಥೆಯಲ್ಲಾಗಲಿ ಎಂಬುದು ಈ ಲೇಖನದ ಆಶಯ.

  • ಅಕ್ಕಸಾಲಿ ನೀಲಕಂಠಾಚಾರಿ,

ಉಪನ್ಯಾಸಕರು, ಸರ್ಕಾರಿ ಪಾಲಿಟೆಕ್ನಿಕ್, ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next