Advertisement

ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ

01:27 PM Sep 05, 2020 | sudhir |

ಕೋವಿಡ್ 19 ಧುತ್ತೆಂದು ಎದುರಾದಾಗ
ಅರಿಯದ ದಾರಿಯಲಿ ನಡೆಯೆಂದರೆ ಹೇಗೆ ನಡೆಯಲಿ ನಾ?
ಅಳುಕು, ಅಂಜಿಕೆ, ಸವಾಲುಗಳ ನಡುವೆ
ಗುರಿ ಮುಟ್ಟುವೆನಾ ನಾ? (ವಿದ್ಯಾರ್ಥಿಯ ಮನದೊಳಗೆ )

Advertisement

ಬದಲಾಗಲೇ ಬೇಕು ಬದಲಾವಣೆಗೆ…
ಬದಲಾಗಲೇ ಬೇಕು ಬದುಕುಳಿಯಲು..
ಬದಲಾಗಲೇ ಬೇಕು
ಬದುಕು ಮುಂದುವರಿಸಲು. (ಶಿಕ್ಷಕರ ಸ್ಥಿತಿ )

ಪಠ್ಯ ಪಠ್ಯೇತರ ಚಟುವಟಿಕೆಗಳು, ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಂದ ತುಂಬಿ ತುಳುಕುತಿದ್ದ ನನ್ನ ಸರಕಾರಿ ಪ್ರೌಢ ಶಾಲೆ . ಇಂದು ಅವರ ಕಲರವ ವಿಲ್ಲದೇ, ಕೇವಲ ಶಿಕ್ಷಕರೊಂದಿಗೆ ಮೌನವಾಗಿ ಕಾಯುತ್ತಿದೆ ವಿದ್ಯಾರ್ಥಿಗಳ ಬರುವಿಕೆಗಾಗಿ ಶಬರಿಯಂತೆ… ದರ್ಶನ ಸಿಕ್ಕೇ ಸಿಗುವುದು ಎಂಬ ನಂಬಿಕೆ ಯಲಿ..

ಅತ್ತ ವಿದ್ಯಾರ್ಥಿ,ಇತ್ತ ಶಿಕ್ಷಕ.. ಸಂಬಂಧ ಕಲ್ಪಿಸಲೇಬೇಕಾದ ಅನಿವಾರ್ಯತೆಯಲ್ಲಿ ತಂತ್ರಜ್ಞಾನದ ಮೊರೆ ಹೊಕ್ಕಾಗ, ಕಷ್ಟ ವಾದರೂ ಸಾಧ್ಯವಾಗಿಸಿಕೊಂಡು ವಿದ್ಯಾರ್ಥಿಗಳ ನಂಬಿಕೆ ಉಳಿಸಿಕೊಂಡಿದ್ದೇವೆ. ವೃತ್ತಿ ಧರ್ಮವನ್ನು ಪ್ರಾಮಾಣಿಕವಾಗಿ ಪಾಲಿಸುತಿದ್ದೇವೆ.

ಕೋವಿಡ್ 19 ಗುರು ಶಿಷ್ಯರನ್ನು ಸಾಮಾಜಿಕವಾಗಿ ಅಂತರದಲ್ಲಿರಿಸಿದೆಯಾದರೂ, ಭಾವನಾತ್ಮಕವಾಗಿ, ಸಾಧ್ಯವಾದಷ್ಟು ಶೈಕ್ಷಣಿಕವಾಗಿ ಮುಖ್ಯ ಶಿಕ್ಷಕರೋಪಾದಿಯಾಗಿ ಸ್ಪಂದಿಸಲು ತಂತ್ರಜ್ಞಾನ ಸಹಕರಿಸಿದೆ.

Advertisement

ಶಿಕ್ಷಕರಾದ ನಮಗೆ ತಂತ್ರಜ್ಞಾನ ಸಂಪೂರ್ಣ ಕರಗತವಲ್ಲದ ಕಾರಣ ಸ್ವಲ್ಪ ಮುತುವರ್ಜಿ ವಹಿಸಿ, ನುರಿತವರನ್ನು ಕೇಳಿ, ನಾವೇ ಸ್ವಯಂ ಸಂಪನ್ಮೂಲ ತಯಾರಿಸಿ ವಿದ್ಯಾರ್ಥಿಗಳಿಗೆ ರವಾನಿಸಿದ್ದೇವೆ..ಅರ್ಥೈಸಲು ಪ್ರಯತ್ನಿಸುತ್ತಿದ್ದೇವೆ. ಇಲಾಖಾಧಿಕಾರಿಗಳ ಮಾರ್ಗದರ್ಶನ, ಮುಖ್ಯ ಶಿಕ್ಷಕರ ಸಲಹೆ, ಮೇಲುಸ್ತುವಾರಿ ಸಮಿತಿಯವರ ಸಹಕಾರದೊಂದಿಗೆ “ವಿದ್ಯಾಗಮ ” ಕಾರ್ಯಕ್ರಮದ ಮೂಲಕ ಶಾಲೆಯ ಕಟ್ಟಕಡೆಯ ವಿದ್ಯಾರ್ಥಿಯನ್ನೂ ಸಂಪರ್ಕಿಸಿದ್ದೇವೆ. ಇದು ಹೆಗ್ಗಳಿಕೆಯಲ್ಲ. ನಮ್ಮ ಜವಾಬ್ದಾರಿಯಾಗಿದೆ.. ಇದು ಅನಿವಾರ್ಯವೂ ಆಗಿದೆ.

ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ. “ಸ್ಮಾರ್ಟ್ ಫೋನ್ ಬಂದ ಮೇಲೆ ಮಕ್ಕಳು ದಾರಿ ತಪ್ಪಿದರು ” ಎಂದ ಮಾತು ನಮ್ಮನ್ನು ಅಣಕಿಸುತ್ತಿದೆ.

ಸಾಮಾಜಿಕ ಅಂತರ ಕಾಯ್ದು ಕೊಳ್ಳುವಲ್ಲಿ ಕೋವಿಡ್ ಗೆದ್ದೇ ಎಂದು ಬೀಗಿದರೂ ಗುರು ಶಿಷ್ಯರನ್ನು ಭಾವನಾತ್ಮಕವಾಗಿ ಹತ್ತಿರವಾಗಿಸಿದೆ. ಕೋವಿಡ್ ಹೋಗಲಿ. ವಿದ್ಯಾರ್ಥಿಗಳು ಬರಲಿ ಎಂಬುದೇ ನಮ್ಮ ಆಶಯ.

– ಶ್ರೀಮತಿ ತಾರಾಮತಿ (ಕನ್ನಡ ಭಾಷಾ ಶಿಕ್ಷಕಿ… ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕಾಡು, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next