Advertisement

ಶಿಕ್ಷಕರಿಗೆ 2 ತಿಂಗಳುಗಳಿಂದ ವೇತನವಿಲ್ಲ

11:26 AM May 06, 2022 | Team Udayavani |

ಕುಂದಾಪುರ: ಬೈಂದೂರು ವಲಯದಲ್ಲಿ ಕಳೆದ 2 ತಿಂಗಳುಗಳಿಂದ ಶಿಕ್ಷಕರಿಗೆ ವೇತನ ಆಗಿಲ್ಲ. ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಉತ್ತರ ನೀಡಬೇಕಾದ ಬೈಂದೂರು ಶಿಕ್ಷಣಾಧಿಕಾರಿ ಸಭೆಗೇ ಬಂದಿಲ್ಲ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಹೇಳಿದರು.

Advertisement

ಗುರುವಾರ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ನಡೆದ ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಶಿಕ್ಷಕರ ವೇತನ ಹಾಗೂ ಶಿಕ್ಷಕರ ನೇಮಕಕ್ಕೆ ವ್ಯವಸ್ಥೆ ಮಾಡಲು ಸೂಚಿಸಿದರು.

ಕುಂದಾಪುರ ಶಿಕ್ಷಣಾಧಿಕಾರಿ ಅರುಣ್‌ ಕುಮಾರ್‌ ಶೆಟ್ಟಿ ಉತ್ತರಿಸಿ, ಬೈಂದೂರು ನೂತನ ತಾ.ಪಂ. ಆದ ಕಾರಣ ಬೈಂದೂರು ವಲಯದ ಶಿಕ್ಷಕರ ವೇತನಕ್ಕೆ ಹಣಕಾಸು ಕೋಡ್‌ ಸೃಷ್ಟಿ ಆಗಿಲ್ಲ. ವಂಡ್ಸೆ ಪ್ರದೇಶ ಕುಂದಾಪುರ ತಾಲೂಕಾಗಿದ್ದು ಬೈಂದೂರು ಶೈಕ್ಷಣಿಕ ವಲಯವಾದ ಕಾರಣ ಕುಂದಾಪುರ ತಾ.ಪಂ.ಗೆ ವಿಶೇಷ ಅನುಮತಿ ನೀಡಬೇಕಾಗುತ್ತದೆ. ಜಿಲ್ಲೆಗೆ 310 ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶವಾಗಿದ್ದು ಕೊರತೆ ಇರುವ ಶಾಲೆಗಳಿಗೆ ಭರ್ತಿ ಮಾಡಲಾಗುವುದು ಎಂದರು.

ಹಗರಣ?

ಕಾರ್ಮಿಕ ಇಲಾಖೆಗೆ ಕೋಟ್ಯಂತರ ರೂ. ಬರುತ್ತದೆ. ಕೋವಿಡ್‌ ಸಂದರ್ಭ 200 ರೂ. ಕಿಟ್‌ಗೆ 500 ರೂ. ಪಾವತಿಸಿ ಹಂಚಿದ್ದಾರೆ. ಹಣ ಸದ್ಬಳಕೆಯಾಗುತ್ತಿಲ್ಲ ಎಂದು ಶಾಸಕರು ಹೇಳಿದರು. ಪೊಲೀಸರು ರಸ್ತೆಬದಿ ವಸೂಲಿಗೆ ನಿಲ್ಲಬಾರದು. ಇದು ಸರಿಯಲ್ಲ. ಸಭೆಗೂ ಇಲಾಖೆಯಿಂದ ಗೈರಾಗಿದ್ದಾರೆ. ಹಳ್ಳಿ ಹಳ್ಳಿಗಳ ಅಂಗಡಿ, ಮನೆಗಳಲ್ಲಿ ಅಕ್ರಮ ಮದ್ಯ ಇದೆ. ಸಂಸಾರಗಳು ಹಾಳಾಗುತ್ತಿವೆ. ಸಂಸ್ಕೃತಿ ಇರುವ ಜಿಲ್ಲೆಯಲ್ಲಿ ಮದ್ಯ ಮನೆಗಳನ್ನು ಹಾಳು ಮಾಡುತ್ತಿದೆ. ಅಬಕಾರಿ ಡಿಸಿ ಕೂಡ ಏನೂ ಕ್ರಮಕೈಗೊಳ್ಳುತ್ತಿಲ್ಲ. ದಾಳಿಗಳು ನಡೆಯುತ್ತಿಲ್ಲ. ಈ ಕುರಿತು ಅಬಕಾರಿ ಸಚಿವರಿಗೂ ಹೇಳಿದ್ದೇನೆ ಎಂದರು.

Advertisement

ಬಸ್‌ ಬಿಡಿ

ಎಲ್ಲ ಗ್ರಾಮಾಂತರ ಪ್ರದೇಶಗಳಿಗೂ ಸರಕಾರಿ ಬಸ್‌ ಬಿಡಬೇಕು. ಶಾಲಾ ಕಾಲೇಜು ಮಕ್ಕಳಿಗೆ ತೊಂದರೆಯಾಗುತ್ತದೆ. ಶಾಲಾರಂಭವಾಗಿ ಒಂದು ವಾರದಲ್ಲಿ ಎಲ್ಲ ಕಡೆಗೂ ಬಸ್‌ ಬಿಡದೇ ಇದ್ದರೆ ಡಿಪೋ ಎದುರು 5 ಸಾವಿರ ಮಕ್ಕಳನ್ನು ಸೇರಿಸಿ ಪ್ರತಿಭಟನೆ ನಡೆಸುತ್ತೇನೆ. ಡಿಪೋದಿಂದ ಬಸ್‌ಗಳನ್ನು ಹೊರಬರಲು ಬಿಡುವುದಿಲ್ಲ ಎಂದು ಹೇಳಿದ ಶಾಸಕರು, ಡಿಪೋ ಮೆನೇಜರ್‌ ಸಭೆಗೂ ಬಂದಿಲ್ಲ. ಮಕ್ಕಳು ಕಷ್ಟಪಟ್ಟು ವಿದ್ಯಾಭ್ಯಾಸಕ್ಕೆ ಬರುತ್ತಾರೆ ಎನ್ನುವುದನ್ನು ಗಮನದಲ್ಲಿರಿಸಿ, ಲಾಭ ನಷ್ಟದ ಲೆಕ್ಕಾಚಾರ ಮಾಡದೇ ಬಸ್‌ಗಳನ್ನು ಬಿಡಬೇಕು. ಖಾಸಗಿ ಬಸ್‌ಗಳೂ ಇಲ್ಲ ಸರಕಾರಿ ಬಸ್ಸೂ ಬಿಡುವುದಿಲ್ಲ ಎಂದರೆ ಏನರ್ಥ ಎಂದರು.

ತಲ್ಲೂರಿಗೆ ನೀರು

ಸೌಕೂರು ಏತ ನೀರಾವರಿ ಯೋಜನೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. 8 ಗ್ರಾಮಗಳಿಗೆ ನೀರು ದೊರೆಯಲಿದೆ. ತಲ್ಲೂರಿನಲ್ಲೂ ಬೇಡಿಕೆ ಇದ್ದು ಅಲ್ಲಿಗೂ ನೀರು ಕೊಡಿ ಎಂದು ವಾರಾಹಿ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು, ಯಾವುದೇ ಕಾಮಗಾರಿ ಕಳಪೆಯಾಗಬಾರದು ಎಂದರು.

ಹುಲಿ ಕೂಗುವಾಗ ಅಕ್ಕಿ ರುಬ್ಬಿದರು!

ಕೊಲ್ಲೂರು ಸಬ್‌ಸ್ಟೇಷನ್‌ ಬೇಗ ಕಾರ್ಯಾರಂಭಿಸಿ ಎಂದು ಹೇಳಿದ ಶಾಸಕರು, ಗ್ರಾಮಾಂತರ ಪ್ರದೇಶದಲ್ಲಿ ಲೋವೋಲ್ಟೇಜ್‌ ಸಮಸ್ಯೆ ಇದೆ. ಅಲ್ಲಿನ ಮಂದಿ ಮಿಕ್ಸಿ, ಗ್ರೈಂಡರ್ ಚಾಲೂ ಮಾಡಲು ಹುಲಿ ಕೂಗಬೇಕಾಗುತ್ತದೆ. ಅಂದರೆ ಮಧ್ಯರಾತ್ರಿಯ ವೇಳೆ ಅಕ್ಕಿ ರುಬ್ಬಬೇಕಾಗುತ್ತದೆ ಎಂದು ದೂರುತ್ತಿದ್ದಾರೆ ಎಂದ ಶಾಸಕರು, ಬೆಳಕು ಯೋಜನೆಯಲ್ಲಿ ಬಡವರ ಅರ್ಜಿ ತಿರಸ್ಕರಿಸಬೇಡಿ. ಬಡವರಿಗೆ ಸರಕಾರ ನೀಡಿದ ಯೋಜನೆಯ ಫ‌ಲ ದೊರೆಯಲಿ. ಶಂಕರನಾರಾಯಣ, ತಲ್ಲೂರು ಮೆಸ್ಕಾಂ ವಿರುದ್ಧ ಇಂತಹ ಅಪವಾದಗಳಿವೆ ಎಂದರು.

ನಷ್ಟ

ಕೆಸಿಡಿಸಿ ಗೇರುತೋಟ ಏಲಂನಿಂದ ಈ ವರ್ಷ 2 ಕೋ.ರೂ., ಕಳೆದ ವರ್ಷ 2.35 ಕೋ.ರೂ. ಬಂದಿದೆ ಎಂದು ಅಧಿಕಾರಿಗಳು ಹೇಳಿದಾಗ, ಬೆಳೆ ಹೇಗಿದೆ ಎಂದು ಶಾಸಕರು ಪ್ರಶ್ನಿಸಿದರು. ಬೆಳೆ ಕಡಿಮೆಯಾಗಿದೆ, ಏಲಂ ಪಡೆದವರಿಗೆ ನಷ್ಟ ಎಂದು ಉತ್ತರ ಬಂತು. ಮರವಂತೆ, ಸೋಮೇಶ್ವರ ಬೀಚ್‌ ಅಭಿವೃದ್ಧಿಗೆ 25 ಕೋ.ರೂ. ಮಂಜೂರಾಗಿದೆ. ಆದರೆ ಸಭೆಗೆ ಅಧಿಕಾರಿಗಳೇ ಬಂದಿಲ್ಲ ಎಂದು ಶಾಸಕರು ಹೇಳಿದರು.

ಸರಕಾರಿ ಅಧಿಕಾರಿಗಳು ಸಾರ್ವಜನಿಕರ ದೂರವಾಣಿ ಕರೆಗೆ ಉತ್ತರಿಸಬೇಕು, ಕೋವಿಡ್‌ ಮೂಡ್‌ನಿಂದ ಹೊರಬಂದು ಅಧಿಕಾರಿಗಳು ಕೆಲಸ ಮಾಡಬೇಕು. ಕಟ್‌ಬೆಲ್ತೂರು ನಿವೇಶನ ಪ್ರಕ್ರಿಯೆ ಬೇಗ ಮುಗಿಸಬೇಕು. ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಮೊದಲ ಆದ್ಯತೆ ನೀಡಬೇಕು. ಜಡ್ಕಲ್‌, ಮುದೂರು ಡೆಂಗ್ಯೂ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ಕೋವಿಡ್‌ನಿಂದ ಮೃತಪಟ್ಟವರ ಮನೆಯವರಿಗೆ ಪರಿಹಾರ ವಿತರಣೆ ನಡೆದಿಲ್ಲ ಎಂದರು.

ತಹಶೀಲ್ದಾರ್‌ ಕಿರಣ್‌ ಗೌರಯ್ಯ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಎನ್‌., ತಾಲೂಕು ಆರೋಗ್ಯಾಧಿಕಾರಿ ಡಾ| ರಾಜೇಶ್ವರೀ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್‌, ಜಿ.ಪಂ. ಎಇಇ ರಾಜ್‌ಕುಮಾರ್‌, ಗಣಿ ಇಲಾಖೆಯ ಸಂಧ್ಯಾ, ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ| ಸೂರ್ಯನಾರಾಯಣ ಉಪಾಧ್ಯ, ವಲಯ ಅರಣ್ಯಾಧಿಕಾರಿಗಳು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಕೋಟಿ ರೂ. ಮಂಜೂರು

ಕೊಲ್ಲೂರು ಪ್ರವಾಸಿ ಮಂದಿರ ಉದ್ಘಾಟನೆಗೆ ಸಜ್ಜಾಗಿದ್ದು ಇನ್ನೊಂದು ಪ್ರವಾಸಿ ಮಂದಿರ ನಿರ್ಮಾಣಕ್ಕಾಗಿ 9.8 ಕೋ.ರೂ. ಮಂಜೂರಾಗಿದೆ. ರಸ್ತೆಗೆ 12.9 ಕೋ. ರೂ. ಮಂಜೂರಾಗಿದೆ. ಜಾಡಿ ರಸ್ತೆಗೆ 60 ಲಕ್ಷ ರೂ. ಮಂಜೂರಾಗಿದೆ. ಒಟ್ಟು ಬೈಂದೂರು ಕ್ಷೇತ್ರದ ರಸ್ತೆಗಳಿಗೆ 60 ಕೋ.ರೂ. ಮಂಜೂರಾಗಲಿದೆ ಎಂದು ಶಾಸಕರು ಹೇಳಿದರು. ಜಾಡಿ ರಸ್ತೆ ಕೆಲವೇ ದಿನದಲ್ಲಿ ಕಾಂಕ್ರೀಟ್‌ ಕಾಮಗಾರಿ ಆರಂಭವಾಗಲಿದೆ. ಕೊಲ್ಲೂರು ಕಾಮಗಾರಿ ಟೆಂಡರ್‌ ಹಂತದಲ್ಲಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದುರ್ಗಾದಾಸ್‌ ಹೇಳಿದರು. ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವಂತೆ ಕಳಪೆ ಕಾಮಗಾರಿಗಳಿಗೆ ಬಿಲ್‌ ಪಾವತಿಸದಂತೆ ಶಾಸಕರು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next