Advertisement

ಸಹ ಶಿಕ್ಷಕರ ವರ್ಗಾವಣೆ: ತಡೆಯಾಜ್ಞೆ

11:24 PM Feb 28, 2022 | Team Udayavani |

ಬೆಂಗಳೂರು: ಪ್ರಾಥಮಿಕ ಶಾಲಾ ಸಹ ಶಿಕ್ಷಕರ ವರ್ಗಾವಣೆಗೆ ಕೆಎಟಿ ತಡೆಯಾಜ್ಞೆ ನೀಡಿರುವುದರಿಂದ ಮತ್ತೆ ಒಂದು ರೀತಿಯ ಅನಿಶ್ಚಿತತೆ ಮೂಡಿದಂತಾಗಿದೆ.

Advertisement

ವರ್ಗಾವಣೆ ಪ್ರಕ್ರಿಯೆಗೆ ತಡೆ ತಂದಿರುವುದರಿಂದ ಪ್ರಾಥಮಿಕ ಶಾಲೆಯ ಸುಮಾರು 500ರಿಂದ 600 ಮಂದಿಗೆ ಸಮಸ್ಯೆಯುಂಟಾಗಲಿದ್ದು ವರ್ಗಾವಣೆ ಆದೇಶಕ್ಕಾಗಿ ಮತ್ತಷ್ಟು ದಿನ ಕಾಯುವಂತಾಗಿದೆ.

ಕಳೆದ ಎರಡು ವರ್ಷಗಳಿಂದ ವರ್ಗಾವಣೆ ಆದೇಶಕ್ಕಾಗಿ ಕಾಯುತ್ತಿದ್ದು, ಇದೀಗ ಪ್ರಕ್ರಿಯೆ ಪ್ರಾರಂಭವಾಗಿ ಮುಗಿಯಲಿದೆ ಎನ್ನುವಷ್ಟರಲ್ಲಿ ತಡೆಯಾಜ್ಞೆ ನೀಡಿರುವುದರಿಂದ ಶೈಕ್ಷಣಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪರೀಕ್ಷಾ ಸಮಯವಾದ್ದರಿಂದ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಲು ತೊಡಕುಂಟಾಗುತ್ತಿದೆ.ಸರ್ಕಾರವು ಆದಷ್ಟು ಬೇಗ ಪ್ರಕ್ರಿಯೆ ಮುಗಿಸಿದರೆ, ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರು ಹೇಳುತ್ತಾರೆ.

ನಿಯಮಗಳ ಪ್ರಕಾರ ಸಾಮಾನ್ಯವಾಗಿ ಶಿಕ್ಷಕರ ವರ್ಗಾವಣೆಯನ್ನು ಏಪ್ರಿಲ್‌ನಿಂದ ಜೂನ್‌ ತಿಂಗಳಿನ ಬೇಸಿಗೆ ರಜೆ ಅವಧಿಯಲ್ಲಿ ಪ್ರಕ್ರಿಯೆ ನಡೆಸಬೇಕು. ಆದರೆ, ಕಳೆದ ಎರಡು ವರ್ಷದಿಂದ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಕೊರೊನಾದಿಂದ ಶಾಲೆಗಳು ನಡೆಯದಿರುವ ವೇಳೆಯೂ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

Advertisement

ಇದೀಗ ಪರೀಕ್ಷಾ ಸಮಯದಲ್ಲಿ ನಡೆಸುತ್ತಿರುವುದರಿಂದ ಮಕ್ಕಳ ಕಲಿಕೆ ಮೇರೆ ಪರಿಣಾಮ ಬೀರಲಿದೆ. ಹೆಚ್ಚಿನ ಶಿಕ್ಷಕರು ವರ್ಗಾವಣೆಗೆ ಆದ್ಯತೆ ನೀಡುತ್ತಾರೆಯೇ ಹೊರತು ಶಿಕ್ಷಕರ ಕಲಿಕೆಗೆ ಮಹತ್ವ ನೀಡುವುದಿಲ್ಲ. ಈ ವೇಳೆ ಪ್ರಕ್ರಿಯೆ ನಡೆಸುವುದರಿಂದ ಶಿಕ್ಷಕರ ಗಮನ ವರ್ಗಾವಣೆ ಕಡೆಯೇ ಇರುತ್ತದೆ.

ಈ ನಿಟ್ಟಿನಲ್ಲಿ ಸರ್ಕಾರ ಸಾಧ್ಯವಾದಷ್ಟು ಬೇಗ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಯಲ್ಲಿರುವ ವರ್ಗಾವಣೆ ಪ್ರಕ್ರಿಯೆ ಕುರಿತ ಅರ್ಜಿಯನ್ನು ತೆರವುಗೊಳಿಸಬೇಕು ಎಂದು ತಿಳಿಸುತ್ತಾರೆ.

1-5ನೇ ತರಗತಿಗೆ ಬೋಧನೆ ಮಾಡುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1-7ನೇ ತರಗತಿ ವರೆಗೆ ಬೋಧನೆ ಮಾಡುತ್ತಾರೆ ಎಂದು ತಿಳಿಸಿರುವ ಸರ್ಕಾರವು, 6-8ನೇ ತರಗತಿ ಬೋಧಿಸುವ ಪದವೀಧರ ಶಿಕ್ಷಕರಿಗೆ ವರ್ಗಾವಣೆಯಲ್ಲಿ ಅವಕಾಶ ಮಾಡಿಕೊಟ್ಟಿಲ್ಲ. ಈ ನಿಯಮವು ತಾರತಮ್ಯದಿಂದ ಕೂಡಿದೆ ತಮಗೂ ವರ್ಗಾವಣೆಯಲ್ಲಿ ಅವಕಾಶ ಕಲ್ಪಿಸಬೇಕು ಎಂಬುದು ಪದವೀಧರ ಶಿಕ್ಷಕರ ಮನವಿಯಾಗಿದೆ. ಈ ವಿಚಾರವಾಗಿಯೇ ಕೆಎಟಿ ಅಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

ಪ್ರಕರಣವು ಕೆಎಟಿ ಅಲ್ಲಿ ಇರುವುದರಿಂದ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ. ಆದರೆ, ಅರ್ಜಿ ತೆರವುಗೊಳಿಸಿ ವರ್ಗಾವಣೆ ಪ್ರಕ್ರಿಯೆ ಮುಂದುವರಿಸಲು ಸರ್ಕಾರವು ಪ್ರಯತ್ನಿಸುತ್ತಿದೆ.
– ಡಾ. ಆರ್‌. ವಿಶಾಲ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next