Advertisement

ಜಿಲ್ಲೆಯಲ್ಲಿ ಆಗ್ನೇಯ ಶಿಕ್ಷಕರ ಉಪ ಚುನಾವಣೆ ರಂಗು

02:59 PM Jan 17, 2017 | Team Udayavani |

ಚಿಕ್ಕಬಳ್ಳಾಪುರ: ಕಳೆದೊಂದು ತಿಂಗಳಿನಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಿಂದ ಜಿಲ್ಲೆಯಲ್ಲಿ ರಂಗೇರಿದ್ದ ರಾಜಕೀಯ ಚಟುವಟಿಕೆಗಳು ಈಗ ಎಪಿಎಂಸಿ ಚುನಾವಣೆ ಮುಗಿದ ಬಳಿಕ ಮತ್ತೂಂದು ಚುನಾವಣೆಗೆ  ಜಿಲ್ಲೆ ಅಣಿಯಾಗುತ್ತಿದೆ.

Advertisement

ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಫೆ.3 ರಂದು ಉಪ ಚುನಾವಣೆ ನಡೆಸಲು ಈಗಾಗಲೇ ಚುನಾವಣಾ ಆಯೋಗವು ವೇಳಾ ಪಟ್ಟಿ ಪ್ರಕಟಿಸಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯ ಹಾಲಿ, ಮಾಜಿ ಶಾಸಕರು ಅಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಸಿದ್ಧತೆಯಲ್ಲಿ ತೊಡಗಿದ್ದಾರೆ.

ಎಪಿಎಂಸಿ ಚುನಾವಣೆಯಲ್ಲಿ ಜಿಲ್ಲಾದ್ಯಂತ ತನ್ನ ಪಾರುಪತ್ಯ ಸಾಧಿಸಿರುವ ಕಾಂಗ್ರೆಸ್‌ ಪಕ್ಷವು ಆಗ್ನೇಯ ಶಿಕ್ಷಕರ ಚುನಾವಣೆ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ತಂತ್ರ ರೂಪಿಸುತ್ತಿದ್ದು, ಈ ಹಿಂದೆ ಕ್ಷೇತ್ರದಲ್ಲಿ ಗೆದ್ದು ಬಂದು ಸದ್ಯ ಹೆಬ್ಟಾಳ ಶಾಸಕರಾಗಿರುವ ವೈ.ಎ.ನಾರಾಯಣಸ್ವಾಮಿ ಅವರನ್ನು ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆಗೆ ಉಸ್ತುವಾರಿ ಮಾಡಲಾಗಿದೆ. ಹಾಗಾಗಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ಗೆ ಪ್ರತಿಷ್ಠೆಯಾಗಲಿದೆ.

ಬರ ಮರೆತ ಜನಪ್ರತಿನಿಧಿಗಳು: ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಗುಂಗಿನಲ್ಲಿರುವ ಜಿಲ್ಲೆಯ ಜನಪ್ರತಿನಿಧಿಗಳು ಬರವನ್ನು ಮರೆತು ಬಿಟ್ಟಿದ್ದಾರೆ. ಜನತೆಗೆ ಕುಡಿಯುವ ನೀರು, ಜಾನುವಾರುಗಳ ಮೇವು ಮತ್ತಿತರ ಬರ ಪರಿಹಾರ ಕೈಗೊಳ್ಳುವ  ಹೊಣೆ ಹೊತ್ತಿದ್ದ ಜನಪ್ರತಿನಿಧಿಗಳು ಆಗ್ನೇಯ ಶಿಕ್ಷಕರ ಚುನಾವಣೆಯಲ್ಲಿ ತೊಡಗಿದ್ದಾರೆಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಬರ ಪರಿಹಾರಕ್ಕೆ ನೀತಿ ಸಂಹಿತೆ ಅಡ್ಡಿ: ಆಗ್ನೇಯ ಶಿಕ್ಷಕರ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯು ಜಿಲ್ಲೆಯಲ್ಲಿ ಹಲವು ಬರ ಪರಿಹಾರ ಕ್ರಮ ಕೈಗೊಳ್ಳಲು ಅಡ್ಡಿಯಾಗಿದೆಯೆಂಬ ಆರೋಪ ಕೇಳಿ ಬರುತ್ತಿದೆ. 

Advertisement

ಈ ಹಿಂದೆ ಬಿಜೆಪಿ ವಶದಲ್ಲಿದ್ದ ಆಗ್ನೇಯ ಶಿಕ್ಷಕ ಕ್ಷೇತ್ರವನ್ನು ಆಡಳಿತರೂಢ ಕಾಂಗ್ರೆಸ್‌ ತನ್ನ ತೆಕ್ಕಗೆ ತೆಗೆದುಕೊಳ್ಳಲು ಈ ಬಾರಿ ತಂತ್ರ ರೂಪಿಸುತ್ತಿದೆ. ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ತನ್ನ ಅಭ್ಯರ್ಥಿ ಪ್ರಕಟಿಸದೆ ಕಾಂಗ್ರೆಸ್‌ ಕುತೂಹಲ ಮೂಡಿಸಿದೆ. ಕಳೆದ ಭಾನುವಾರ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸೂಕ್ತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಾಗಿ ತಿಳಿಸಿದ್ದರು.

ರಾಯಲ್‌ ರಾಮಕೃಷ್ಣಾರೆಡ್ಡಿ ನಾಮಪತ್ರ ಸಲ್ಲಿಕೆ: ಜಿಲ್ಲೆಯವರೇ ಆದ ಚಿಂತಾಮಣಿ ನಗರದ ರಾಯಲ್‌ ವಿದ್ಯಾಸಂಸ್ಥೆ ಅಧ್ಯಕ್ಷ ರಾಮಕೃಷ್ಣಾರೆಡ್ಡಿ ಸೋಮವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ಬೆಂಗಳೂರಿಗೆ ತೆರಳಿ ಆಗ್ನೇಯ ಶಿಕ್ಷಕರ ಉಪ ಚುನಾವಣೆಯ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲೆಯ ಪ್ರಾದೇಶಿಕ ಅಭಿವೃದ್ದಿ ಆಯುಕ್ತರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಕಾಂಗ್ರೆಸ್‌ ಟಿಕೆಟ್‌ ಪಡೆಯುವ ಆಕಾಂಕ್ಷೆ ಹೊಂದಿರುವ ರಾಯಲ್‌ ರಾಮಕೃಷ್ಣಾರೆಡ್ಡಿ ಪಕ್ಷದ ಬಿ.ಪಾರಂ ಪಡೆಯಲು ಕರಸತ್ತು ಆರಂಭಿಸಿದ್ದಾರೆ. ಟಿಕೆಟ್‌ ಕೊಡದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ.  ಕಳೆದ ಏಳೆಂಟು ವರ್ಷಗಳಿಂದ ಶಿಕ್ಷಕರೊಂದಿಗೆ ಸಂಪರ್ಕ ಹೊಂದಿ ಅವರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆಂದು ರಾಮಕೃಷ್ಣಾರೆಡ್ಡಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next