Advertisement

ಕ್ರೀಡಾ ಕ್ಷೇತ್ರದಲ್ಲಿ ಶಿಕ್ಷಕನ ಸಾಧನೆ

10:27 AM Apr 08, 2017 | |

ಬಿಡುವಿಲ್ಲದ ಕಾರ್ಯದೊತ್ತಡದ ನಡುವೆಯೂ ಸತತ ಅಭ್ಯಾಸ ನಡೆಸಿ ರಾಜ್ಯ, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸ್ಪರ್ಧಿಸಿರುವ ಶಿಕ್ಷಕ ರಘುಪತಿ ಸಾಧನೆ ಪ್ರಶಂಸನೀಯ.

Advertisement

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಬೆಟ್ಟಹಳ್ಳಿ ಕಾಲೋನಿಯ ಏಕೋಪಾಧ್ಯಾಯ ಶಿಕ್ಷಕ ರಘುಪತಿ ಶಾಲೆಯ ಮುಖ್ಯ ಶಿಕ್ಷಕರಾಗಿದ್ದಾರೆ. ಜತೆಗೆ ತನಗೆ ಸಿಗುವ ಅಲ್ಪ ಬಿಡುವಿನ ಸಮಯವನ್ನೇ ಸದುಪಯೋಗಪಡಿಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ರಾಜ್ಯ, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಗೆದ್ದು, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿಯೂ ಸ್ಪರ್ಧಿಸಿದ್ದಾರೆ. ಇವರು ಬಾಲ್ಯದ ದಿನಗಳಲ್ಲಿಯೂ ಕ್ರೀಡಾ ಉತ್ಸಾಹಿಯಾಗಿದ್ದು, ಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ಅನೇಕ ಪದಕ ಪಡೆದಿದ್ದಾರೆ. ಶಿಕ್ಷಕ ವೃತ್ತಿಗೆ ಕಾಲಿಟ್ಟ ಮೇಲೆ ಸಿವಿಲ್‌ ಸರ್ವಿಸ್‌ ಹಾಗೂ ಮಾಸ್ಟರ್‌ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಇತ್ತೀಚೆಗೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಮಾಸ್ಟರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ನಡೆದ 400 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದು, ಸೆಪ್ಟೆಂಬರ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಾಸ್ಟರ್‌ ಅಥ್ಲೆಟಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

2016ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಅಖೀಲ ಭಾರತ ನಾಗರಿಕ ಸೇವಾ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದು ಇವರ ಕ್ರೀಡಾ ಸಾಧನೆಗೆ ಸಾಕ್ಷಿಯಾಗಿದೆ. ಹೀಗೆ ಅಪೂರ್ವ ಕ್ರೀಡಾ ಸಾಧನೆಯನ್ನು ಮಾಡಿ ಜಿಲ್ಲೆಯ ಘನತೆಯನ್ನು ಹೆಚ್ಚಿಸಿದ್ದಾರೆ. 

ಶ್ರಮವಿದ್ದರೆ ಫ‌ಲ
ಏನಾದರೂ ಸಾಧನೆ ಮಾಡಬಹುದೆಂಬ ಹಂಬಲವಿದ್ದರೆ ತಾವೇ ಗುರಿಯೆಡೆಗೆ ತಲುಪಬಹುದು ಎಂಬುದಕ್ಕೆ ಶಿಕ್ಷಕ ರಘುಪತಿಯೇ ಉದಾಹರಣೆಯಾಗಿದ್ದಾರೆ. ಯಾವುದೇ ತರಬೇತಿ ಹಾಗೂ ಬೆಂಬಲವಿಲ್ಲದೇ ಸ್ವತಃ ಅಭ್ಯಾಸ ನಡೆಸಿ ಇಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದುನಿಂತಿದ್ದಾರೆ. ದಿನನಿತ್ಯವೂ ಎರಡು ಗಂಟೆಗಳ ಅಭ್ಯಾಸ ಮಾಡುವ ಈ ಶಿಕ್ಷಕ ಶೈಕ್ಷಣಿಕ ಹಾಗೂ ಪರಿಸರ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರ ಸಾಧನೆಗೆ ಮೆಚ್ಚಿ ಅನೇಕ ಸಂಘಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

Advertisement

ರಾಜ್ಯಹಂತದ ಕ್ರೀಡಾಕೂಟಗಳಲ್ಲಿ ಸಾಧನೆ
2009ರಲ್ಲಿ ಮೈಸೂರು, 2011ರಲ್ಲಿ ಚಿತ್ರದುರ್ಗ, 2014ರಲ್ಲಿ ಬೆಂಗಳೂರು ಹಾಗೂ 2015ರಲ್ಲಿ ಮಂಡ್ಯದಲ್ಲಿ ನಡೆದ ಕರ್ನಾಟಕ ರಾಜ್ಯ ಸಿವಿಲ್‌ ಸರ್ವೀಸ್‌ ರಾಜ್ಯಮಟ್ಟದ ಕ್ರೀಡಾ ಕೂಟದಲ್ಲಿ 400 ಮೀ. ಹರ್ಡಲ್ಸ್‌ ಹಾಗೂ 4×400 ಮೀ. ರಿಲೇಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಮಾಸ್ಟರ್‌ ಅಥ್ಲೆಟಿಕ್ಸ್‌ನಲ್ಲೂ ಮೂರು ಚಿನ್ನ ಹಾಗೂ ಒಂದು ಕಂಚಿನ ಪದಕ ಗೆದ್ದಿದ್ದಾರೆ.

ಸೋಲಿನಿಂದ ಬೇಸರಗೊಳ್ಳದೆ ಸತತ ಶ್ರಮಪಟ್ಟು ನಿರಂತರವಾಗಿ ಅಭ್ಯಾಸ ಮಾಡಿದರೆ ಯಾರು ಬೇಕಾದರೂ ಗೆಲುವು ಪಡೆಯಬಹುದು. ಇದಕ್ಕೆ ಬೇಕಾಗಿರುವುದು ಸಕಾರಾತ್ಮಕ ಮನೋಭಾವ ಹಾಗೂ ಆಸಕ್ತಿಯಷ್ಟೆ. ಹೆಚ್ಚಿನ ಶ್ರಮವಹಿಸಿ ಮತ್ತಷ್ಟು ಸಾಧನೆ ಮಾಡುವ ಹಂಬಲ ನನ್ನಲ್ಲಿದೆ.
ರಘುಪತಿ, ಶಿಕ್ಷಕ, ಕುದೂರು.

ಕೆ.ಎಸ್‌.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next