Advertisement

ಮಕ್ಕಳಿಗೆ ಸಂಸ್ಕೃತಿ-ಸಂಸ್ಕಾರ ಕಲಿಸಿ

09:37 PM Sep 15, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಇಂದಿನ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವ ಕೆಲಸ ಆಗಬೇಕಿದೆ. ಪೋಷಕರು ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚನೆ ಮಾಡಬೇಕು. ಮಕ್ಕಳನ್ನು ಸಾಂಸ್ಕೃತಿಕವಾಗಿ ಬೆಳೆಸಲು ಪಣ ತೊಡಬೇಕೆಂದು ನಿಡುಮಾಮಿಡಿ ಮಾನವ ಧರ್ಮ ಪೀಠದ ಆಡಳಿತಾಧಿಕಾರಿ ಡಾ.ಕೆ.ಶಿವಜ್ಯೋತಿ ತಿಳಿಸಿದರು.

Advertisement

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಯಶ್ವಂತ್‌ ಅಕಾಡೆಮಿ ಆಫ್ ಕಲ್ಚರಲ್‌ ಫಿಲಂ ಸೈನ್ಸ್‌ ಆಂಡ್‌ ರೀಸರ್ಚ್‌ ಇನ್ಸ್‌ಟ್ಯೂಟ್‌ ಹಾಗೂ ಯಶ್ವಂತ್‌ ಸ್ಕೂಲ್‌ ಆಫ್ ಡ್ಯಾನ್ಸ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೃಷ್ಣ, ರಾಧೆಯರ ವೇಷಭೂಷಣ ಸ್ಪರ್ಧೆ ಹಾಗೂ ಹಿರಿಯ ಕಲಾವಿದರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಕೃಷ್ಣನ ಬಗ್ಗೆ ಬೆಳಕು ಚೆಲ್ಲಲಿ: ನಮ್ಮ ದೇಶಿಯ ಪರಂಪರೆಯ ಭಾಗವಾಗಿರುವ ಕಲೆ, ಸಂಸ್ಕೃತಿಯನ್ನು ಮರೆಯುತ್ತಿರುವ ಪರಿಣಾಮ ಇಂದು ಜನರಲ್ಲಿ ಸಮಾಧಾನ ಇಲ್ಲವಾಗಿದೆ. ಸಮಾಧಾನವನ್ನು ಹಣ ಕೊಟ್ಟು ನೋಡುವ ಪರಿಸ್ಥಿತಿ ಇಂದು ಸಮಾಜದಲ್ಲಿ ನಿರ್ಮಾಣವಾಗಿದೆ. ಸತ್ಯ, ಧರ್ಮ, ನ್ಯಾಯದ ಪರವಾಗಿ ಹೋರಾಡಿದ ಶ್ರೀಕೃಷ್ಣನ ಜೀವನ ಬಗ್ಗೆ ಇಂದಿನ ವಿದ್ಯಾರ್ಥಿ, ಯುವ ಪೀಳಿಗೆಯಲ್ಲಿ ಬೆಳಕು ಚೆಲ್ಲುವ ಅಗತ್ಯವಿದೆ ಎಂದರು.

ಸಮಸ್ಯೆಗಳಿಗೆ ನಮ್ಮಲ್ಲಿಯೇ ಪರಿಹಾರ: ಬದುಕಿನಲ್ಲಿ ಎದುರಾಗುವ ಯಾವುದೇ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಬೇಕು. ದೇವರ ಮೇಲೆ ನಂಬಿಕೆ, ಭಕ್ತಿ, ಶ್ರದ್ಧೆ ಇರಬೇಕು. ಅದು ಮೌಡ್ಯದಿಂದ ಕೂಡಿಬಾರದು. ಸಮಸ್ಯೆಗಳಿಗೆ ನಮ್ಮಲ್ಲಿಯೇ ಪರಿಹಾರ ಇರುತ್ತದೆ. ಅದನ್ನು ಹುಡುಕುವ ಕೆಲಸ ಮಾಡಬೇಕು. ಪ್ರತಿಯೊಬ್ಬರು ತಾಯಿ ಹೃದಯವನ್ನು ಹೊಂದಬೇಕೆಂದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಮನುಷ್ಯನನ್ನು ಒತ್ತಡದಿಂದ ಪಾರು ಮಾಡಿ ಮನಸ್ಸನ್ನು ಹಗುರಗೊಳಿಸುತ್ತವೆ. ಇದರಿಂದ ಮನುಷ್ಯ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.

ಸಂಸ್ಕಾರ ಬೆಳೆಸಿ: ಸಹಾಯಕ ಚಿತ್ರ ನಿರ್ದೇಶಕ ಕೃಷ್ಣ ಮಾತನಾಡಿ, ಕಲಾವಿದರು ಕೇವಲ ಮನೆಗೆ ಸೀಮಿತ ಆಗಬಾರದು. ಇಂತಹ ವೇದಿಕೆಗಳನ್ನು ಬಳಸಿಕೊಂಡು ಪ್ರತಿಭೆ ಪ್ರದರ್ಶಿಸಬೇಕು. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಸಾಂಸ್ಕೃತಿಕವಾಗಿ ಬೆಳೆದರೆ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಇದರಿಂದ ಅವರ ಭವಿಷ್ಯ ಕೂಡ ಉಜ್ವಲಗೊಳ್ಳುತ್ತದೆ ಎಂದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಂಸ್ಕೃತಿಕ ರಂಗದಲ್ಲಿಯು ಸಾಕಷ್ಟು ಪೈಪೋಟಿ ಇದೆ. ಆದರೆ ಪ್ರತಿಭೆ ಇದ್ದವರಿಗೆ ಅವಕಾಶಗಳು ಸಿಗುತ್ತವೆ. ಆದ್ದರಿಂದ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಪೋಷಕರ ಬೆಂಬಲ, ಸಹಕಾರ ಮುಖ್ಯ ಎಂದರು.

Advertisement

ಪ್ರತಿಭೆ ಪ್ರೋತ್ಸಾಹಿಸಿ: ಕೆಪಿಸಿಸಿ ಮಹಿಳಾ ವಿಭಾಗದ ನಾಯಕಿ ಮಮತ ಮೂರ್ತಿ ಮಾತನಾಡಿ, ಮಕ್ಕಳನ್ನು ಇಂದು ಎಲ್ಲಾ ತರದಲ್ಲಿ ಬೆಳೆಸಬೇಕು. ಅವರಿಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಅವರನ್ನು ತೊಡಗಿಸಿ ಪ್ರೋತ್ಸಾಹಿಸಿದರೆ ಉತ್ತಮ ಕಲಾವಿದರಾಗಿ ರೂಪುಗೊಳ್ಳುತ್ತಾರೆ. ಸಾಂಸ್ಕೃತಿಕವಾಗಿ ಬೆಳೆದವರು ಇಂದು ಉನ್ನತ ಅವಕಾಶಗಳನ್ನು ಪಡೆದುಕೊಂಡು ತಮ್ಮ ಬದುಕನ್ನು ಸಾರ್ಥಕಪಡಿಸಿಕೊಂಡಿದ್ದಾರೆ. ಮಕ್ಕಳ ಪ್ರತಿಭೆ ಗುರುತಿಸುವ ಕೆಲಸ ಆಗಬೇಕೆಂದರು.

ಈ ಸಂದರ್ಭದಲ್ಲಿ ಯಶ್ವಂತ್‌ ಅಕಾಡೆಮಿ ಆಫ್ ಕಲ್ಚರಲ್‌ ಫಿಲಂ ಸೈನ್ಸ್‌ ಆಂಡ್‌ ರೀಸರ್ಚ್‌ ಇನ್ಸ್‌ಟ್ಯೂಟ್‌ ಹಾಗೂ ಯಶ್ವಂತ್‌ ಸ್ಕೂಲ್‌ ಆಫ್ ಡ್ಯಾನ್ಸ್‌ ಅಧ್ಯಕ್ಷ ಶ್ರೀನಿವಾಸ್‌, ಕಾರ್ಯದರ್ಶಿ ರಾಮಲಕ್ಷ್ಮಮ್ಮ, ನಿರ್ದೇಶಕರಾದ ಎನ್‌.ನಾರಾಯಣಸ್ವಾಮಿ, ಮುಖಂಡರಾದ ಗೋವಿಂದಪ್ಪ, ಮುನಿಸ್ವಾಮಿ, ನಸರುದ್ದೀನ್‌, ನರಸಿಂಹಮೂರ್ತಿ ಉಪಸ್ಥಿತರಿದ್ದರು.

ಗಮನ ಸೆಳೆದ ಕೃಷ್ಣ-ರಾಧೆಯರು: ಕಾರ್ಯಕ್ರಮದಲ್ಲಿ ನೂರಾರು ಪುಟಾಣಿ ಮಕ್ಕಳು ಶ್ರೀ ಕೃಷ್ಣ ಹಾಗೂ ರಾಧೆಯರ ವೇಷಭೂಷಣಗಳನ್ನು ತೊಟ್ಟು ಪ್ರತಿಭೆ ಪ್ರದರ್ಶಿಸಿ ಗಮನ ಸೆಳೆದರು. ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಈ ವೇಳೆ ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಕಲಾವಿದರನ್ನು ಗುರುತಿಸಿ ಯಶ್ವಂತ್‌ ಅಕಾಡೆಮಿ ಆಫ್ ಕಲ್ಚರಲ್‌ ಫಿಲಂ ಸೈನ್ಸ್‌ ಅಂಡ್‌ ರಿಸರ್ಚ್‌ ಇನ್ಸ್‌ಟ್ಯೂಟ್‌ ಹಾಗೂ ಯಶ್ವಂತ್‌ ಸ್ಕೂಲ್‌ ಆಫ್ ಡ್ಯಾನ್ಸ್‌ ವತಿಯಿಂದ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next