Advertisement

ಚಹಾಗೂ ಉಂಟು ಚೆಂದದ ಹಿನ್ನೆಲೆ

03:45 AM Feb 16, 2017 | Team Udayavani |

ಅಕಸ್ಮಾತ್‌ ನೀರಿಗೆ ಬಿದ್ದ ಎಲೆಯಿಂದ ಟೀ ತಯಾರಾಯಿತು

Advertisement

ಪೆರ್ಫೆಕ್ಟಾಗಿ ಟೀ  ಮಾಡಲು ಪ್ರತಿಯೊಬ್ಬರದೂ ಅವರದೇ ಆದ ರೀತಿ- ರಿವಾಜು, ನಿರ್ದಿಷ್ಟ ವಿಧಾನಗಳಿರುತ್ತವೆ. ಆದರೆ ಜಗತ್ತಿನ ಮೊತ್ತ ಮೊದಲ ಟೀ ತಯಾರಾಗಿದ್ದು ಅಕಸ್ಮಾತ್ತಾಗಿ ಎಂದರೆ ನಂಬುತ್ತೀರಾ?

ಟೀ ಕಾಫಿಯಿಲ್ಲದ ಪ್ರಪಂಚವನ್ನು ಕಲ್ಪಿಸಿಕೊಳ್ಳಬಲ್ಲಿರಾ?
ದಿನ ಬೆಳಗಾದರೆ ನಿದ್ದೆಯಿಂದೆದ್ದು, ಅಂದಿನ ದಿನಪತ್ರಿಕೆಯನ್ನು ಓದುವ ಮುನ್ನ ಕೈಯಲ್ಲಿ ಟೀ ಅಥವಾ ಕಾಫಿ ಇರಲೇಬೇಕು. ಸಂಜೆ ನಾಲ್ಕಾಗುತ್ತಲೇ ತಾವು ಕಚೇರಿಯಲ್ಲಿ ಇರಲಿ, ಮನೆಯಲ್ಲಿರಲಿ ಮನಸ್ಸು ಉಲ್ಲಸಿತಗೊಳ್ಳಲು ಟೀ ಕಾಫಿ ಬೇಕೇ ಬೇಕು. ಇವಿಲ್ಲದೆ ನಮ್ಮಲ್ಲಿ ಬಹುತೇಕರ ದಿನ ಪ್ರಾರಂಭಗೊಳ್ಳುವುದೂ ಇಲ್ಲ, ಮುಗಿಯುವುದೂ ಇಲ್ಲ. ಅಷ್ಟರಮಟ್ಟಿಗೆ ಟೀ ಕಾಫಿ ಎನ್ನುವ ಚಟ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಇದು ನಮ್ಮಲ್ಲಿ ಮಾತ್ರವೇ ಇಲ್ಲ, ಜಗತ್ತಿನಾದ್ಯಂತ ಹರಡಿಕೊಂಡಿದೆ. ಎಲ್ಲಾ ದೇಶಗಳಲ್ಲಿ ಅವರವರ ಸಂಸ್ಕೃತಿ, ಆಚಾರ ವಿಚಾರಗಳಿಗೆ ಅನುಗುಣವಾಗಿ ಈ ಪೇಯವನ್ನು ತಯಾರಿಸುತ್ತಾರೆ. ಅಂದರೆ ನೀವು ಪ್ರಪಂಚದ ಯಾವುದೇ ಮೂಲೆಗೆ ಹೋದರೂ ವಿಭಿನ್ನ ಸ್ವಾದದ ಟೀ ಕುಡಿಯಬಹುದು. ಅದರ ರುಚಿ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತಾ ಹೋಗುತ್ತದೆ.

ಜಗತ್ತಿನಲ್ಲಿ ಅತಿ ಹೆಚ್ಚು ಟೀ ರಫ್ತು ಮಾಡುವ ಬೆರಳೆಣಿಕೆಯಷ್ಟು ರಾಷ್ಟ್ರಗಳಲ್ಲಿ ಭಾರತ ಒಂದಾಗಿರಬಹುದು. ಭಾರತದ ಟೀ ಇತಿಹಾಸ ನಮ್ಮನ್ನು ಪುರಾತನ ಕಾಲಕ್ಕೇ ಕೊಂಡೊಯ್ಯಬಹುದು. ಆದರೆ ಅಸಲಿಗೆ ಈ ಟೀ ಎಂಬ ಪೇಯ ಹುಟ್ಟಿದ್ದು ಚೀನಾದಲ್ಲಿ. ಅದೂ ಆಕಸ್ಮಿಕವಾಗಿ ಎಂದರೆ ನಂಬುವಿರಾ? ಆ ಕತೆ ಹೀಗೆ ಸಾಗುತ್ತದೆ. ಕ್ರಿಸ್ತಪೂರ್ವ 2700ವೇ ಇಸವಿಯಲ್ಲಿ ಚೀನಾದಲ್ಲಿ ಶೆನ್ನಾಂಗ್‌ ಎಂಬೊಬ್ಬ ರಾಜನಿದ್ದ. ಅಲ್ಲಿ ಶೆನ್ನಾಂಗ್‌ನನ್ನು ಚೀನಾದ ಓಷಧ ಮತ್ತು ಕೃಷಿಯ ಪಿತಾಮಹ ಎಂದು ಬಣ್ಣಿಸುತ್ತಾರೆ. ತನ್ನ ಜೀವಿತಕಾಲವನ್ನು ಸಸ್ಯಗಳ ಅಧ್ಯಯನಕ್ಕಾಗಿ ಮುಡಿಪಾಗಿಟ್ಟಿದ್ದ ಆತ.

ಒಂದು ದಿನ ಅರಮನೆ ಹೊರಗಡೆ ಅಧ್ಯಯನದ ನಡೆಸುತ್ತಿದ್ದಾಗ, ಆವರಣದಲ್ಲಿ ಕುಡಿಯಲು ಬಿಸಿನೀರು ಕಾಯಿಸುತ್ತಿದ್ದ. ವಾತಾವರಣ ಶೀತದಿಂದ ಕೂಡಿತ್ತು. ಅದಕ್ಕೇ ದೇಹಕ್ಕೆ ಮತ್ತು ಮನಸ್ಸಿಗೆ ಹಿತವಾಗಲೆಂದು ನೀರು ಬಿಸಿ ಮಾಡುತ್ತಿದ್ದ ಶೆನ್ನಾಂಗ್‌. ಅಷ್ಟರಲ್ಲಿ ಜೋರಾಗಿ ಗಾಳಿ ಬೀಸಿತ್ತು. ಅದರೊಂದಿಗೆ ಅದೆಲ್ಲಿಂದಲೋ ಎಲೆಯೊಂದು ಹಾರಿಕೊಂಡು ಬಂದು ಬಿಸಿನೀರಿನ ಪಾತ್ರೆಯೊಳಗೆ ಬಿದ್ದಿತು. ಇದು ಶೆನ್ನಾಂಗ್‌ಗೆ ತಿಳಿಯಲಿಲ್ಲ. ಪಾತ್ರೆಯೊಳಗೆ ಬಿದ್ದ ಎಲೆ ಕುದಿಯುತ್ತಾ ನೀರಿನ ಬಣ್ಣವನ್ನು ಬದಲಾಯಿಸಿತ್ತು. ಈಗ ಶೆನ್ನಾಂಗ್‌ ಗಮನ ಎಲೆಯ ಮೇಲೆ ಹೋಯಿತು. ಛೆ ನೀರು ಕಲುಷಿತಗೊಂಡಿತಲ್ಲಾ ಎಂದು ಬೇಜಾರುಪಟ್ಟುಕೊಂಡು ಪಾತ್ರೆಯಲ್ಲಿದ್ದ ನೀರನ್ನು ಹೊರಕ್ಕೆ ಚೆಲ್ಲಲು ಅಣಿಯಾಗುತ್ತಿದ್ದಂತೆ ಅದರ ಸ್ವಾದದ ಪರಿಮಳ ಮೂಗಿಗೆ ಅಡರಿತು. ಚೆಲ್ಲಲು ಮನಸ್ಸು ಬಾರದೆ ಮೊದಲು ಅದರ ರುಚಿ ನೋಡಿದ. ಒಗರು ಒಗರಾಗಿದ್ದರೂ ಅದು ಅವನಿಗೆ ತುಂಬಾ ಹಿಡಿಸಿಬಿಟ್ಟಿತು. ಅದುವೇ ಜಗತ್ತಿನ ಮೊದಲ ಟೀ. ಗಾಳಿಯಲ್ಲಿ ತೇಲಿ ಬಂದಿದ್ದು ಟೀ ಎಲೆಯಾಗಿತ್ತು!

Advertisement

ಆಮೇಲೆ ಶೆನ್ನಾಂಗ್‌ ತನ್ನ ಪಾತ್ರೆಯಲ್ಲಿ ಬಿದ್ದ ಎಲೆಯ ಜಾತಕವನ್ನು ಪತ್ತೆ ಹಚ್ಚಿ ಅದರ ಗುಣ ವಿಶೇಷಗಳ ಅಧ್ಯಯನ ಮಾಡಿದ. ಅಲ್ಲಿಂದ ಟೀ ವಿದೇಶಿ ಪ್ರವಾಸಿಗರಿಂದಾಗಿ ಜಗತ್ತಿನಾದ್ಯಂತ ಹರಡಿತು.

– ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next