ಲಾಲ್‌ಬಾಗ್: ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆಗೆ ಅಗತ್ಯ ಜಮೀನನ್ನು ನೀಡಿರುವ ಭೂ ಮಾಲಕರಿಗೆ ಟಿಡಿಆರ್ ನೀಡುವಲ್ಲಿ ಆಗಿರುವ ಸಮಸ್ಯೆಗಳನ್ನು ಪರಿಹರಿಸುವ ನೆಲೆಯಲ್ಲಿ ಹಾಗೂ ತ್ವರಿತ ಪ್ರಕ್ರಿಯೆಯ ಮೂಲಕ ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರವನ್ನು (ಡಿಆರ್‌ಸಿ) ನೀಡುವ ಹಿನ್ನೆಲೆಯಲ್ಲಿ ಫೆ. 18ರಂದು ಟಿಡಿಆರ್ ಅದಾಲತ್ ಮಂಗಳೂರು ಪಾಲಿಕೆಯಲ್ಲಿ ನಡೆಸಲಾಗುವುದು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದರು.
ಮಂಗಳೂರು ಪಾಲಿಕೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಡಿಆರ್ ಕೋಶಕ್ಕೆ ನಾಲ್ಕು ಜನ ಸಹಾಯ ನಗರ ಯೋಜನಾಧಿಕಾರಿಗಳನ್ನು ನೇಮಕ ಮಾಡಿಕೊಂಡು ಟಿಡಿಆರ್ ನೀಡಲು ಹಾಗೂ ಭೂಮಾಲಕರಿಗೆ ಡಿಆರ್‌ಸಿ ನೀಡುವ ಪ್ರಕ್ರಿಯೆ ಚುರುಕುಗೊಳಿಸಲು ಕಾರ್ಯ ವಹಿಸಲಾಗಿದೆ ಎಂದರು.
ಟಿಡಿಆರ್ ಅದಾಲತ್ ಸಂದರ್ಭ ಮಾಲಕರು ಆರ್‌ಟಿಸಿ/ ಕ್ರಯ ಪತ್ರ (ಮಾಲಕತ್ವದ ದಾಖಲೆ), ಖಾತಾ ಪ್ರತಿ/ ಮ್ಯುಟೇಶನ್, ಸರ್ವೆ ನಕ್ಷೆ, ಋಣಭಾರ ರಾಹಿತ್ಯ ಪ್ರಮಾಣ ಪತ್ರ(ನಮೂನೆ-15) ಮೊದಲಾದ ಅಗತ್ಯ ದಾಖಲೆಗಳೊಂದಿಗೆ ಮನವಿ ಸಲ್ಲಿಸಬಹುದು. ಡಿಆರ್‌ಸಿ ನೀಡುವ ಸರಳೀಕೃತ ಪ್ರಕ್ರಿಯೆಯನ್ನು ಸಂಯೋಜಿಸಲು ಸಭೆ ನಡೆಸಲಾಗಿದೆ ಎಂದರು.
ಕೆಟಿಸಿಪಿ ತಿದ್ದುಪಡಿ ಕಾಯ್ದೆ (07-10-2021)ರ ಪ್ರಾರಂಭದ ದಿನಾಂಕದಿಂದ ಐದು ವರ್ಷ ಅಥವಾ ಅದಕ್ಕೆ ಮುಂಚಿತವಾಗಿ ರಸ್ತೆ ಅಭಿವೃದ್ಧಿಗಾಗಿ ಭೂಮಿ ಬಿಟ್ಟುಕೊಟ್ಟಿರುವರ ಬಗ್ಗೆ ವಿವರಗಳನ್ನು ಮನಪಾ ವೆಬ್‌ಸೈಟ್ ಹಾಗೂ ಟಿಡಿಆರ್ ಸೆಲ್‌ನ ನೋಟಿಸ್ ಬೋರ್ಡ್ ನಲ್ಲಿ ಪ್ರಚಾರ ಪಡಿಸಲಾಗುವುದು. ಪ್ರಕಟಿಸಲಾದ ವಿವರಗಳ ಬಗ್ಗೆ ಆಕ್ಷೇಪಣೆ ಇದ್ದಲ್ಲಿ 15 ದಿನಗಳ ಒಳಗೆ ಲಿಖೀತ ರೂಪದಲ್ಲಿ ಪಾಲಿಕೆ ಆಯುಕ್ತರಿಗೆ ಸಲ್ಲಿಸಬಹುದು ಎಂದು ಅವರು ಹೇಳಿದರು.
ಟಿಡಿಆರ್ ನಿಯಮದನ್ವಯ ಜಮೀನು ಸ್ವಾಧೀನ ಪಡಿಸಲು ಪ್ರಥಮವಾಗಿ ಜಮೀನಿನ ಹಕ್ಕುದಾರ ರಿಂದ ದಾಖಲೆ ಸಂಗ್ರಹಿಸಿ ದಾಖಲೆಗಳ ಅನುಸಾರ ಬಿಟ್ಟುಕೊಡಬೇಕಾದ ಜಮೀನನ್ನು ಮೋಜಣಿದಾರ ರಿಂದ ಅಳತೆ ಮಾಡಿಸಿ ನಿಖರವಾದ ವಿಸ್ತೀರ್ಣ ಕಂಡು ಹಿಡಿದು ಫಾರಂ 1ರ ಅಧಿಸೂಚನೆಯನ್ನು ಹೊರಡಿಸಲಾಗುವುದು. ಅನುಸೂಚನೆ ರಾಜ್ಯಪತ್ರದಲ್ಲಿ ಪ್ರಕಟಿಸಿ 30 ದಿನಗಳ ಕಾಲಾವಕಾಶದಲ್ಲಿ ಆಕ್ಷೇಪಣೆಗ ಳಿದ್ದಲ್ಲಿ ತಿಳಿಸುವಂತೆ ಸ್ಥಳೀಯ ಎರಡು ದಿನಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಆಕ್ಷೇಪಣೆಗಳಿಲ್ಲದ ಪ್ರಕರಣಗ ಳಲ್ಲಿ ಕಚೇರಿಯಿಂದ ಅಂಗೀಕಾರ ಆದೇಶ ಹೊರ ಡಿಸಿ ಪರಿತ್ಯಾಜನ ಪತ್ರ (ದಾನಪತ್ರ)ದ ಕರಡು ಪ್ರತಿ ತಯಾರಿಸಿ ಜಮೀನಿನ ಹಕ್ಕುದಾರರಿಗೆ ನೋಂದಾ ಯಿಸಿ ಕೊಡುವಂತೆ ನೀಡಲಾಗುವುದು. ನೋಂದಾ ಯಿಸಿದ ಪ್ರಕರಣಗಳಲ್ಲಿ ಟಿಡಿಆರ್‌ನ್ನು ನೀಡಲು ಮುಡಾ (ಮಂ. ನಗರಾಭಿವೃದ್ಧಿ ಪ್ರಾಧಿಕಾರ)ಕ್ಕೆ ಶಿಫಾರಸ್ಸು ಪತ್ರ ನೀಡಲಾಗುವುದು ಎಂದು ಹೇಳಿದರು.
ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಉಪ ಮೇಯರ್ ಸುಮಂಗಲಾ ರಾವ್, ಮನಪಾ ಮುಖ್ಯ ಸಚೇತಕ ಸುಧೀರ್ ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಶೋಭಾ ರಾಜೇಶ್, ಸಂದೀಪ್, ಲೀಲಾವತಿ ಪ್ರಕಾಶ್ ಉಪಸ್ಥಿತರಿದ್ದರು.
1,000ಕ್ಕೂ ಅಧಿಕ ಡಿಆರ್‌ಸಿ ಬಾಕಿ
ಪಾಲಿಕೆಯಿಂದ ಈ ಹಿಂದೆ 81,005 ಚ.ಮೀ. (2,001 ಸೆಂಟ್ಸ್) ಭೂಮಿಗೆ 485 ಡಿಆರ್‌ಸಿಗಳನ್ನು ನೀಡಲಾಗಿದೆ. ಹಿಂದಿನ ಇನ್ನೂ ಸುಮಾರು 1,000ಕ್ಕೂ ಅಧಿಕ ಡಿಆರ್‌ಸಿಗಳನ್ನು ನೀಡಬೇಕಾಗಿದೆ. ಪಾಲಿಕೆಯಿಂದ ಕಾನೂನು ತಿದ್ದುಪಡಿ ಆದ ಬಳಿಕ ಶಿಫಾರಸ್ಸು ಆದ 24 ಪ್ರಕರಣಗಳಲ್ಲಿ 11,685.258 ಚ.ಮೀ. ಜಮೀನನನು ಸ್ವಾಧೀನಪಡೆದು 23,370.516 ಚ.ಮೀ. ಟಿಡಿಆರ್‌ನ್ನು ಮಂಗಳೂರು ನಗರಾಭಿವೃದ್ಧಿ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದರು.