Advertisement
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ಈ ಕಾರ್ಯದಲ್ಲಿ ಶೇ.99.13 ಸಾಧನೆ ತೋರಿದೆ. ಸುಟ್ಟ ಅಥವಾ ದುರಸ್ತಿಗೆ ಬಂದ ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸಲು ಕೆಲವೊಮ್ಮೆ ವಾರಗಟ್ಟಲೆ ಹಿಡಿಯುತ್ತಿತ್ತು. ಇದಕ್ಕಾಗಿ ಹೆಸ್ಕಾಂ ಕಚೇರಿಗಳಿಗೆ ಜನರು, ರೈತರು ಅಲೆಯಬೇಕಿತ್ತು. ಕೆಲವೆಡೆ ಕೃತಕ ಅಭಾವ ಸೃಷ್ಟಿಸಿ ಇದಕ್ಕಾಗಿ ಲಾಬಿಯೇ ನಡೆಯುತ್ತಿತ್ತು. ಆದರೀಗ ಆ ಎಲ್ಲಾ ಅವ್ಯವಹಾರ ಹಾಗೂ ವಿಳಂಬಕ್ಕೆ ಕಡಿವಾಣ ಬಿದ್ದಿದೆ.
Related Articles
Advertisement
ವಿಜಯಪುರ ಜಿಲ್ಲೆಯಲ್ಲಿ ದುರಸ್ತಿಗೆ ಬಂದ 1289 ಪರಿವರ್ತಗಳ ಪೈಕಿ 1288ನ್ನು 24 ಗಂಟೆಯಲ್ಲಿ ಬದಲಾಯಿಸಲಾಗಿದೆ. ಉಳಿದಂತೆ ಹೆಸ್ಕಾಂ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಲ್ಲೂ ಶೇ.100 ಸಾಧನೆ ತೋರಿದೆ.
ಪರಿವರ್ತಕ ಬ್ಯಾಂಕ್: ಸಕಾಲದಲ್ಲಿ ಪರಿವರ್ತಕ ಬದಲಾವಣೆಗಾಗಿ ಟೋಲ್ ಫ್ರಿ ನಂಬರ್‌ಗೆ ಕರೆ ಮಾಡುತ್ತಿದ್ದಂತೆ ಯೂನಿಕ್ ಐಡಿ ನೀಡಲಾಗುತ್ತಿದೆ. 24 ಗಂಟೆಯಲ್ಲಿ ಪರಿವರ್ತಕ ಬದಲಾಯಿಸಲು ಅನುಕೂಲ ಆಗುವ ನಿಟ್ಟಿನಲ್ಲಿ ವಿಭಾಗ ಹಾಗೂ ಉಪ ವಿಭಾಗ ವ್ಯಾಪ್ತಿಯಲ್ಲಿ “ಪರಿವರ್ತಕ ಬ್ಯಾಂಕ್’ ಮಾಡಲಾಗಿದೆ. ಇದಕ್ಕಾಗಿ ಹೆಸ್ಕಾಂನ 121 ವಾಹನಗಳನ್ನು ಬಳಸಲಾಗುತ್ತಿದೆ. ಈ ಕಾರ್ಯಕ್ಕೆ ಹೆಚ್ಚುವರಿ ವಾಹನದ ಬೇಡಿಕೆಯಿದ್ದರೆ ಪಡೆಯಲು ಅನುಮೋದನೆ ಕೂಡ ನೀಡಲಾಗಿದೆ.
ಸೆಪ್ಟಂಬರ್ ತಿಂಗಳಲ್ಲಿ ಈ ಕಾರ್ಯಕ್ಕೆ ತೀವ್ರಗತಿಯ ಚಾಲನೆ ನೀಡಿದ ಪರಿಣಾಮ ಬೇಸಿಗೆ ವೇಳೆ ಅತಿಯಾದ ಒತ್ತಡದಿಂದ ವಿದ್ಯುತ್ ಪರಿವರ್ತಕಗಳು ದುರಸ್ತಿಗೆ ಬಂದರೆ ರೈತರಿಗೆ, ಜನರಿಗೆ ಅನಾನುಕೂಲವಾಗದಂತೆ ಅತ್ಯಂತ ಕಡಿಮೆ ಸಮಯದಲ್ಲಿ ಬದಲಾಯಿಸಲು ಸಾಧ್ಯವಾಗುವಂತಾಗಿದೆ.
51 ದುರಸ್ತಿ ಕೇಂದ್ರಗಳು: ಪರಿವರ್ತಕ ಬ್ಯಾಂಕ್‌ನೊಂದಿಗೆ ಅವುಗಳ ದುರಸ್ತಿಗೂ ಹೆಚ್ಚು ಒತ್ತು ನೀಡಲಾಗಿದೆ. ಸರ್ಕಾರದ ಎನ್‌ಜಿಇಎಫ್ 2 ಬೃಹತ್ ದುರಸ್ತಿ ಕೇಂದ್ರಗಳು ಸೇರಿದಂತೆ ಹೆಸ್ಕಾಂ ವ್ಯಾಪ್ತಿಯ 51 ಕಡೆಗಳಲ್ಲಿ ಕೇಂದ್ರಗಳನ್ನು ಗುರುತಿಸಿ ಅವುಗಳ ಮೂಲಕ ದುರಸ್ತಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಪ್ರತಿ ತಾಲೂಕಿಗೆ ಒಂದರಂತೆ ಈ ಕೇಂದ್ರಗಳಿವೆ. ಖಾಸಗಿ ಕೇಂದ್ರಗಳ ಮೂಲಕ ದುರಸ್ತಿಯಾದ ಪರಿವರ್ತಕಗಳನ್ನು ಹೆಸ್ಕಾಂನ ತಂತ್ರಜ್ಞರ ತಂಡ ಪರಿಶೀಲಿಸಿದ ನಂತರವಷ್ಟೇ ಬದಲಿಸಲು ಒಪ್ಪಿಗೆ ನೀಡಲಾಗುತ್ತಿದೆ. ಈ ಕಾರ್ಯದಿಂದ ಜನರು ಹೆಸ್ಕಾಂ ಕಚೇರಿಗಳಿಗೆ ಅಲೆಯುವುದೂ ತಪ್ಪಿದಂತಾಗಿದೆ.
ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು 24 ಗಂಟೆಯಲ್ಲಿ ವಿದ್ಯುತ್ ಪರಿವರ್ತಕಗಳ ಬದಲಾವಣೆ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಕಳೆದ ಮೂರು ತಿಂಗಳಲ್ಲಿ ಶೇ.99.13 ಸಾಧನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆಯಾಗಲಿದೆ. ಇದಕ್ಕಾಗಿಯೇ ಪ್ರತ್ಯೇಕ ಟೋಲ್ ಫ್ರಿ ನಂಬರ್ ನೀಡಲಾಗಿದೆ. ಕರೆ ಬಂದ 24 ಗಂಟೆಯೊಳಗೆ ವಿಳಂಬಕ್ಕೆ ಯಾವುದೇ ಆಸ್ಪದವಿಲ್ಲದಂತೆ ಈ ಕಾರ್ಯ ನಡೆಯುತ್ತಿದೆ. ಶೇ.100 ಸಾಧನೆ ಮಾಡುವ ಗುರಿಯೊಂದಿಗೆ ಕೆಲಸ ನಡೆಯುತ್ತಿದೆ.
– ಡಿ.ಭಾರತಿ, ವ್ಯವಸ್ಥಾಪಕ ನಿರ್ದೇಶಕಿ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿದ್ಯುತ್ ಪರಿವರ್ತಕ ದುರಸ್ತಿಗೆ ಉಚಿತ ಟೋಲ್ ಫ್ರಿ ನಂಬರ್ 18004254754
-ಹೇಮರಡ್ಡಿ ಸೈದಾಪುರ