ಭೋಪಾಲ್:ಸುಮಾರು 150 ಮಂದಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೋವಿಡ್ 19 ವಾರಿಯರ್ಸ್ ಹೆಸರಿನಲ್ಲಿ 20 ಸ್ಥಳಗಳ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ಎರಡು ಉದ್ಯಮ ಸಂಸ್ಥೆ ಮತ್ತು ಅದರ ಹಲವಾರು ಶಾಖೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು, ವಿಶೇಷ ಶಸ್ತ್ರಾಸ್ತ್ರ ಪಡೆ(ಎಸ್ ಎಎಫ್) ಸಿಬ್ಬಂದಿಗಳು ವಾಹನದಲ್ಲಿ ತೆರಳಿದ್ದರು. ವಾಹನದ ಮೇಲಿನ ಸ್ಟಿಕ್ಕರ್ಸ್ ನಲ್ಲಿ, ಮಧ್ಯಪ್ರದೇಶ ಸರ್ಕಾರ…ಕೋವಿಡ್ 19 ಆರೋಗ್ಯ ಇಲಾಖೆ ತಂಡ ನಿಮ್ಮನ್ನು ಸ್ವಾಗತಿಸುತ್ತದೆ” ಎಂದು ನಮೂದಿಸಲಾಗಿತ್ತು!
ಮೂಲಗಳ ಪ್ರಕಾರ, 20 ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆಸಿದ ದಾಳಿ ಮತ್ತು ಶೋಧದಲ್ಲಿ ನೂರಕ್ಕೂ ಅಧಿಕ ಸ್ಥಿರಾಸ್ತಿಯ ದಾಖಲೆಗಳ ಮಾಹಿತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
Related Articles
ಈ ಆಸ್ತಿಗಳು ಭೋಪಾಲ್ ಮತ್ತು ಸೇಹೋರೆ ಜಿಲ್ಲೆಗಳಲ್ಲಿದೆ. ಇದರಲ್ಲಿ ಎರಡು ಕ್ರಿಕೆಟ್ ಮೈದಾನವೂ ಸೇರಿದೆ. ಇದು ಕೆಲವು ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿಯಾಗಿದೆ. ಅಲ್ಲದೇ ಒಂದು ಕೋಟಿ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ದಾಳಿ ನಡಸಿದ ಎರಡು ಉದ್ಯಮ ಸಂಸ್ಥೆಗಳಲ್ಲಿನ Faith ಗ್ರೂಪ್ ನ ರಾಘವೇಂದ್ರ ಸಿಂಗ್ ತೋಮರ್ ಬಿಜೆಪಿಯ ಪ್ರಭಾವಿ ಮುಖಂಡರೊಬ್ಬರ ಜತೆ ಸಂಪರ್ಕ ಹೊಂದಿದ್ದಾರೆನ್ನಲಾಗಿದೆ. ಅವರು ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರದ ಕ್ಯಾಬಿನೆಟ್ ಸಚಿವರಾಗಿದ್ದಾರೆ ಎಂದು ವರದಿ ವಿವರಿಸಿದೆ.
ರಾಘವೇಂದ್ರ ಸಿಂಗ್ ತೋಮರ್ ಉದ್ಯಮದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ವಕ್ತಾರ ನರೇಂದ್ರ ಸ್ಲೌಜಾ, ಇತ್ತೀಚೆಗಷ್ಟೇ ಕ್ಯಾಬಿನೆಟ್ ಸಚಿವರೊಬ್ಬರು ಬಹಿರಂಗವಾಗಿಯೇ ರಾಘವೇಂದ್ರ ಸಿಂಗ್ ತೋಮರ್ ತನಗೆ ಕಿರಿಯ ಸಹೋದರನ ಸಮಾನ ಎಂದು ಹೇಳಿದ್ದರು. ಈಗ ಬಿಜೆಪಿ ಸಚಿವರು ಹಾಗೂ ತೋಮರ್ ನಡುವಿನ ಸಂಬಂಧದ ಬಗ್ಗೆ ಸ್ಪಷ್ಟಪಡಿಸಬೇಕಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ರಜನೀಶ್ ಅಗರ್ವಾಲ್, ಕಾನೂನು ಪ್ರಕಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಸುಳ್ಳು ಆರೋಪ ಮಾಡುವ ಮೂಲಕ ಬಿಜೆಪಿ ನಾಯಕರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.